ಕುರುಹಿಲ್ಲದ ನೆರಳು

ಮತ್ತೆ ನೋಡಿದರೆ ಕಾಣದ ಹಾಗೆ
ನೆಲದಲ್ಲೇ ಕರಗಿಹೋಗಿದ್ದ
ಕುರುಹಿಲ್ಲದ ನೆರಳು ಎಲ್ಲಿಯವರೆಗೆ ಹಾದು ಹೋಗಿರಬಹುದು ಒಳಗೆ
ನೆಲ ಕದಡಿರಬಹುದು, ನೀರು ತಣ್ಣಗೆ ಕೊಯ್ದಿರಬಹುದು
ಅಥವಾ ಲಾವಾರಸ ಹೀಗೆ ಮುಟ್ಟಿ ಮುಟ್ಟಿ ಸುಟ್ಟಿರಬಹುದು
ನನ್ನ ನೆರಳಿನ ಕೋಮಲತೆಯನ್ನು
ಬರಿದೆ ಭಾವಿಸಬಾರದು ಎಂದು ಕರೆದಿದ್ದೆ ಯಾರದೋ ಹೆಸರು
ನೆರಳು ಬೆರಗಾಗಬಾರದು ಎಂದು ಬರೆದಿದ್ದೆ ಎಂಥದೋ  ಹಾಳೆ
ಯಾರ ಎದೆಯೊಳಗೂ ಕವಿಯದೆ, ನಿಲ್ಲದೆ, ನಡೆಯದೆ
ಬಂದುಬಿಡಬೇಕು ಎಂದು ಉಸುರಿದ್ದೆ ಅದಕ್ಕೆ
ಇರಬೇಕು ಹೀಗೆ ಪಾತಾಳ ಹೊಕ್ಕ ಭಾವಗಳೆಲ್ಲ
ಕೊರೆಯುತ್ತಿವೆ ನನ್ನ ಹಣೆ, ಕೆನ್ನೆ, ಕಿವಿಯಂಚು.

ಈ ಭಾವಗುಚ್ಚಗಳ ಹೀಗೆಯೇ
ಕಟ್ಟಿ ಎಸೆದರೆ ಹೇಗೆ
ಯಾರೂ ಗಮನಿಸದ ಮಾತಿನ ಹಾಗೆ
ಕಳೆದೇಹೋಗಬಹುದು ಗಾಳಿಯಲ್ಲಿಯೂ ಕಣವಾಗದೆ
ಕೆಂಪು ಪಕಳೆಗಳಲ್ಲಿ ಅಣುವಾಗದೆ
ಯಾರ ಬೆರಳಿಗೂ ಸಿಗದೆ
ನಾನೂ ಅಂಟಿಕೊಳ್ಳಬಹುದು
ಅನಾಥರಿಗೂ ಸಿಗದ ಏಕಾಂತಕ್ಕೆ

ಚಹರೆಯನ್ನೇ ಹೋಲದ
ನನ್ನ ನೆರಳಿನ ಹಾಗೆ
ದಿಕ್ಕು ಮರೆತ
ನನ್ನ ಬೆರಳಿನ ಹಾಗೆ

ಓ ದೇವರೇ
ನನ್ನ ಕಣ್ಣೊಳಗೆ ಯಾರೂ ಇಣುಕದ ಹಾಗೆ

Leave a Reply