ಕ್ಯಾಸನೂರು ಕಾಡಿನಲ್ಲಿ ಮಲಗಿರುವ ಕೂಸಿಗೆ

ಶಿಲ್ಪಶ್ರೀ,
ಬ್ಲಾಗಿಂಗ್ ಬಗ್ಗೆ ಸ್ನಾತಕೋತ್ತರ ಪ್ರಬಂಧ ಬರೆಯಬೇಕಂದ್ರೆ ಶಿವಮೊಗ್ಗ ಶಂಕರಘಟ್ಟ ಅಂಥ ಒಳ್ಳೆಯ ಜಾಗವೇನಲ್ಲ. ಬ್ಲಾಗಿಂಗ್‌ನಂಥ ಇಂಟರ್‌ನೆಟ್ ಆಧಾರಿತ ವಿಷಯಾಭ್ಯಾಸ ಮಾಡಬೇಕಂದ್ರೆ ಬೆಂಗಳೂರಿನ ಸಂಪರ್ಕ ಇರಲೇಬೇಕು. ಕಲಿಯುವ ಜಾಗಕ್ಕೂ, ವಿಷಯಕ್ಕೂ ಸಂಬಂಧವೇ ಇರದಂಥ ಕಡೆಯಲ್ಲಿ ಇದ್ದ ನೀನು ಬ್ಲಾಗಿಂಗ್ ಬಗ್ಗೆ ಬರೆಯೋದಕ್ಕೆ ಹಒರಟು ನನಗೆ ಫೋನ್ ಮಾಡಿದಾಗ ನನಗೆ ಇನ್ನಿಲ್ಲದ ಅಚ್ಚರಿ; ಸಂತೋಷ. ಬೆಂಗಳೂರಿನ ಒಂದಷ್ಟು ಪರಿಣತರು ಬಂದು ಬ್ಲಾಗಿಂಗ್ ಬಗ್ಗೆ ಮಣಗಟ್ಟಳೆ ಭಾಷಣ ಮಾಡಿದ್ದರೂ ನಿನಗೆ ಬ್ಲಾಗಿಂಗ್ ಅರ್ಥವಾಗಿರಲಿಲ್ಲ ಎಂದು ನನಗೆ ನಿನ್ನ ಮಾತಿನ ಮೂಲಕ ಗೊತ್ತಾಯ್ತು.
ಅದಕ್ಕೇ ನಾನು ಫೋನಿನಲ್ಲೇ ಅರ್ಧ ಗಂಟೆ ಬ್ಲಾಗಿಂಗ್ ಅಂದ್ರೆ ಏನು ಎಂದು ವಿವರಿಸಿದೆ. ನಿನಗೆ ಬೋರ್ ಆಯ್ತೋ ಏನೋ ಗೊತ್ತಾಗಲಿಲ್ಲ. ಆದರೆ ಇಂಥ ಸಾಹಸ ಮಾಡಹೊರಟ ನಿನ್ನ ಧೈರ್ಯವನ್ನು ನಾನು ಮೆಚ್ಚಿಕೊಂಡೆ.


ಬ್ಲಾಗಿಂಗ್ ಅಂದ್ರೆ ಉಚಿತವಾಗಿ ವೆಬ್‌ಸೈಟ್ ಮಾಡೋದು ಅನ್ನೋದಕ್ಕಿಂತ ಮುಕ್ತವಾಗಿ ನಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು ಎಂಬ ಪರಿಕಲ್ಪನೆ ಎಂದು ನಾನು ಎಷ್ಟೋ ಸಲ ಬ್ಲಾಗಿಂಗ್ ಮಾಡೋರಿಗೆ ಹೇಳಿದ್ದಿದೆ. ನಿನಗೂ ಅವತ್ತು ಅದನ್ನೇ ಹೇಳಿದ್ದೆ. ನೀನು ಕನ್ನಡದ ಬ್ಲಾಗಿಂಗ್ ಬಗ್ಗೆ ಹೆಚ್ಚಿನ ಮಾಹಿತಿ ಕೇಳಿದ್ದೆ. ಸರಿ ಎಂದು ನನ್ನ ಕೆಲಸದ ಗಲಾಟೆಯಲ್ಲೇ ಒಂದಷ್ಟು ಬ್ಲಾಗಿಂಗ್ ಜಾಲತಾಣಗಳನ್ನು ಪಟ್ಟಿ ಮಾಡಿ ನಿನಗೆ ಕಳಿಸಿದ್ದೆ. ನೀನು ಎಂಥ ಪ್ರಬಂಧ ಬರೆದೆ, ಅದಕ್ಕೆ ಎಷ್ಟು ಅಂಕಗಳು ಸಿಕ್ಕವು ಎಂದು ನನಗೆ ಗೊತ್ತಾಗಲಿಲ್ಲ; ಆದರೆ ನಾನು ಕಳಿಸಿದ್ದ ಮಾಧ್ಯಮ ಕಾನೂನು ಮಾಹಿತಿಯ ಗ್ರಂಥ ಮತ್ತು ಸುನಿಲ್ ಸಕ್ಸೇನಾರ “ಬ್ರೇಕಿಂಗ್ ನ್ಯೂಸ್’ ಎಂಬ ಇಂಟರ್‌ನೆಟ್ ಪತ್ರಿಕೋದ್ಯಮದ ಮೊದಲ ಮತ್ತು ಜನಪ್ರಿಯ ಪುಸ್ತಕಗಳನ್ನು ಕಳಿಸಿದಾಗ ನೀನು ತುಂಬಾ ಖುಷಿಪಟ್ಟಿದ್ದೀ ಎಂದು ನಿನ್ನ ಸೋದರಮಾವ ನನಗೆ ಫೋನ್ ಮಾಡಿ ಹೇಳಿದ್ದ. ಯಾಕೆ ಮಾಮ, ಇಷ್ಟೆಲ್ಲ ದುಡ್ಡು ಖರ್ಚು ಮಾಡಿ ನನಗೆ ಪುಸ್ತಕ ಕಳಿಸ್ತೀಯ ಎಂದು ನೀನೇ ಆಮೇಲೆ ಫೋನ್ ಮಾಡಿ ಕೇಳಿದ್ದೆ. `ಇಷ್ಟೆಲ್ಲ ಪುಸ್ತಕಗಳನ್ನು ಕೇಳಿ ಓದ್ತಾ ಇರೋ ನಿನ್ನ ಅಧ್ಯಯನ ಆಸಕ್ತಿಯೇ ಇದಕ್ಕೆ ಕಾರಣ’ ಎಂದು ನಾನು ಹೇಳಿದ್ದೆ. ಬೆಂಗಳೂರಿನ ಗಂಗಾರಾಮ್ ಪುಸ್ತಕದ ಅಂಗಡಿಗೆ ಎರಡು ಸಲ ಹೋಗಿ ಬಂದು ನಿನಗೆ ಪುಸ್ತಕ ಕಳಿಸಿಕೊಡುವಾಗ ನನ್ನಲ್ಲಿ ಅದೇ ಗುಂಗು. ಈ ಹುಡುಗಿಗೆ ಎಷ್ಟೆಲ್ಲ ಛಂದ ಓದುವ ಆಸಕ್ತಿ ಇದೆಯಲ್ಲ….
ನೀನು ಕಾಲೇಜಿನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡೆ ಎಂದು ಸಡಗರದಿಂದ ಫೋನ್ ಮಾಡಿದಾಗ ನಾನು ಏನೇನೋ ಕನವರಿಸಿಕೊಂಡೆ: ಇವಳು ಮುಂದೆ ಎಂಥ ಚಟುವಟಿಕೆಯ ಖನಿಯಾಗಿ ಹೆಸರು ಪಡೆಯುತ್ತಾಳೆ, ನಮ್ಮ ಕನ್ನಡದ ಪ್ರಮುಖ ಪತ್ರಕರ್ತೆಯಾಗಿ ನನಗೂ, ಅವಳ ಪತ್ರಕರ್ತ ಸೋದರಮಾವನಿಗೂ, ಬೇಳೂರಿಗೂ ಹೆಸರು ತರುತ್ತಾಳೆ.
ಅವತ್ತು ಬೆಳಗ್ಗೆ ನಿಮ್ಮನೆಯಲ್ಲಿ ನಿಮ್ಮ ಅಮ್ಮ, ನನಗೆ ತಿಂಡಿ ಮಾಡಿಕೊಟ್ಟರು. ನಿನ್ನ ತಂಗಿಯೂ ಖುಷಿಪಟ್ಟು ಮಾತನಾಡಿಸಿದಳು. ನಾವಿಬ್ಬರೂ ಗಣಪತಿ ಕೆರೆ ಏರಿ ಮೇಲೆ ಹೊರಟೆವು. ನೀನು ಸೈಕಲ್ ತಳ್ಳಿಕೊಂಡೇ ಮಾತನಾಡುತ್ತ ಬಂದೆ. ಆಮೇಲೆ ನಿನ್ನ ಜೊತೆಗೆ ಇನ್ನಿಬ್ಬರು ಗೆಳತಿಯರು ಸೇರಿಕೊಂಡರು. ಇನ್ನೊಬ್ಬಳು ದಂಡೆಯ ಕೆಳಮನೆಯಿಂದ ಬರೋದಕ್ಕೆ ಕಾಯುತ್ತಿದ್ದೆವು. ಆಗ ನಾವೆಲ್ಲ ಎಷ್ಟು ಖುಷಿಯಿಂದ ಪರಸ್ಪರ ಮಾತಾಡಿಕೊಂಡೆವು. ಆ ಬೆಳಗ್ಗೆ, ಆ ಛಳಿಯ ದಿನ, ತುಂಬು ಉತ್ಸಾಹದಲ್ಲಿ ಕಾಲೇಜಿಗೆ ಹೋಗುತ್ತಿರೋ ನಿಮ್ಮ ನಡುವೆ ನಾನು ನಿಂತಾಗ, ಅರೆ, ನಾನು ಇಂಥ ಛಲೋ ಕ್ಷಣಗಳನ್ನೆಲ್ಲ ಅನುಭವಿಸುವ ಕಾಲೇಜಿನ ಅವಕಾಶವನ್ನೇ ತಪ್ಪಿಸಿಕೊಂಡೆನಲ್ಲ ಎಂದೆನಿಸಿತ್ತು. ನಿಮ್ಮ ಗೆಳತಿ ಬಂದಮೇಲೆ ಎಲ್ರೂ `ಬರ್‍ತೀವಿ ಮಾಮ’ ಎಂದು ಹೊರಟು ಸೈಕಲ್ ಏರಿದಾಗ ಒಂಥರ ಆನೂಹ್ಯ ಅನುಭವಕ್ಕೆ ಪಕ್ಕಾದವನಂತೆ ಗಣಪತಿ ದೇವಸ್ಥಾನದ ಕಾರ್ಯಾಗಾರಕ್ಕೆ ತಿರುಗಿದ್ದೆ.
ಈ ವರ್ಷದ ಆರಂಭದಲ್ಲೇ ಅಲ್ಲವೆ? ನೀನು ದಿಢೀರನೆ ಫೋನ್ ಮಾಡಿ, `ಮಾಮ, ನಾವು ಮೂವರು ಟೂರ್ ಮೇಲೆ ಬೆಂಗಳೂರಿಗೆ ಬರ್‍ತಾ ಇದೀವಿ. ನಿಮ್ಮನೆಗೆ ಬಂದು ಹೋಗ್ತೀವಿ’ ಎಂದಿದ್ದೆ. ನಾನು ನಿಮ್ಮೆಲ್ಲರನ್ನೂ ರೈಲು ನಿಲ್ದಾಣದಿಂದ ಕರೆದುಕೊಂಡು ಬಂದು ಉಪ್ಪಿಟ್ಟು ಮಾಡಿ ಕೊಟ್ಟೆ. ಆಮೇಲೆ ನೀವೇ ನನಗೆ ಚಹಾ ಮಾಡಿ ಕೊಟ್ಟಿರಿ. ಎಲ್ಲರೂ ಚಟಪಟ ಮಾತನಾಡುತ್ತ ರೆಡಿಯಾದ ಮೇಲೆ ಮುನಿರೆಡ್ಡಿ ಪಾಳ್ಯದ ದೂರದರ್ಶನ ಕಚೇರಿಗೆ ಹೋದೆವು. ನೀವು ನನಗೆ ಥ್ಯಾಂಕ್ಸ್ ಹೇಳಿ ಮುಂದಿನ ಪ್ರವಾಸಕ್ಕೆ ಮುನ್ನಡೆದಿರಿ.
ಅದಕ್ಕಿಂತ ಮುಂಚೆ ಜನವರಿಯಲ್ಲಿ ಇನ್ನೂ ಒಂದು ಘಟನೆ ನಡೆದಿತ್ತು. ಕೋಸ್ ಮುಗಿಯುವ ಮುನ್ನವೇ ಬೆಂಗಳೂರಿಗೆ ಬಂದು ಯಾವುದಾದರೂ ಮೀಡಿಯಾ ಹೌಸ್‌ನಲ್ಲಿ ಕೆಲಸಕ್ಕೆ ಸೇರಿಕೊಳ್ಳುವ ತವಕ ನಿನ್ನಲ್ಲಿತ್ತು. ನಿನ್ನ ಸೋದರಮಾವನೂ ಮಾತಾಡಿದ ಮೇಲೆ ನನಗೆ ಫೋನ್ ಮಾಡಿದ್ದೆ. ಬಹುಶಃ ನಾವು ಅವತ್ತು ಸುಮಾರು ಒಂದು ತಾಸು ಮಾತಾಡಿದ್ದೇವೇನೋ. ಕ್ಯಾಂಪಸ್ಸಿನಲ್ಲಿ ಇರುವ ಸಮಸ್ಯೆಗಳ ಬಗ್ಗೆ ಮಾತನಾಡುತ್ತ ನಿನ್ನ ಕಣ್ಣು ಹನಿಗೂಡಿ ಮಾತೆಲ್ಲ ಒದ್ದೆಯಾಗಿತ್ತು. ತೋರಣಗಲ್ಲಿನ ಗಜಿಬಿಜಿ ಕೆಲಸಗಳ ಮಧ್ಯೆ ನಿನ್ನನ್ನು ಸಮಾಧಾನ ಮಾಡುವ ಹೊತ್ತಿಗೆ ನನಗೆ ಸಾಕು ಸಾಕಾಗಿತ್ತು. ಕೊನೆಗೂ ನೀನು ಕೋರ್ಸ್ ಮುಗಿಸಿ, ಪರೀಕ್ಷೆಗಳನ್ನೆಲ್ಲ ಅಟೆಂಡ್ ಮಾಡಿ ಕೆಲಸಕ್ಕೆ ಸೇರಿಕೋ ಎಂದೇ ನಾನು ಪಟ್ಟು ಹಿಡಿದೆ. ಎಲ್ಲರೂ ಹೀಗೆ ಹೇಳಿದರಲ್ಲ ಎಂದು ನೀನು ಕೊನೆಗೆ ಕೋರ್ಸ್ ಕಡೆ ಗಮನ ಕೊಟ್ಟಾಗ ಇವಳಿಗೆ ನಮ್ಮ ಮೇಲೆ ಪ್ರೀತಿಯಷ್ಟೇ ಅಲ್ಲ, ಗೌರವವೂ ಬೇಕಾದಷ್ಟಿದೆ ಎಂದೆನಿಸಿತ್ತು.
ನಾನು ವಿಚಿತ್ರ ಏಕಾಂಗಿತನಕ್ಕೆ ಶರಣಾಗಿದ್ದ ಸಮಯದಲ್ಲೇ ನೀನು ಸದ್ದಿಲ್ಲದೆ ಬೆಂಗಳೂರಿಗೆ ಬಂದು ಕೆಲಸಕ್ಕೆ ಸೇರಿಕೊಂಡೆ. ನನಗೊಂದು ಎಸ್ ಎಂ ಎಸ್ ಕಳಿಸಿದ್ದೆಯಂತೆ; ನನ್ನ ಗಮನಕ್ಕೆ ಬಂದಿರಲಿಲ್ಲ.
ನಿನ್ನ ಕೊನೆಯ ಭೇಟಿಯಲ್ಲಿ ನೀನು ಚಟಪಟ ಬಿಡು, ಒಂದೂ ಮಾತನಾಡದೆ ಸುಮ್ಮನೆ ಮಲಗಿದ್ದೆ. ಬೆಂಗಳೂರಿನಿಂದ ಸಾಗರಕ್ಕೆ ಹೋದಾಗಲೂ ನೀನು ನನ್ನನ್ನ ಮಾತನಾಡಿಸಬಹುದು, ಎದ್ದು ಕೂತು `ಏನು ಮಾಮ ಇಲ್ಲಿ’ ಎಂದು ಕೇಳಬಹುದು ಎಂದು ನಾನು ಉಸಿರುಗಟ್ಟಿ ಕಾಯುತ್ತ ಕೂತಿದ್ದೆ. ಹಾಗೇನೂ ನಡೆಯಲಿಲ್ಲ. ಪಕ್ಕದಲ್ಲೇ ನಿನ್ನ `ಅಮ್ಮ’ನಂತೇ ಇದ್ದ ಸೋದರಮಾವನೂ ಕೂತಿದ್ದ.
ನಿನ್ನ ಸಹೋದ್ಯೋಗಿ, ಮಿತ್ರ ಅರುಣನೂ ನಮ್ಮ ಜೊತೆ ಬಂದ. “ನಿನ್ನೆಯೆಲ್ಲ ಇವಳು ಆರ್ಕುಟ್‌ನಲ್ಲಿ ತನ್ನ ಹಳೇ ಗೆಳತಿಯರಿಗೆ ಸಂದೇಶ ಬರೀತಿದ್ಳು ಸರ್’ ಎಂದು ನಿನ್ನ ಕಚೇರಿಯ ಆ ದಿನದ ಕ್ಷಣಗಳನ್ನು ಮೆಲ್ಲಗೆ ಉಸುರಿದ. ನೀನು ಕೇಳಿಸಿಕೊಂಡು ಬೈಯುತ್ತೀಯೇನೋ ಎಂಬ ಪ್ರೀತಿಯುಕ್ತ ಭಯ ಅವನೊಳಗಿತ್ತೇನೋ…
ಸೆಪ್ಟೆಂಬರ್ ೬ರ ನಡುರಾತ್ರಿ ನೀನು ಕ್ಯಾಸನೂರಿನ ಆ ಬಯಲಿನಲ್ಲಿ ಚಿತೆ ಏರಿ ಕಾಣದೂರಿಗೆ ಹೊರಟೇ ಹೋದಾಗ ನನಗೆ ನಿಜಕ್ಕೂ ಭಯವಾಯಿತು. ಓದುವಾಗ, ಕಲಿಯುವಾಗ ತೋರಿದ ಧೈರ್ಯವನ್ನೇ ಇಲ್ಲೂ ನಮ್ಮೆದುರು ತೋರಿಸಿಬಿಟ್ಟೆಯಲ್ಲ ಎಂದು ಬೆಚ್ಚಿದೆ. ಪದೇ ಪದೇ ನಿನ್ನ ಮುಖ, ನಿನ್ನ ನಸುನಗು, ನಿನ್ನ `ಮಾಮ, ಮಾಮ’ ಎಂಬ ಮಧುರ ಕರೆ – ಎಲ್ಲವೂ ನನ್ನೆದುರು ಬರುತ್ತಿದ್ದವು. ಇಂಥ ಧೈರ್ಯವನ್ನು ನಾವು ತೋರಿಸುವುದಕ್ಕೆ ಆಗುತ್ತದೆಯೇ ಎಂಬ ಪ್ರಶ್ನೆ ಪದೇ ಪದೇ ನನ್ನೊಳಗೆ ಮೂಡುತ್ತಿತ್ತು. ಕಲಿವ ತವಕ ಹೊತ್ತ ೨೩ರ ಹರೆಯದ ಯಾವ ಹುಡುಗರೂ, ಯಾವ ಹುಡುಗಿಯರೂ ಇಂಥ ಧೈರ್ಯ ತೋರಬಾರದು ಕಣೆ.
ಬಹುಶಃ ನೀನು ಬೆಂಗಳೂರು ನಿನ್ನನ್ನು ಚಲೋ ನೋಡಿಕೊಳ್ಳುತ್ತದೆ ಎಂಬ ಭರವಸೆಯಿಂದ ಆ ರಾತ್ರಿ ಮನೆಗೆ ಹೋಗುತ್ತಿದ್ದೆಯೇನೋ. ವಾಹನ ಅಪಘಾತಕ್ಕೆ ಸಿಲುಕುವುದು ಬೆಂಗಳೂರಿನಂಥ ನಗರ/ನರಕದಲ್ಲಿ ಬದುಕುತ್ತಿರುವವರ ಒಂದು ದಿನವಹಿ ಸಾಧ್ಯತೆ. ಅದಕ್ಕೆ ನೀನೂ ಪಕ್ಕಾಗಿಹೋದೆ ಎಂಬ ಸುದ್ದಿ ಕೇಳಿ ನಂಬಲಾಗದೆ ನಿನ್ನೇ ಕೇಳಿಬಿಡೋಣ ಎಂದು ಧಾವಿಸಿದೆ.
ಅಷ್ಟು ಹೊತ್ತಿಗೆ ನೀನು ಮಾತನಾಡುವುದನ್ನು ನಿಲ್ಲಿಸಿ ಎಷ್ಟೋ ತಾಸುಗಳಾಗಿದ್ದವು.

———-

Leave a Reply