ರಿಸೆಶನ್ ಬಂದಿದೆ, ಎಚ್ಚರವಿರಲಿ!

ಅಮೆರಿಕಾದಲ್ಲಿ ಆರ್ಥಿಕ ಹಿನ್ನಡೆಯಾಗ್ತಾ ಇದೆ; ಅಂದ್ರೆ ಏನು? ಇಷ್ಟು ದಿನ ಶೇ. ೨.೪ ರ ಗತಿಯಲ್ಲಿ ಬೆಳೆಯುತ್ತಿದ್ದ ಆ ದೇಶದ ಆರ್ಥಿಕತೆ ಈಗ ಶೇ. ೧.೯ಕ್ಕೆ ಕುಸಿದಿದೆ. ೨೦೦೮ರ ಈ ಹನ್ನೊಂದನೇ ಆರ್ಥಿಕ ಹಿನ್ನಡೆ (ರಿಸೆಶನ್)ಯ ಸಾಧ್ಯತೆ ಶೇ. ೬೦ರಷ್ಟಿದೆಯಂತೆ. ಅಮೆರಿಕಾದಲ್ಲಿ ೪.೪೮ ಲಕ್ಷ ಜನ ಈಗಾಗಲೇ, ಈ ವರ್ಷವೇ ಕೆಲಸ ಕಳೆದುಕೊಂಡಿದ್ದಾರೆ. ಕಳೆದ ವರ್ಷ ೪೩ ಲಕ್ಷ ಜನ ಅರೆಕಾಲಿಕ ಕೆಲಸಗಾರರು ಇದ್ದರೆ ಈ ವರ್ಷ ಈ ಸಂಖ್ಯೆ ೫೩ ಲಕ್ಷ ದಾಟಿದೆ.

ಈ ಹಿನ್ನಡೆ/ಕುಸಿತ/ರಿಸೆಶನ್ ಕಳೆದ ಡಿಸೆಂಬರಿನಲ್ಲೇ ಗಮನಕ್ಕೆ ಬಂದಿತ್ತು. ಆಗ ಸರ್ಕಾರವು ಅನೇಕ ಕ್ರಮಗಳನ್ನು ಕೈಗೊಂಡು ಹಿನ್ನಡೆಯನ್ನು ತಡೆದಿತ್ತು. ೨೦೦೧ರ ನಂತರ ಇದೇ ಮೊದಲ ಬಾರಿಗೆ ಇಂಥ ಆರ್ಥಿಕ ಹಿನ್ನಡೆ ಕಂಡುಬಂದಿದೆಯಂತೆ.

ಹಾಗಾದರೆ ೨೦೦೧ರಲ್ಲಿ ನಡೆದಿದ್ದೇನು ಎಂಬುದನ್ನು ಗಮನಿಸೋಣ: ೨೦೦೧ರ ಸೆಪ್ಟೆಂಬರ್ ೧೧ರ ಬೆಳಗ್ಗೆ ಉಗ್ರರು ವಿಮಾನ ದಾಳಿ ನಡೆಸಿ ಎರಡು ಬೃಹತ್ ಕಟ್ಟಡಗಳನ್ನು ನೆಲಸಮ ಮಾಡಿದರು. ಸಾವಿರಾರು ಜನರ ಜೀವ ತೆಗೆದರು. ಅಮೆರಿಕಾವನ್ನು ಭಯದ ಛಾಯೆಗೆ ತಂದು ಜನರಲ್ಲಿ ಬೆವರಿಳಿಸಿದರು. ಅಂದಿನಿಂದ ಒಸಾಮಾ ಬಿನ್ ಲಾಡೆನ್ ಎಂಬ ಭೂತ ಅಮೆರಿಕಾವನ್ನು ಕಾಡತೊಡಗಿತು.

ಅಷ್ಟೇ ಅಲ್ಲ; ಆರ್ಥಿಕ ಹಿನ್ನಡೆಗೆ ಹಲವು ವಿಚಿತ್ರ ಮತ್ತು ಸಕಾರಣಗಳೂ ಇದ್ದವು. ಉದಾಹರಣೆಗೆ ಡಾಟ್‌ಕಾಮ್ ಎಂಬ ಗುಳ್ಳೆ ಒಡೆಯಲಾರಂಭಿಸಿತ್ತು. ಆಗ ನಾನೂ ಈ ಡಾಟ್‌ಕಾಮ್ ಮತ್ತಿತರೆ ಸಂಸ್ಥೆಗಳ ಗಾಳಿಯಲ್ಲಿ ತೇಲುತ್ತಿದ್ದೆ. ಬಾಯಿಗೆ ಬಂದ ಹಾಗೆ ಕೇಳಿದ ಸಂಬಳವನ್ನೂ ಈ ಸಂಸ್ಥೆಗಳು ನಮಗೆ ಕೊಡುತ್ತಿದ್ದವು! ನಾನಿದ್ದ ಟೆಲಿವಿಜನ್ ಚಾನೆಲ್‌ನಲ್ಲಿ ಹಣದ ಹೊಳೆ; ಎಲ್ಲಿಗೆ ಬೇಕಾದರೂ ಹೋಗಿ, ಏನು ಬೇಕಾದರೂ ಶೂಟ್ ಮಾಡಿ, ಯಾವುದಾದ್ರೂ ಸ್ಟೋರಿ ರೆಡಿ ಮಾಡಿ ಎಂಬುದೇ ನನ್ನ ಅಧಿಕಾರಿಗಳ ಆದೇಶವಾಗಿತ್ತು. ನಾವು ಊಟಕ್ಕೆ ಹೋಟೆಲಿಗೆ ಹೋದಾಗೆಲ್ಲ ಇಂಥ ಸಂಸ್ಥೆಗಳಲ್ಲಿ ನಾಯಿಬೆಲ್ಟು ಕಟ್ಟಿಕೊಂಡವರೇ ಸಿಗುತ್ತಿದ್ದರು. ಅಲ್ಲೊಂದು ಡಾಟ್‌ಕಾಮ್ ಬಂದಿದೆ, ಇಲ್ಲೊಂದು ಭಾರೀ ಕಟ್ಟಡದಲ್ಲಿ ಯಾರೋ ಹಣ ಸುರಿದಿದ್ದಾರೆ… ಸುದ್ದಿಗಳು ಪುಕ್ಕಟೆ ಬರುತ್ತಿದ್ದವು. ಆದರೆ ಈ ಗುಳ್ಳೆ ಉಬ್ಬಿದ ಕೆಲ ತಿಂಗಳುಗಳಲ್ಲೇ ಒಡೆಯಲು ಶುರುವಾಗಿದ್ದನ್ನು ಕೆಲವರು ಮಾತ್ರವೇ ಕಂಡರು. ಉದಾಹರಣೆಗೆ ಭಾರತದ ಹಿರಿಯ ಪತ್ರಕರ್ತ ರಾಜೇಂದರ್ ಪುರಿ ಅವತ್ತೇ ಲೇಖನ ಬರೆದು ಎಲ್ಲರನ್ನೂ ಎಚ್ಚರಿಸಿದ್ದರು.

ಸೆಪ್ಟೆಂಬರಿಗೂ ಮುನ್ನ ನನ್ನ ಟೆಲಿವಿಜನ್ ಚಾನೆಲಿನಲ್ಲಿ ಕನ್ನಡ ಕಾರ್ಯಕ್ರಮಗಳ ಸ್ವಂತ ತಯಾರಿ ನಿಂತೇ ಹೋಯಿತು. ಶೂಟಿಂಗೇ ನಿಂತಮೇಲೆ ಟಿವಿ ಚಾನೆಲ್ ಹೇಗೆ ಚಲನಶೀಲವಾಗಿರುತ್ತೆ ಎಂದು ನಾನು ಗಾಬರಿಪಟ್ಟೆ; ಕೆಲಸ ಬಿಟ್ಟೆ. ಪ್ರಾವಿಡೆಂಟ್ ಫಂಡ್ ಮತ್ತು ಅಳಿದುಳಿದ ಸಂಬಳವನ್ನು ಪಡೆಯುವುದೇ ದುಸ್ತರವಾಯಿತು.

ಆದರೆ ಸೆಪ್ಟೆಂಬರ್ ನಂತರ ಕೆಲಸ ಬಿಟ್ಟವರು ಕಥೆ ಮಾತ್ರ ಕೇಳಬೇಡಿ. ಯಾವ ಯುವ ಸಿಬ್ಬಂದಿಗೂ ಸಂಬಳವೂ ಇಲ್ಲ, ಕೆಲಸವೂ ಇಲ್ಲ; ಪ್ರಾವಿಡೆಂಟ್ ಫಂಡ್ ಇಲ್ಲವೇ ಇಲ್ಲ. ನನ್ನ ಕಂಪನಿ ಮಾತ್ರವಲ್ಲ; ನನ್ನ ಗೆಳೆಯರು ಕೆಲಸ ಮಾಡುತ್ತಿದ್ದ ಸಂಸ್ಥೆಗಳಲ್ಲೂ ಇಂಥದ್ದೇ ಕಥೆಗಳು ನಡೆದವು. ಮದುವೆ ನಿಕ್ಕಿಗೆಂದು ಹೋಗಿ ಬರುವ ಹೊತ್ತಿಗೆ ನನ್ನ ಗೆಳೆಯನಿಗೆ ಅವನ ಕಚೇರಿಯಲ್ಲಿ ಪಿಂಕ್ ಸ್ಲಿಪ್ (ಕೆಲಸದಿಂದ ತೆಗೆದ ಮಾಹಿತಿ ಪತ್ರ) ಸಿದ್ಧವಾಗಿತ್ತು. ಅವನ ಸಂಸ್ಥೆಯು ತಯಾರಿಸಿದ ಈ ಮೈಲ್ ಪೆಟ್ಟಿಗೆ ಬೆಂಗಳೂರಿನ ದೊಡ್ಡ ವೈಫಲ್ಯವಾಗಿ ಇತಿಹಾಸವಾಯಿತು.

ಬೆಂಗಳೂರಿರಲಿ, ದೇಶ ವಿದೇಶಗಳ ನೂರಾರು ಸಂಸ್ಥೆಗಳು ಮುಚ್ಚಿಹೋದವು. ಅಮೆರಿಕಾದಿಂದ ಕೆಲಸವಿಲ್ಲದೆ ಬಂದ ಸಾಫ್ಟ್‌ವೇರ್ ಇಂಜಿನಿಯರ್‌ಗಳು ಭಾರತದಲ್ಲಿ ಚಿಕ್ಕಪುಟ್ಟ ಸಂಸ್ಥೆಗಳನ್ನು ಆರಂಭಿಸಿದರು.

ಈ ಸಲ ಏನಾಗುತ್ತದೆ? ಎಷ್ಟು ದಿನ ಈ ಆರ್ಥಿಕ ಹಿನ್ನಡೆ ಇರುತ್ತದೆ? ಕೇವಲ ಮಾಹಿತಿ ತಂತ್ರಜ್ಞಾನ ಆಧಾರಿತ ಉದ್ಯಮದ ಮೇಲೆ ಮಾತ್ರವೇ ಈ ಹಿನ್ನಡೆ ಪರಿಣಾಮ ಬೀರುತ್ತದೆಯೆ? ಹಾಗೇನಿಲ್ಲ. ಈ ಸಲದ ಹಿನ್ನಡೆಯ ಬಗ್ಗೆ ಅಮೆರಿಕಾದ ಕಾಂಗ್ರೆಸಿನ ಸಂಶೋಧನಾ ಸಂಸ್ಥೆಯು ತಯಾರಿಸಿದ ದಾಖಲೆಯನ್ನು ನೋಡಿದರೆ ಉತ್ಪಾದನಾ ರಂಗದಲ್ಲಿ ಹಿನ್ನಡೆಯಾಗಿರುವುದು ಎದ್ದು ಕಾಣುತ್ತದೆ.

ಉಕ್ಕಿನ ಬೆಲೆ ಹೆಚ್ಚಾಯಿತು ಎಂದು ನಮ್ಮ ಕೇಂದ್ರ ಸರ್ಕಾರವು ಬೆಲೆ ನಿಯಂತ್ರಣ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಉಕ್ಕು ತಯಾರಿಕಾ ಸಂಸ್ಥೆಗಳ ಈ ವರ್ಷದ ಮೊದಲ ತ್ರೈಮಾಸಿಕ ಲಾಭದಲ್ಲಿ ಅರ್ಧಕ್ಕರ್ಧ ಕುಸಿತ ಕಂಡುಬಂದಿದೆ. ಹಣದುಬ್ಬರ ನಾವು ಮರೆತೇಹೋಗಿದ್ದ ಶೇ. ೧೨ರ ಅಂಚಿಗೆ ಬಂದಿದೆ. ತೈಲಬೆಲೆಗಳು ಬೇಕಾಬಿಟ್ಟಿ ಹೆಚ್ಚಿವೆ. ಬರೀ ಕರ್ನಾಟಕ ಎಂದು ತಿಳಿಯಬೇಡಿ. ಇಡೀ ಜಗತ್ತೇ ಈ  ಆರು ತಿಂಗಳುಗಳಲ್ಲಿ ವಿಚಿತ್ರ ಪರಿಣಾಮಗಳಿಗೆ ಪಕ್ಕಾಗಿದೆ. ಮುಂದಿನ ದಿನಗಳಲ್ಲಿ ಈ ಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು. ಈ ವಾರವಷ್ಟೇ ಸಾಲದ ಬಡ್ಡಿದರಗಳು ಏರಿದ್ದನ್ನು ನೋಡಿದ್ದೀರ ತಾನೆ?

ಆರ್ಥಿಕ ಹಿನ್ನಡೆಯ ದಿನಗಳಲ್ಲಿ ಶ್ರೀಸಾಮಾನ್ಯರಾಗಿ ನಾವು ಹೇಗಿರಬೇಕು? ಇಷ್ಟೆ:

  • ಕೂಡಿಟ್ಟ ದುಡ್ಡು ಖರ್ಚು ಮಾಡುವಲ್ಲಿ ಕೊಂಚ ಹಿಡಿತವಿರಲಿ.
  • ಶೇರು ಹೂಡಿಕೆಗಳನ್ನು ಮಾಡುವಾಗ ಎಚ್ಚರಿಕೆ ವಹಿಸಿ. ಭಾರೀ ಮೊತ್ತವನ್ನು ಒಂದೆ ಕಡೆ ಹೂಡಿ ಸೋಲಬೇಡಿ.
  • ಮನೆಗೆ, ವಿವಿಧ ಸೌಲಭ್ಯಗಳಿಗೆ ಸಾಲ ಮಾಡುವುದಕ್ಕೂ ಕಡಿವಾಣ ಹಾಕಿ.
  • ಇರುವ ಕೆಲಸ ಬಿಡಬೇಡಿ. ಕೆಲಸ ಹುಡುಕುವಾಗ ನಿರಾಶೆ ಹೆಚ್ಚಬಹುದು; ಬೇಸರಿಸಬೇಡಿ. ಈ ಹೊತ್ತು ಕೆಲಸ ಸಿಗುವುದು ಕಷ್ಟವೇ.
  • ಕೆಲಸ ಬದಲಾಯಿಸುವ ಅವಕಾಶ ಸಿಕ್ಕಿದರೆ ಜಾಗರೂಕತೆ ವಹಿಸಿ. ಸೇರುವ ಸಂಸ್ಥೆಯು ಈ ಹಿನ್ನಡೆಯ ಪರಿಣಾಮಕ್ಕೆ ಪಕ್ಕಾಗುತ್ತಿದೆಯೆ? ವಿಚಾರಿಸಿ. ಸಂಸ್ಥೆಯ ಐದಾರು ವರ್ಷಗಳ ಇತಿಹಾಸವನ್ನು ಕೆದಕಿ; ಮುಂದಿನ ಐದು ವರ್ಷಗಳಲ್ಲಿ ಅದು ಹಾಕಿಕೊಂಡಿರುವ ಯೋಜನೆಗಳನ್ನು ಪರಿಶೀಲಿಸಿ. ಇರುವ ಕೆಲಸವನ್ನು ಬಿಡುವ ಸಂದರ್ಭ ಬಂದಾಗ ಗಟ್ಟಿ ನಿರ್ಧಾರ ತೆಗೆದುಕೊಳ್ಳಿ; ಆದರೆ ಎಲ್ಲೂ ಕೈಗೆ ಸಿಕ್ಕಿದ ಕೆಲಸವನ್ನು ಸೇರಬೇಡಿ.
  • ಸರ್ಕಾರಗಳು ಏನೇ ನಿರ್ಧಾರ ತೆಗೆದುಕೊಂಡು ಹಿನ್ನಡೆಯನ್ನು ತಡೆಯಲು ಹೋದರೂ, ನಮ್ಮ ಎಚ್ಚರಿಕೆ ನಮಗಿರಲೇಬೇಕು.
    —————

Leave a Reply