ಸಂಬಂಧ : ನನ್ನ ಬದುಕಿನ ಹೈಪರ್‌ಲಿಂಕ್‌ಗಳ ಮೊದಲ ಕಥೆ ಓದಿ!

[ನಾನು ಬರೆದ ಮೊದಲನೇ ಕಥೆ ಇದು!  ಇಂದಷ್ಟೇ  – ೩೦.೯.೨೦೧೧- ನನ್ನ ಆತ್ಮೀಯ ಗೆಳೆಯನೊಬ್ಬ ಈ ಕಥೆಯನ್ನು ಪ್ರಕಟಿಸಿದ ಮಯೂರದ ಪ್ರತಿಯನ್ನು – ಆಗಸ್ಟ್‌ ೧೯೯೧-  ನಾಜೂಕಾಗಿ , ಹರಿದುಹೋದ ಹಿಂಪುಟವನ್ನೂ ಜೋಡಿಸಿ – ಕೊರಿಯರ್‌ ಮೂಲಕ ವಾಪಸು ಮಾಡಿದ. ಈಗ ನೋಡಿದರೆ ಈ ಕಥೆ ಒಂದು ರೀತಿಯಲ್ಲಿ ಕೊಲಾಜ್‌ ಕಥೆ. ನನ್ನ ಹಲವು ಕವನಗಳ, ಇನ್ನೊಂದು ಕಥೆಯ ಕೊಂಡಿಗಳನ್ನು ಇಲ್ಲಿ ಕಾಣಬಹುದು. ಕವನಗಳೂ ಈ ಕಥೆಗಿಂತ ಮೊದಲು ಮತ್ತು ಆಮೇಲೆ ಬರೆದವು. ಇನ್ನೊಂದು ಕಥೆಯನ್ನು ನಾನು ಆಮೇಲೆ ಬರೆದಿದ್ದು. ಹೈಪರ್‌ಲಿಂಕ್‌ಗಳ ಮೂಲಕ ನೀವು ಅಲ್ಲಿ ಇಲ್ಲಿ ಸಾಗಿ ಓದಿದರೆ, ಈ ಕಥೆಯ ಇತರೆ ಆಯಾಮಗಳನ್ನೂ ಹುಡುಕಿಕೊಳ್ಳಬಹುದು! ಕಥೆ, ಕವನ ಎಂದಮೇಲೆ ಅಲ್ಲಲ್ಲಿ ಕಲ್ಪನೆ ಮತ್ತು ನಿಜಮಾಹಿತಿಯನ್ನು ತಿರುಚುವ ಸಾಧ್ಯತೆ ಇರುತ್ತದೆ ಬಿಡಿ! ಎಲ್ಲ ನಿಮಗೆ, ನಿಮ್ಮ ಭಾವುಕತೆಗೆ, ಕಲ್ಪನೆಗೆ  ಬಿಟ್ಟ ವಿಚಾರ. ಬದುಕಿನ ಹೈಪರ್‌ಲಿಂಕ್‌ಗಳನ್ನು ಜೋಡಿಸಿಕೊಂಡು ಒಂದೇ ಪಾತಳಿಯಲ್ಲಿ ನೋಡುವುದು ನಿಜಕ್ಕೂ ಎಂಥ ವಿಚಿತ್ರ ಅನುಭವ ಅನ್ನಿಸುತ್ತಿದೆ……   ಕಥೆಯನ್ನು ಮತ್ತೆ ಅಕ್ಷರಜೋಡಿಸುತ್ತಿದ್ದಂತೆ ನನ್ನ ಹಲವು ಕವನಗಳು ನೆನಪಾದವು… ಈ ಒದ್ದೆ ನೆನಪಿಗೆ ಕಾರಣವಾದ ಪುಸ್ತಕ ರಕ್ಷಕ ಹಳೆಯ ಸ್ನೇಹಿತನಿಗೆ, ಈ ನೆನಪುಗಳಿಗೆ ಕಾರಣೀಭೂತವಾದ ಮಾಜಿ ಪ್ರೇಯಸಿಗೆ ನನ್ನ ವಂದನೆಗಳು!!  ನನ್ನೊಳಗಿನ ಕಥೆಗಾರನನ್ನು ಹೊರಗೆಳೆದ ಶಿರಸಿಯ ಆ ಪುಟ್ಟ ಮನೆಯ ಅಟ್ಟಕ್ಕೂ ನನ್ನ ನೆನಪುಗಳು…. ಉಮರ್‌ ಖಯ್ಯಾಮ್‌ ಜಿಂದಾಬಾದ್‌! ]

ಅವಳನ್ನು ನಾನು ಪ್ರೀತಿಸಬೇಕೆಂದುಕೊಂಡಿರಲಿಲ್ಲ. ದ್ವೇಷಿಸಲಿಕ್ಕೂ ಅವಳನ್ನು ಆರಿಸಿರಲಿಲ್ಲ. ಯಾವ ರೀತಿಯಲ್ಲಿ ಟ್ರೀಟ್‌ ಮಾಡಿದರೆ ಅವಳ ಉತ್ತರ ಹ್ಯಾಗಿರುತ್ತೆ ಎನ್ನು ಕಾತರ ಮಾತ್ರ. ಅವಳಿಗೊಂದು ಕಾರ್ಡು ಹಾಕಿದ್ದೆ. ಒಂದೇ ವಾರದಲ್ಲಿ ಉತ್ತರ. ಅಷ್ಟು ಮಜವಾಗಿ ಯಾರೂ ಬರೆದಿರಲಿಲ್ಲ. ಅದನ್ನು ನಾಟಕೀಯ ಎಂದೂ ಕರೆಯುವಂತಿರಲಿಲ್ಲ. ನಾನು ಪ್ರತ್ಯುತ್ತರ ಬರೆದೆ. ಅವಳು ಮತ್ತೆ ಬರೆದಳು. ನಾನು ಮರುತ್ತರ ಕೊಟ್ಟೆ. ಅವಳು ಮಾರುತ್ತರ ಕಳಿಸಿದಳು. ನಾನು ಮುತ್ತು ರವಾನಿಸಿದೆ. ಅವಳು ಸ್ನೇಹವನ್ನು ಉಡಾಯಿಸಿದಳು. ನಾನು ಅವಳ ಗಲ್ಲವನ್ನು ಚುಡಾಯಿಸಿದೆ.

ನಾಲ್ಕು ತಿಂಗಳುಗಳಲ್ಲಿ ಎಲ್ಲವೂ ಮುಗಿದವು – ಭೇಟಿಯಾಗುವುದೊಂದನ್ನು ಬಿಟ್ಟು. ಅವಳಿದ್ದ ಕಾಲೇಜಿಗೆ ಹೋದಾಗ ಮಟಮಟ ಬಿಸಿಲು ಮೊಟೆಯುತ್ತಿತ್ತು. ಘಾಟಿ ಕೆಳಗಿನ ಬೆವರಿನ ವಾತಾರವಣದಲ್ಲಿ ನಾವು ಭೇಟಿಯಾದೆವು. ಅವಳಿಗೆ ಗಣಿತ ಪರೀಕ್ಷೆ. ತುಂಬ ಕಷ್ಟದ್ದಂತೆ. `ಈ ಸಲದ ಪರೀಕ್ಷೆಯಲ್ಲಿ ಕ್ಲಿಯರ್‌ ಮಾಡ್ಕೊಳ್ಳದಿದ್ರೆ ಮನೇಲಿ ಕಾಲೇಜಿಗೇ ಕಳಿಸಲ್ಲ’ ಎಂದಳು. ಪೇಪರೇನೋ ಚೆನ್ನಾಗಿತ್ತಂತೆ. ಇವಳು ಸರಿಯಾಗಿ ಓದಿಕೊಂಡಿರಲಿಲ್ಲವಂತೆ. ಬೇರೆ ಯೂನಿವರ್ಸಿಟಿಗಿಂತ ಮಂಗಳೂರಿನ ಗಣಿತ ಕಬ್ಬಿಣದ ಕಡಲೆಯಂತೆ.

ಇವಳು ಉಕ್ಕಿನ ಕಡಲೆ ಎಂದುಕೊಂಡೆ. ಮತ್ತೆಲ್ಲೋ ಮಾತು ಹರಿಯಿತು. ನಾನು ಅವಳ ಮನೆಗೆ ಬರಬೇಕೆಂಬ ಒತ್ತಾಯ. ಒಲ್ಲೆ ಎಂದರೆ ಅಳುಮುಖ. ವಾಪಸು ಬರಲೇಬೇಕಾಗಿತ್ತು. ವಿದ್ಯಾರ್ಥಿ ಸಂಘಟನೆಎಂದರೆ ಸಾಮಾನ್ಯ ಅಲ್ಲವಲ್ಲ….. ನಿರಂತರ ಚಟುವಟಿಕೆ. ಇವಳ ಮಾತಿನ ರಭಸಕ್ಕೆ ನಾನೆಲ್ಲಿ ಜಾರಿದೆ ಅಂತ ಗೊತ್ತಾಗಲಿಲ್ಲ. ಮರುದಿನ ಬೆಳಿಗ್ಗೆ ಬಸ್‌ಸ್ಟ್ಯಾಂಡಿಗೆ ಬರಲು ಸೂಚನೆ ಕೊಟ್ಟಳು. ನಾನು ಹ್ಞೂ ಅಂದೆ.

ಕ್ಯಾಂಟೀನಿಗೆ ಹೋಗಿ ಬನ್ನು ತಿಂದೆವು. ಬಿಲ್ಲು ಕೊಡಲು ಕಸರತ್ತು ನಡೆಯಿತು. ನಾಳೆ ಟಿಕೆಟ್‌ ತಗೊಳ್ಳುವಾಗಲೂ ಹೀಗಾಗಿಬಿಡುತ್ತಲ್ಲಾ ಎಂಬ ಗಾಬರಿಯಲ್ಲಿ ನಾನು ಮುಳುಗಿದೆ. ಅವಳು ಬೈಬೈ ಎಂದು ಹಾಸ್ಟೆಲಿನ ಕಡೆ ನಡೆದಿದ್ದೇ……..

ಬೆಳಿಗ್ಗೆ ಚಳಿ ಇರಬಹುದು ಎಂದುಕೊಂಡಿದ್ದೆ. ಉಹ್ಞು, ಅವಳೂ `ಉಸ್‌’ ಎಂದು ಉಸಿರು ಬಿಡ್ತಾ ಬಂದಳು. ಬಗಲಲ್ಲಿ ದೊಡ್ಡ ಬಾಕ್ಸ್‌. ಬಸ್ಸಿನಲ್ಲಿ ತೊಡೆಯ ಮೇಲೇರಿದ ಆ ಬಾಕ್ಸ್‌ ಏನೆಂದು ಕೇಳಿದೆ. ಗೋಡೆ ಗಡಿಯಾರ, ತಿಂಗಳಾ ಒಂದು ರೂಪಾಯಿ ಕಟ್ಟಿ ಡ್ರಾ ಅಂತೆ. ಮೊದಲನೇ ಡ್ರಾದಿಂದ ಇವಳ ಅದೃಷ್ಟ ಖುಲಾಯಿಸಿತು. ಪ್ರಯಾಣದುದ್ದಕ್ಕೂ ಒಂದ್ರುಪಾಯಿ ಗಡಿಯಾರವೇ ಮಾತಿನ ವಿಷಯವಾಗುತ್ತೇನೋ ಎಂದು ಹೆದರಿದ್ದೆ. ಬೇರೆ ಬೇರೆ ವಿಷಯಗಳ ಬಗ್ಗೆ ಮಾತಾಡಿದೆವು. ಅವಳ ಅಪ್ಪ, ಅಣ್ಣ, ಅಮ್ಮ ಕಣ್ಣಿನಲ್ಲಿ ಮೂಡಿದರು. ನಾನೂ ಪ್ರಯತ್ನಿಸಿದೆ. ಯಾರಿಗೆ ಯಾರುಂಟು? ಮಾರಾಯ್ತಿ ನಾನು – ನೀನು ಎಂಥ ಸಂಬಂಧ ಬೆಳೆಸ್ತಿದೇವೆ..ಯಾಕೆ ಹೀಗೆಲ್ಲ ಮಾತು – ಆತ್ಮೀಯತೆ – ಎಲ್ಲ ವಿಚಾರಗಳ ಚರ್ಚೆ ನಡೆಯಿತು. ರಬ್ಬರ್‌ ತೋಟವನ್ನೂ ಪರಿಚಯಿಸಿದಳು.

ಮಡಿಕೇರಿ ತಲುಪಿದಾಗ ಹನ್ನೆರಡು ಗಂಟೆ. ಅಲ್ಲಿಂದ ಖಾಸಗಿ ಬಸ್ಸು ತಿರುವುಗಳಲ್ಲಿ ಜಾರುತ್ತ ಹೊರಟಾಗ ಏನೋ ಖುಷಿ. ಅವಳಿಗೆ ಒತ್ತಿ ಕೂತೆ. ಬಸ್‌ ನಿಂತಾಗ ಅವಳ ಅಪ್ಪ ಕರೆದರು. ನಾನು ನೋಡಿದೆ….. ಪುಟ್ಟ ಚಾರ್ಲಿ ಚಾಪ್ಲಿನ್‌ ಥರ….. ಆದ್ರೆ ತೆಳ್ಳಗಿದ್ದರು. ಇವಳಿಗೆ ಸಂಭ್ರಮ. `ಅಪ್ಪಂಗೆ ಆಶ್ಚರ್ಯ ಆಗುತ್ತೆ’ ಎಂದು ಉಸುರುತ್ತಾ ಇಳಿದಳು. ಸ್ವಲ್ಪ ದೂರ ಮಣ್ಣುದಾರಿ ಹತ್ತಿ ಗೇಟು ದಾಟಿದೆವು. ಅಮ್ಮ ಇರಬೇಕು- ಅವರೂ ಪುಟ್ಟಗೆ. `ಯಾರು’ ಎಂಬ ಪ್ರಶ್ನೆ ಹೊತ್ತ ನಗು. ನಿಮಗೇನು ಗೊತ್ತು – ಇವಳ ಜೀವದ ಗೆಳೆಯ…. ಒಂದೇ ತಿಂಗಳಲ್ಲಿ ಹಣೆಗೆ ಹಣೆ ತಟ್ಟೋ ಸ್ನೇಹ ಬೆಳೆದಿದೆ….. ನಾನೂ ನಗುವ ಸಾಹಸ ಮಾಡಿ ಬೆಂಚು ಹಿಡಿದೆ. ಕಾಫಿಯ ಬಟ್ಟಲಿನಲ್ಲಿ ಇವಳ ಮುಖ ಕಾಣಿಸಿತು.

ಉತ್ಸಾಹದ ಭರದಲ್ಲಿ ಅಲ್ಲಿ ಇಲ್ಲಿ ಕರೆದುಕೊಂಡು ತಿರುಗಿದಳು. ಗಿಡ, ಬಳ್ಳಿ, ಬಾವಿ, ಹೂವು, ಕೆರೆ, ಗದ್ದೆ, ತರಕಾರಿ, ನಾಯಿಮರಿ, ಬೆಕ್ಕು – ಎಲ್ಲ ತೋರಿಸಿದಳು. ಪೆಟ್ಲಕಾಯಿ ಹಿಡಿದು ಅವಳ ತಲೆಗೆ ಹೊಡೆಯುತ್ತಾ ನಡೆದೆ. ಅವಳದ್ದು ಅದೇ ಸೊಗಸು. `ನಾನೂ ಅದೇ ಮೂಡ್‌ನಲ್ಲಿ ಅವಳನ್ನು ನೋಡಿದೆ. .. ಕಾವೇರೀ ತಟದಲ್ಲಿ ನಾನು – ಅವಳು ಇಬ್ರೇ ಇದ್ದುಬಿಟ್ಟರೆ ಯಾರಿಗೆ ಯಾರುಂಟು ಎಂಬುದು ನಿಚ್ಚಳವಾಗಿ ಬಿಡುತ್ತಿತ್ತು. ನನ್ನ ಬಗ್ಗೆ, ಬಡತನದ ಬಗ್ಗೆ, ಹಸಿವಿನ ಯಾತನೆಯ ಬಗ್ಗೆ, ಸಂಘಟನೆಯ ಆದರ್ಶಗಳ ಬಗ್ಗೆ, ಅವಳಿಗೆ ಹೇಳಬೇಕಿತ್ತು. ಎದೆಯೊಳಗೆ ಎದೆಯಿರುವ ನನ್ನ – ಅವಳಂಥವರಿಗೆ ಹೀಗೆ ನಡೆದಾಡಲು ಸಾಧ್ಯ.

ತರಕಾರಿ ಗಿಡಗಳಿಗೆ ಬಾವಿಯಿಂದ ನೀರೆತ್ತಿದೆವು. ಕಾಫಿ ತೋಟದಲ್ಲಿ ಸುತ್ತಿದೆವು. ದೊಡ್ಡ ದೋಣಿ ಮಾಡಲು ಸೂಕ್ತವಾದ ಮರದ ಸನಿಹ ಬಂದು ನಿಂತೆವು….. ಇವಳಿಗೊಂದು ಮುತ್ತು ಕೊಟ್ಟುಬಿಡಲೇ…. ಬೇಡ… ಇದು ವ್ಯವಹಾರ ಬೇರೆಯಾಯಿತು… ಅವಳಿಗೆ ಚೆಸ್‌ ಆಡಲು ಬೋರ್‌. ಬೇರೆ ನನಗೆ ಗೊತ್ತಿಲ್ಲ. ಅರ್ಧಕ್ಕೆ ನಿಲ್ಲಿಸಿ ಮಾತಿಗೆ ಮತಾಪು ಹಚ್ಚಿದಳು. ರೇಡಿಯೋ ಕಿವಿ ಬಾಯಿ ಮುಚ್ಚಿ ಕೂತಿತು. ಚಳಿಯಲ್ಲದ ಬಿಸಿಲಲ್ಲದ ಗಾಳಿಯೊಳಗೆ ನಾನು ಹಗೂರ ಕೇಳುತ್ತಿದ್ದೆ… ಅವಳು ಹೊಸಿಲ ಮೇಲಿದ್ದರೆ ನಾನು ಬಿಸಿಲಿಗೆ ಮೈಯೊಡ್ಡಿ ಕಟ್ಟೆ ಹಿಡಿದೆ. ಕಟ್ಟೆಯ ಮೇಲೆ ಕುಳಿತರೆ ಅಂಗಳಕ್ಕೆ ಇಳಿದೆ. ಸಾಮೀಪ್ಯದಂತೆ ನೋಟವೂ ಮುಖ್ಯವಾಗಿ ನಾನು ಅವಳ ಮುಖಕ್ಕೆ ಮುಖ ಕೊಟ್ಟೆ. ಯಾವಾಗಲೂ ಏನೋ ಕುತೂಹಲದ ಸರಕು….. ಅವಳ ಪತ್ರಗಳಲ್ಲಿ ಪರಾಗವನ್ನು ನೋಡಿದ್ದೆ….. ಪದಗಳಲ್ಲಿ ಮಕರಂದವೇ ಇರಬೇಕೆನಿಸಿತು. ಅಥವಾ ನಾನು ದುಂಬಿಯಾಗಿದ್ದಕ್ಕೇ ಹೀಗೆ ಭ್ರಮೆಯೋ? ಅಪ್ಪ – ಅಮ್ಮ ತೋಟದ ಕೆಲಸ – ಮನೆಗೆಲಸಗಳಲ್ಲಿ ಓಡಾಡಿಕೊಂಡಿದ್ದರು. ಅಮ್ಮ ಪಕ್ಕದ ಜಮೀನ್ದಾರನ ಬೇಲಿ ಜಗಳದ ಮಾತಾಡಿದರು. ಹ್ಞೂಗುಡುತ್ತ ಕೇಳಿದೆ. ಇವಳಿಗೆ ಇದೆಲ್ಲ ರಗಳೆ ಇವನಿಗ್ಯಾಕೆ ಎಂದು ರೇಗಿತು. ಅಮ್ಮನ ಅಹವಾಲನ್ನು ಕೇಳಬೇಕೇ ಹುಡುಗೀ ಅಂತೆಲ್ಲ ಹುಡುಗು ಬುದ್ಧಿವಾದಹೇಳಿದೆ. ಊಟಕ್ಕೆ ಕರೆ ಬಂತು. ಕಳಲೆ ಪಲ್ಯ, ಕೊರೆವ ನೀರು ಮತ್ತು ಮಿಯಾಂವ್‌ ಎಂಬ ಬೆಕ್ಕು…. ಕಣ್ಣಿನಲ್ಲಿ ಪ್ರೀತಿ ಅಥವಾ ನೀನು…..

ಮಧ್ಯಾಹ್ನ ಅಪ್ಪನ ಮಂಚದ ಮೇಲೇರಿ ಮಾತಿನ ಬೆಟ್ಟ ಕಡಿಯತೊಡಗಿದೆವು. ಚಿಕ್ಕ ಜಾಗದಲ್ಲೂ ಎಷ್ಟೋ ದೂರ ಕುಳಿತಿದ್ದೆವು. ರೇಡಿಯೋ ಕಿರುಗುಡುತ್ತಿತ್ತು.. ನಾನು ಪಾಪಿನ್ಸ್‌ ಬಿಚ್ಚಿದೆ. ಬಾರೇ ಎಂದು ಕರೆದೆ. ಅಂಗೈಯಲ್ಲಿ ಅಂಗೈ. ಬೆಟ್ಟದಂತೆ ಮಾತು… ದಾರಿಯಂತೆ ಮೌನ…. ಸುಖ ಕೊಟ್ಟ ಮುತ್ತು…. ಒಂದರ್ಧ ಗಂಟೆ ಹಾಗೆಯೇ … ಅವಳನ್ನು ಅವಚಿಕೊಂಡು, ಬೆನ್ನ ಮೇಲೆ ಒರಗಿದೆ. ನನ್ನ ಬೆರಳು ಹಿಡಿದು ಕಣ್ಣಿಗೆ ಒತ್ತಿಕೊಂಡಳು. ಇವಳಿಗೆ ಸಂಕೋಚವಿಲ್ಲ, ಇವಳಿಗೆ ಬಿಗುಮಾನವಿಲ್ಲ….. ಇವಳ ಮನೆಯ ಸಾಕ್ಷಿಯಲ್ಲೇ ಹೀಗೆ ಸರಾಗವಾಗಿ ಸಂತೋಷದಿಂದಗೆಳೆತನ ಕೊಟ್ಟೆ – ತಗೊಂಡೆ ಎಂಬ ಸಮಾಧಾನ. ಅಮ್ಮ ಕಾಫಿ ತಂದರು. ಮತ್ತವಳೇ ಕಾಣಿಸಿದಳು. ನಾನೊಬ್ಬ ಅಪರಿಚಿತ ಹಾಡುಗಾರನಾಗಿದ್ದವನು ಕಥೆಗಾರನಾಗಿ ಬೀಗತೊಡಗಿದೆ.

ಎಲ್ಲಿಂದ ಎಲ್ಲಿಗೆ ಬಂದೆವೆಂದು ಇಬ್ಬರಿಗೂ ಗೊತ್ತಾಗಲಿಲ್ಲ. ಅಣ್ಣ ಎಲ್ಲಿ ಎಂಬ ಅನಗತ್ಯ ಪ್ರಶ್ನೆ ಕೇಳಿದೆ. ಏಪ್ರಿಲ್‌ ರಜೇಲಿ ಬರ್‍ತಾನಷ್ಟೆ ಎಂದಳು. ಅವನು ತಂದಿಟ್ಟಿದ್ದ ಸ್ಪೋರ್ಟ್ಸ್‌‌ಸ್ಟಾರ್‌ಗಳನ್ನು ತಿರುವಿ ಹಾಕಿದೆ. ಕಾರ್ಪೋವ್‌, ಕಾಸ್ಪರೋವ್‌ ಆಡುತ್ತಿದ್ದರು… ಪ್ರಶಾಂತ ವಾತಾವರಣ. ಹೇಳಿದ್ದೆ: ಈ ಲೋಕ ಅದೆಷ್ಟು ಫ್ರೆಷ್‌ ಮಾರಾಯ್ತಿ…. ಶಬ್ದಲೋಕದ ಭ್ರಮೆಗೆ ನಾನು ಸೋತುಹೋಗಿದ್ದೆ…. ಈಗ ಸುಖ ಅನ್ನಿಸ್ತಿದೆ. ನಾವೀಗ ಎಲ್ಲಿದ್ದೇವೆಯೇ ? ಸ್ನೇಹದಿಂದ ಇನ್ನಷ್ಟು ಸ್ನೇಹಕ್ಕೆ ತಿರುಗಿದ್ದೇವೋ…. ಪ್ರೇಮದ ಹೇರ್‌ಪಿನ್‌ ಕರ್ವಿನಲ್ಲಿ ಹೊರಳಿದ್ದೇವೆಯೋ? ನನ್ನಸ್ನೇಹದ ಜೊತೆಗೆ ಸಂಧಾನವಾಗಲಿಕ್ಕೆ ನಿನ್ನ ಹೃದಯ ಒಪ್ಪುತ್ತಾ…. ? ಏನೇನೋ ಕೇಳಬೇಕೆಂಬ ಒತ್ತಡಕ್ಕೆ ನಾನು ಮಣಿಯಲಿಲ್ಲ. ನಾನು `ಈ ಜಗತ್ತಿನ ಸರ್ವ ಸರಹದ್ದುಗಳ ಮೀರಿ ನಮ್ಮ ಸಂಬಂಧಗಳು ಸಿಡಿಯುತ್ತಿವೆ’ ಎನ್ನಲಿಲ್ಲ. `ನನ್ನೊಳಗೀಗ ನೂರಾರು ಯುದ್ಧಗಳು ಕುದಿಯುತ್ತಿವೆ’ ಎನ್ನಲಿಲ್ಲ. ಕೊಡಗಿನ ಈ ಕಣಿವೆಯಲ್ಲಿ ನನ್ನೊಳಗಿನ ಅಬ್ಬರ ಸುಮ್ಮಗಾಯಿತು.

ಸಂಜೆಗೆ ಲಾಟೀನು ಬಂತು. ನಮ್ಮ ಕಣ್ಣುಗಳೂ ಹೊತ್ತಿಕೊಂಡವು. ಅಪ್ಪ ಅಮ್ಮ ಬಿಡುವಾಗಿ ಬಂದು ಕೂತರು. ಮನೆ, ಮಳೆ, ಬೆಳೆ, ರಾಜಕೀಯ, – ಕೊನೆಗೆ ನಳಿಗೆ ಕೋವಿಗಳ ಮಾತಾಡಿದೆವು. ನನ್ನ ಇತಿಹಾಸ ಅಪ್ಪನಿಗೆ ಬೇಕಾಗಿರಲಿಲ್ಲ. ಆತ ಬರೀ ವರ್ತಮಾನದ ಬಿಸಿಲು ಕಾಯಿಸಿಕೊಳ್ಳುತ್ತಿದ್ದರು. ಇವಳ ಸುಖವೇ ತಮ್ಮ ಸುಖ ಎಂದರು. ಇವಳ ಸ್ನೇಹಿತರೇ ತಮ್ಮ ಬಾಂಧವರು ಎಂದರು. ನಾನು ಎಲ್ಲಿಂದಲೋ ತಿರುಗುತ್ತ ಬಂದ ಇವಳ ಜತೆಗಾರನಾದೆ. ಅಪ್ಪ ಅಮ್ಮಂದಿರ ಸುಖ ದುಃಖ ಕೇಳುವ ಹುಡುಗನಾದೆ.

ಕೊನೆಗೆ ರಾತ್ರಿ ಬಂತು. ಮೂರು ಕಂಬಳಿಗಳನ್ನು ಹೊದ್ದು ಇವಳಿಗೆ ಗುಡ್‌ನೈಟ್‌ ಆಶಿಸಿ ಮುದುರಿಕೊಂಡೆ…. ಹೊರಗೆ ಮಂಜು… ಕಾವೇರಿಯಿಂದ ಶಬ್ದ… ಕಣ್ಣಿನಲ್ಲಿ ಪ್ರೀತಿ ಅಥವಾ ನೀನು…

ಮರುದಿನ ಯಥಾ ಪ್ರಕಾರ ಮಾತುಗಳು. ಕಥೆಗಳು. ಗಿಡಗಳಿಗೆ ನೀರು ಹಾಕುತ್ತ `ನೋಡು, ಇವಕ್ಕೆ ಜೀವದ ನೀರು ಕೊಡ್ತಿದ್ದೇನೆ’ ಎಂದಳು. `ನನಗೂ ಕೊಡು’ ಎಂದೆ. ಕೊಟ್ಟಿಲ್ವಾ ಮಾರಾಯ ಎಂದವಳೇ ಬೊಗಸೆಯಲ್ಲಿ ಎರಚಿದಳು.

ಐದು ದಿನಗಳ ನಂತರ ವಾಪಸಾಗಲು ಹೊರಟೆ. ನಾನು ನೋಡ್ತಿದ್ದಂತೇ ಚಳಿಗಾಲ ದಪದಪ ಹೆಜ್ಜೆಯಿಟ್ಟು ಬಂದಿತ್ತು.. ಕೊಡಗಿನ ನೀರವ ರಾತ್ರಿಗಳು, ಬೆಚ್ಚಗಿನ ಹಗಲುಗಳು ಇವಳಷ್ಟೇ ಗಾಢವಾಗಿ ಪ್ರಿಯವಾದವು. ಇರಿ ಸ್ವಲ್ಪ ದಿನ ಎಂದು ಅಪ್ಪ ಅಮ್ಮ ಒತ್ತಾಯಿಸಿದರು. ನಾನು ನಿಲ್ಲಲಿಲ್ಲ. ಅವಳು ನನಗೋಸ್ಕರ ಗುಲಾಬಿ ಮತ್ತು ಕ್ಯಾಕ್ಟಸ್‌ನ ರೆಂಬೆ ಮುರಿದು ಪ್ಯಾಕ್‌ ಮಾಡಿಕೊಟ್ಟಳು…. ನನ್ನ ದಿನಚರಿ ಪುಸ್ತಕ ಕೊಟ್ಟು ಏನಾದರೂ ಬರೆಯಲು ಹೇಳಿದೆ… `ನನ್ನ ನಿನ್ನ ಭೇಟಿ ಶೀಘ್ರದಲ್ಲಾಗಲಿ’ ಎಂದು ಬರೆದಳು.

ಬಸ್‌ ನಿಲ್ದಾಣಕ್ಕೆ ಹೆಜ್ಜೆ ಹಾಕುತ್ತಿದ್ದಾಗ ಕಡುಗೆಂಪು ಬಣ್ಣದ ದಪ್ಪ ಎಲೆಯೊಂದು ಕಣ್ಣಿಗೆ ಬಿತ್ತು. ಅದನ್ನು ಅವಳು ಬರೆದ ಹಾಳೆಯಲ್ಲಿ ಇಟ್ಟುಕೊಂಡೆ. ಅವಳ ಕೆಂಪು ಛಾಯೆಯ ಕನ್ನಡಕದ ಒಳಗಿಂದ ನೀರಹನಿಗಳು…. ನಾಣು ಸುಮ್ಮನೇ ನಿಂತು ಬಸ್ಸಿನ ದಾರಿ ನೋಡಿದೆ. ಏನೋ ಕೇಳಿದೆ. ಅವಳು ಅರ್ಥ ಮಾಡಿಕೊಡು ಪತ್ರ ಬರೀತೀನಿ ಎಂದಳು.

ಅವಳನ್ನು ನಾಣು ಪ್ರೀತಿಸಿಬೇಕೆಂದುಕೊಂಡಿರಲಿಲ್ಲ. ದ್ವೇಷಿಸಲಿಕ್ಕೂ ಅವಳನ್ನು ಆರಿಸಿರಲಿಲ್ಲ. ಯಾವ ರೀತಿಯಲ್ಲಿ ಟ್ರೀಟ್‌ ಮಾಡಿದರೆ ಅವಳ ಉತ್ತರ ಹೇಗಿರುತ್ತೆ ಅನ್ನೋ ಕುತೂಹಲ ಇತ್ತು. ಅವಳಿಗೆ ಕಾಗದ ಬರೆದೆ. ಅವಳಷ್ಟು ಮಜವಾಗಿ ಯಾರೂ ಬರೆದಿರಲಿಲ್ಲ ಉತ್ತರವನ್ನು. ನಾಟಕೀಯವೂ ಆಗಿರಲಿಲ್ಲ. ನಾನು ಪ್ರತ್ಯುತ್ತರ ಬರೆದೆ. ಮಾರುತ್ತರ ಕಳಿಸಿದಳು. ನಾನು ಈ ಸಲವೂ  ಮುತ್ತು ರವಾನಿಸಿದೆ- ಕರಾರುವಾಕ್ಕಾಗಿ. ಅವಳು ಈ ಸಲ ಪ್ರೇಮವನ್ನು ಉಡಾಯಿಸಿದಳು.

ನಾಲ್ಕು ವರ್ಷಗಳಲ್ಲಿ ಎಲ್ಲವೂ ಮುಗಿದವು; ನಮ್ಮ ಭೇಟಿಯಾಗುವುದೊಂದನ್ನು ಬಿಟ್ಟು. ಅವಳಿದ್ದ ಹಾಸ್ಟೆಲಿಗೆ ಹೋದಾಗ ಬಿಸಿಲು ಮಟಮಟ ಮೊಟೆಯುತ್ತಿತ್ತು. ಸಮುದ್ರದ ಅಂಚಿನ ಬೇಸಗೆ ಧಗೆಯಲ್ಲಿ ನಾವು ಭೇಟಿಯಾದೆವು. ಅವಳ ಮದುವೆಯ ಕಥೆ ಬಗ್ಗೆ ಅವಳೇನೂ ಹೇಳಲ್ವಂತೆ. `ನೀನು ಹೀಗೇ ಕೂತಿದ್ರೆ ನಾನು ಏನೂ ಮಾತಾಡಲ್ಲ’ ಎಂದಳು.

ಇವಳು ಉಕ್ಕಿನ ಕಡಲೆ ಎಂದುಕೊಂಡೆ.

ಈಗ ಅವಳ ಹೊಸ ಮನೆಗೆ ಹೋದ್ರೆ ಮಾತಿನ ಮಕರಂದ ಸಿಗಲ್ಲ. ಅವಳು ಬೋರ್ನ್‌‌ವಿಟಾ  ಮಾಡಿ ತರುತ್ತಾಳೆ. ಅವಳ ಅಪ್ಪ ಅಮ್ಮ ಅಣ್ಣ ಈಗ ಮತ್ತೆ ನನ್ನ ಕಣ್ಣಿನಲ್ಲಿ ಮೂಡುತ್ತಾರೆ. ಅವಳಿಗೆ ಕಾಣಿಸೋದಿಲ್ಲ. ಕಂಡರೆ ಬಹುಶಃ ಅವಳಪ್ಪನ ನಳಿಗೆ ಕೋವಿ ಮತ್ತು ಮನೆಯ ಗೇಟು.

ಯಾರಿಗೆ ಯಾರುಂಟು? ಮಾರಾಯ್ತಿ ನಾನು ನೀನು ಎಂಥ ಸಂಬಂಧ ಬೆಳೆಸ್ತಾ ಇದೇವೆ?

0 thoughts on “ಸಂಬಂಧ : ನನ್ನ ಬದುಕಿನ ಹೈಪರ್‌ಲಿಂಕ್‌ಗಳ ಮೊದಲ ಕಥೆ ಓದಿ!

Leave a Reply