ಒಲಿಂಪಿಕ್ಸ್ ಮೋಜಿಗೆ ಮುನ್ನ ಒಂದು ಕ್ಷಣ

ಲೋಪೆಜ್ ಲೋಮೊಂಗ್ ಸತ್ತೇ ಹೋಗಿದ್ದ ಎಂದೇ ಎಲ್ಲರೂ ಭಾವಿಸಿದ್ದರು.

ಸುಡಾನ್ ದೇಶದ ಕಿಮೋಟೋಂಗ್‌ನಲ್ಲಿದ್ದ ತನ್ನದೇ ಗೋರಿಗೆ ಲೊಮೊಂಗ್ ಕಳೆದ ಡಿಸೆಂಬರಿನಲ್ಲಿ ಭೇಟಿ ಕೊಡಬೇಕಾಯಿತು! ಅವನು ಬಳಸುತ್ತಿದ್ದ ಸರ ಮತ್ತಿತರೆ ಪ್ರಿಯ ವಸ್ತುಗಳೂ ಈ ಗೋರಿಯಲ್ಲಿ ಹೂತುಹೋಗಿದ್ದವು.

೧೭ ವರ್ಷಗಳ ಹಿಂದೆ ಸುಡಾನ್ ಬಂಡುಕೋರರು ಅವನನ್ನು ಇಗರ್ಜಿಯೊಂದರಿಂದ ಅಪಹರಿಸಿದ್ದರು. ಆಮೇಲೆ ಅವನ ಸುದ್ದಿ ಯಾರಿಗೂ ಗೊತ್ತಿರಲಿಲ್ಲ.

ಈಗ ಲೊಮೊಂಗ್ ಅಮೆರಿಕಾದ ಒಲಿಂಪಿಕ್ ಕ್ರೀಡಾತಂಡದಲ್ಲಿ ಇದ್ದಾನೆ; ೧೫೦೦ ಮೀಟರ್ ಓಟದಲ್ಲಿ ಅವನೂ ಚಿನ್ನದ ಪದಕದ ಆಕಾಂಕ್ಷಿ.

ಬಂಡುಕೋರರಿಂದ ತಪ್ಪಿಸಿಕೊಂಡು ದಿಕ್ಕು ದೆಸೆ ಗೊತ್ತಿಲ್ಲದೆ ಓಡುತ್ತ ಓಡುತ್ತ ಕೀನ್ಯಾ ತಲುಪಿದ ಲೊಮೊಂಗ್ ೧೦ ವರ್ಷ ಅಲ್ಲೇ ಇದ್ದ. ಕೆಲಸ ಮಾಡಿ ಉಳಿಸಿಕೊಂಡ ಐದೇ ಶಿಲ್ಲಿಂಗ್ ಬಳಸಿ ಐದು ಮೈಲು ದೂರ ನಡೆದು ಟಿವಿ ನೋಡಲು ಪಾವತಿಸಿ ಮೈಕೇಲ್ ಜಾನ್ಸನ್ ೪೦೦ ಮೀಟರ್ ಓಟದಲ್ಲಿ ಗೆದ್ದಿದ್ದನ್ನು ಲೊಮೊಂಗ್ ನೋಡಿದ. ಕೊನೆಗೆ ಚರ್ಚುಗಳ ನೆರವಿನಿಂದ ಅಮೆರಿಕಾಗೆ ಬಂದ. ೨೦೦೭ರಲ್ಲಿ ಅವನ ಅಪ್ಪ, ಅಮ್ಮನನ್ನು ಮತ್ತೆ ಪಡೆದುಕೊಂಡ.
“ನನಗಿರೋ ಅದೃಷ್ಟ ಸುಡಾನ್‌ನ ಸಾವಿರಾರು ಮಕ್ಕಳಿಗೆ ಇಲ್ಲ. ಡಾರ್ಫರ್‌ನಲ್ಲಿ ಮಕ್ಕಳು ಸಾಯುತ್ತಿದ್ದಾರೆ. ಅವರಿಗೆ ಒಲಿಂಪಿಕ್ಸ್‌ನ ಕನಸೂ ಇಲ್ಲ; ಬದುಕಿದರೆ ಸಾಕು ಎಂಬಂತೆ ಹಸಿವಿನ ವಿರುದ್ಧ ಹೋರಾಡುತ್ತಿದ್ದಾರೆ” ಎಂದು ಲೊಮೊಂಗ್ ಸಂದರ್ಶನವೊಂದರಲ್ಲಿ ಹೇಳಿದ.

ಡಾರ್ಫರ್: ಫ್ರಾನ್ಸಿನಷ್ಟು ದೊಡ್ಡ ಪ್ರದೇಶದಲ್ಲಿ ಸುಡಾನ್ ಸರ್ಕಾರ ನರಮೇಧ ನಡೆಸಿದೆ. ಈಗಾಗಲೇ ನಾಲ್ಕು ಲಕ್ಷ ಜನ ಸತ್ತಿದ್ದಾರೆ. ೨೦ ಲಕ್ಷ ಜನ ಗುಳೆ ಎದ್ದುಹೋಗಿದ್ದಾರೆ. ೧೩ ಬಂಡುಕೋರ ತಂಡಗಳ ಜೊತೆಗೆ ಸರ್ಕಾರಿ ಪ್ರೇರಿತ ಜಂಜಾವೀಡ್ ಬಣವೂ ಅಟ್ಟಹಾಸ ಮೆರೆದಿದೆ. ಕಪ್ಪು ಜನರನ್ನೆಲ್ಲ ಮುಗಿಸಿಬಿಡುವ ಹುನ್ನಾರವನ್ನು ಸುಡಾನ್ ಅಧ್ಯಕ್ಷ ಅರಬ್ಬೀ ಸಮುದಾಯದ ಓಮರ್ ಅಲ್ ಬಷೀರ್ ಬೆಂಬಲದೊಂದಿಗೆ ಜಾರಿಗೆ ತಂದಿರುವ ಜಂಜಾವೀಡ್‌ಗೆ ಮಕ್ಕಳನ್ನು ತರಿದುಹಾಕುವುದು, ಹೆಣ್ಣುಮಕ್ಕಳನ್ನು ತಿಂಗಳುಗಟ್ಟಳೆ ಲೈಂಗಿಕ ತೃಷೆಗೆ ಬಳಸಿಕೊಳ್ಳುವುದು, ಗಂಡು ಸಂತತಿಯನ್ನೆಲ್ಲ ಸಮೂಹ ಸಮಾಧಿ ಮಾಡುವುದು – ಎಲ್ಲವೂ ಸಾಮಾನ್ಯ ದಿನಚರಿ.
ಸುಡಾನ್ ದೇಶದ ಲೊಮೊಂಗ್ ಅಮೆರಿಕಾದಲ್ಲಿ ನೆಲೆಸಿ ಬೀಜಿಂಗ್ ಒಲಿಂಪಿಕ್ಸ್‌ಗೆ ಹೋಗುತ್ತಿದ್ದಾನೆ ಎನ್ನುವ ಪುಟ್ಟ ಕಥೆಯಲ್ಲಿ ಎಷ್ಟೆಲ್ಲ ಸಂಕೀರ್ಣ ಸಂಕೇತಗಳಿವೆ ಗಮನಿಸಿ:
ಶಾಂತಿಯುತ, ಧರ್ಮಭೀರು ದೇಶವಾದ ಟಿಬೆಟನ್ನು ನುಂಗಿ ನೀರು ಕುಡಿದ ಚೀನಾ, ತನ್ನ ಪ್ರಜೆಗಳನ್ನೇ ಲಾಗೋಯ್ ಎಂಬ ಸೆರೆಮನೆಯಲ್ಲಿಟ್ಟು ಬಲವಂತವಾಗಿ ದುಡಿಸುತ್ತಿರುವ ಚೀನಾವನ್ನು ಯಾರೂ ಖಂಡಿಸುತ್ತಿಲ್ಲ. ಅಮೆರಿಕಾವು ಅಲ್ಲಲ್ಲಿ ವಟವಟಗುಡುವುದು ಬಿಟ್ಟರೆ, ರಾಜಕೀಯ ದೃಢತೆಯನ್ನೇ ಮರೆತಿದೆ. ಅತ್ತ ಚೀನಾವು ಈ ದಶಕದ ಆರಂಭದಿಂದಲೂ ನರಮೇಧದ ಅಪರಾಧಿ ಸುಡಾನ್ ದೇಶಕ್ಕೆ ಮಿಲಿಟರಿ ನೆರವು ನೀಡುತ್ತಲೇ ಬಂದಿದೆ. ಸುಡಾನ್‌ನ ತೈಲ ಚೀನಾಗೆ ಬೇಕೇ ಬೇಕು. ಎಷ್ಟರಮಟ್ಟಿಗೆ ಎಂದರೆ ಬಷೀರನ ಅರಮನೆಗೂ ಚೀನಾ ಥೈಲಿಗಟ್ಟಳೆ ಹಣ ಸುರಿದಿದೆ. ಹಳೆ ಸಾಲವನ್ನು ಮನ್ನಾ ಮಾಡಿದೆ.
ಇತ್ತೀಚೆಗಷ್ಟೆ ಬಿಬಿಸಿ ವಾರ್ತಾಸಂಸ್ಥೆಯು ಸುಡಾನ್ ಸರ್ಕಾರಕ್ಕೆ ಚೀನಾವು ಮಿಲಿಟರಿ ನೆರವನ್ನು ನೀಡುತ್ತಿದೆ ಎಂದು ವರದಿ ಮಾಡಿದೆ. ಚೀನಾ ನಿರ್ಮಿತ ಟ್ರಕ್ಕುಗಳನ್ನು, ಮೆಶಿನ್‌ಗನ್‌ಗಳನ್ನು, ವಿಮಾನನಾಶಕ ಬಂದೂಕುಗಳನ್ನು ಬಿಬಿಸಿ ಪತ್ತೆ ಮಾಡಿದೆ. ಫೈಟರ್ ವಿಮಾನಗಳನ್ನೂ ಸುಡಾನಿಗೆ ನೀಡಿರುವ ಚೀನಾ ಮಿಲಿಟರಿ ತರಬೇತಿಗೂ ಮುಂದಾಗಿದೆ. ಗೊತ್ತಿರಲಿ: ಸುಡಾನ್‌ಗೆ ಯಾವುದೇ ಮಿಲಿಟರಿ ನೆರವು ನೀಡಬಾರದೆಂದು ವಿಶ್ವಸಂಸ್ಥೆಯು ದಿಗ್ಬಂಧನ ವಿಧಿಸಿದೆ.

ಇತ್ತ ಸುಡಾನ್ ಅಧ್ಯಕ್ಷ ಬಷೀರ್‌ನನ್ನು ಬಂಧಿಸಲು ವಾರೆಂಟ್ ಹೊರಡಿಸಬೇಕೆಂದು ಪ್ರಾಸಿಕ್ಯೂಟರ್ ಲೂಯಿಸ್ ಮೊರಾನೋ ಒಕ್ಯಾಂಪೋ ಈಗ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟಿನಲ್ಲಿ ದಾವೆ ಹೂಡಿದ್ದಾರೆ. ಈ ದಾವೆಯಿಂದ ಬಷೀರ್ ತಪ್ಪಿಸಿಕೊಳ್ಳುವಂತಿಲ್ಲ. ಅಮೆರಿಕಾ, ಚೀನಾ ದೇಶಗಳ ಒತ್ತಡ, ಕ್ರೈಸ್ತ ಸೇವಾ ಸಂಸ್ಥೆಗಳ ಟೀಕೆಗಳ ನಡುವೆಯೂ ಒಕ್ಯಾಂಪೋ ಧೈರ್ಯವಾಗಿ ಮುನ್ನುಗ್ಗಿದ್ದಾರೆ. ಫುರ್, ಮಸಾಲಿತ್ ಮತ್ತು ಝಾಗ್ವಾ ಸಮುದಾಯವನ್ನು ಒರೆಸಿಹಾಕಿದ ನರಮೇಧದ ಆರೋಪ, ಕೊಲೆ, ದರೋಡೆ, ಜನರ ಬಲವಂತದ ಸ್ಥಳಾಂತರ, ಕ್ರೌರ್ಯ, ಮಾನಭಂಗದ ಮಾನವತೆ ವಿರೋಧಿ ಕೃತ್ಯಗಳು, ಉದ್ದೇಶಪೂರ್ವಕವಾಗಿ ನಾಗರಿಕ ವಸತಿ ಕೇಂದ್ರಗಳನ್ನು ನಾಶ ಮಾಡಿದ ಯುದ್ಧಾಪರಾಧ – ಹೀಗೆ ಹಲವು ಆರೋಪಗಳನ್ನು ಒಕ್ಯಾಂಪೋ ಪಟ್ಟಿ ಮಾಡಿದ್ದಾರೆ.
“ಜಂಜಾವೀಡ್‌ಗೆ ಮಾನಭಂಗ ಮಾಡುವುದೆಂದರೆ ಅತಿ ಸಾಮಾನ್ಯ. ಒಂದು ಹೆಣ್ಣನ್ನು ಇಪ್ಪತ್ತಕ್ಕೂ ಹೆಚ್ಚು ಮಿಲಿಶಿಯಾ ಮಂದಿ ಅವಳ ತಂದೆ ತಾಯಂದಿರ ಎದುರಿಗೇ ಭೋಗಿಸುತ್ತಾರೆ” ಎಂದು ಒಕ್ಯಾಂಪೋ ತನ್ನ ಅರ್ಜಿಯಲ್ಲಿ ಹೇಳಿದ್ದಾರೆ.

ಈ ಅಂಕಣ ಬರೆಯುವಾಗಲೇ ಅಚಾನಕ್ಕಾಗಿ ಡಾರ್ಫರ್ ಬಗ್ಗೆ ಮಾಡಿದ ಎರಡು ಸಿನೆಮಾಗಳು ದೊರೆತವು. ಒಂದು : ಡಾರ್ಫರ್ ನೌ ಎಂಬ ಸಾಕ್ಷ್ಯಚಿತ್ರ; ಎಚ್ ಬಿ ಓ ಸಿನೆಮಾ ಟಿವಿ ಚಾನೆಲ್ ಈ ಚಿತ್ರವನ್ನು ಪ್ರಸಾರ ಮಾಡುತ್ತಿದೆ. ಸಾಧ್ಯವಾದರೆ ಸಮಯ ಕಾದು ನೋಡಿ.
ಇನ್ನೊಂದು ಅಮೆರಿಕಾದ ಸೇನೆಯ ಕ್ಯಾಪ್ಟನ್ ಬ್ರಿಯಾನ್ ಸ್ಟೀಡ್ಲ್ ಉಲ್ಲೇಖಗಳು ಮತ್ತು ಛಾಯಾಚಿತ್ರಗಳನ್ನು ಆಧರಿಸಿ ನಿರ್ಮಿಸಿದ “ದಿ ಡೆವಿಲ್ ಕೇಮ್ ಆನ್ ಹಾಸ್‌ಬ್ಯಾಕ್ ಎಂಬ ಸಾಕ್ಷ್ಯಚಿತ್ರ. ಅಧಿಕೃತ ಸೇನಾ ವೀಕ್ಷಕನಾಗಿದ್ದ ಬ್ರಿಯಾನ್ ಯಾವ ಪತ್ರಕರ್ತನಿಗೂ ಸಾಧ್ಯವಾಗದ ದೂರದೂರದ ತಾಣಗಳನ್ನೆಲ್ಲ ವೀಕ್ಷಿಸಿದ. ಒಂದು ಸಲ ಒತ್ತೆಯಾಳಾಗಿಯೂ ಚಿತ್ರಹಿಂಸೆ ಅನುಭವಿಸಿದ.

ಡಾರ್ಫರ್‌ನಲ್ಲಿ ಅಂತಾರಾಷ್ಟ್ರೀಯ ಸಮುದಾಯಕ್ಕೆ ಏನೂ ಮಾಡಲಾಗದ ಅಸಹಾಯಕತೆಯನ್ನು ಗಮನಿಸಿದ ಬ್ರಿಯಾನ್ ಕೆಲಸಕ್ಕೆ ರಾಜೀನಾಮೆ ಕೊಟ್ಟು ಅಮೆರಿಕಾಗೆ ಬಂದ. ಅವನ ಈಗಿನ ಜೀವನದ ಉದ್ದೇಶವೇ ಸುಡಾನಿನಲ್ಲಿ ನಡೆಯುತ್ತಿರುವ  ಭೀಕರ ನರಮೇಧದ ಬಗ್ಗೆ ಜಗತ್ತಿಗೆ ಮನವರಿಕೆ ಮಾಡಿಕೊಡುವುದು. ನಿಮ್ಮ ಮಾಹಿತಿಗೆ ಈ ಸಿನೆಮಾದ ಒಂದು ಸ್ಟಿಲ್ ಸಂಗ್ರಹಿಸಿ ಕೊಟ್ಟಿದ್ದೇನೆ.
ಜಗತ್ತಿಗೆ ತನ್ನ ಹಿರಿಮೆಯನ್ನು ತೋರಲು ಚೀನಾ ತನ್ನದೇ ಲಕ್ಷಗಟ್ಟಳೆ ಮನೆಗಳನ್ನು ನೆಲಸಮ ಮಾಡಿ ಬೀಜಿಂಗನ್ನು ಮರುಕಟ್ಟಿದೆ. ಪರಿಸರ ಮಾಲಿನ್ಯದ ಹೆಗ್ಗುರುತಾದ ಬೀಜಿಂಗಿನ ನೂರಾರು ಕಾರ್ಖಾನೆಗಳನ್ನು ಮುಚ್ಚಿ ಪರಿಸರ ಕಾಳಜಿಯ ತೇಪೆ ಹಾಕಿದೆ. ಸುಡಾನ್ ದೇಶದ ನರಮೇಧದ ಜೊತೆಗೆ ಕೈಜೋಡಿಸಿದ್ದರೆ ಚೀನಾದ ಸಹಜವೇ ಬಿಡಿ.
ಏನೇ ಇದ್ದರೂ ಒಲಿಂಪಿಕ್ಸ್ ನಡೆದೇ ನಡೆಯುತ್ತದೆ. ಎಲ್ಲೋ ಒಬ್ಬ ಸ್ಟೀವನ್ ಸ್ಪೀಲ್‌ಬರ್ಗ್ ಈ ಕ್ರೀಡಾಮೇಳವನ್ನು ಬಹಿಷ್ಕರಿಸಿದ ಪ್ರಮುಖನಾಗಿದ್ದಾನೆ. ಆದರೆ ಈ ಒಲಿಂಪಿಕ್ಸ್ ಎತ್ತಬೇಕಾಗಿದ್ದ ಮಾನವ ಹಕ್ಕುಗಳ ಭಾರೀ ಪ್ರಶ್ನೆಗಳು ಸುಡಾನಿನ ಲಕ್ಷಗಟ್ಟಳೆ ದೇಹಗಳ ನಡುವೆಯೇ ಹೂತುಹೋಗಿವೆ.
ಟಿ೨೦ ಕ್ರಿಕೆಟಿನಲ್ಲಿ ಚೀರು ಚಿಂಗಾರಿಯರು ಕುಣಿಯುವುದು, ೨೦-೨೦ಯಲ್ಲಿ ನಮ್ಮ ಹುಡುಗರು ಆಫ್ರಿಕಾದ ನೆಲದಲ್ಲೇ ವಿಶ್ವ ಚಾಂಪಿಯನ್ ಆಗಿರೋದು, ಅಮೆರಿಕಾದ ಜೊತೆ ನಮ್ಮ ಪರಮಾಣು ಒಪ್ಪಂದ ನಡೆಯುತ್ತಿರೋದು, ಹಾಕಿ ತಂಡವು ಬೀಜಿಂಗಿಗೆ ಹೋಗದೇ ಇರೋದು, ಎಲ್ಲ ಗೌಜು – ಗಲಾಟೆಯ ನಡುವೆ ಈ ವಿಷಯ ನಮ್ಮೊಳಗೆ ಕೊಂಚ ವಿಷಾದ ಮೂಡಿಸಿದರೆ, ಎದೆ ಕಲಕಿದರೆ ಮನ್ನಿಸಿ.

ಒಲಿಂಪಿಕ್ಸ್ ಕ್ರೀಡೆಗಳನ್ನು ನೋಡಲು ಟಿವಿ ಚಾನೆಲನ್ನು ಹಾಕುವ ಮೊದಲು ಒಂದು ನಿಮಿಷ ಈ ಹತಭಾಗ್ಯ ಮಕ್ಕಳನ್ನು ನೆನಪಿಸಿಕೊಳ್ಳೋಣ. ಚೀನಾದ ಪ್ರಗತಿ, ಅದರ ದೈತ್ಯ ಆರ್ಥಿಕ ಶಕ್ತಿ, ರಾಜಕೀಯ ದೃಢತೆ, ಉತ್ಪಾದಕತೆ ಮುಂತಾದ ಹತ್ತಾರು ಸಂಗತಿಗಳ ಬಗ್ಗೆ ಈಗ ದೇಶದ ಎಲ್ಲ ಪತ್ರಿಕೆಗಳಲ್ಲಿ ಪುಂಖಾನುಪುಂಖವಾಗಿ ಬರುತ್ತಿರುವ ಲೇಖನ, ನುಡಿಚಿತ್ರಗಳ ಸರಣಿಯ ಗಲಾಟೆಯಲ್ಲಿ ಈ ಅಂಕಣ ನಿಮ್ಮೊಳಗೆ ಒಂದಂಶ ಇಳಿದರೂ ಸಾಕು.
ಬ್ರಿಯಾನ್ ಸ್ಟೀಡ್ಲ್ ಸಿನೆಮಾ ಬಗ್ಗೆ ತಿಳಿಯಲು ಇಲ್ಲಿಗೆ ಭೇಟಿ ನೀಡಿ:
http://www.thedevilcameonhorseback.com/

ಡಾರ್ಫರ್ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿಗೆ ಭೇಟಿ ನೀಡಿ

http://www.savedarfur.org

ಚೀನಾದ ಲಾಗೋಯ್ ಸೆರೆಮನೆಗಳ ಬಗ್ಗೆ ತಿಳಿಯಲು ಇಲ್ಲಿಗೆ ಬನ್ನಿ:
www.laogai.org

ಲೊಪೆಜ್ ಲೊಮೊಂಗ್ ವೆಬ್‌ಸೈಟ್ ಇಲ್ಲಿದೆ:

www.lopezlomong.org

—–

Leave a Reply