ತಣ್ಣಗೆ ಮಲಗಿದೆ ರಸ್ತೆ

ಮಗು, ತಣ್ಣಗೆ ಮಲಗಿದೆ ರಸ್ತೆ, ಎಬ್ಬಿಸಬೇಡ.

ಭರ್ರನೆ ಬೀಸೋ ಗಾಳಿಗೆ ಬೀಗಬೇಡ. 

ಟಾರು ಗೀರುತ್ತ ಹಾಗೆ ರೊಯ್ಯನೆ ಹೋಗಬೇಡ. 

ಹೆದ್ದಾರಿಯಿದು. ನಗರದುದ್ದಕ್ಕೂ ಹರಿದಿರೋ ರಕ್ತನಾಳ

ಕೆಲವೊಮ್ಮೆ ಬಿಗಿಯಾಗಿ ಸುತ್ತುತ್ತೆ ನಮ್ಮನ್ನೆ. 

ಉಸಿರುಗಟ್ಟಿಸೋದಿರಲಿ, ಕಪಾಲವನ್ನೇ ಒಡೆದು

ಮೈಮೇಲೆ ಚೆಲ್ಲಿಕೊಳ್ಳುತ್ತೆ ಮಾಂಸ-ಮಜ್ಜನ.

 

 

ಮಗು, ತಣ್ಣಗೆ ಮಲಗಿದೆ ರಸ್ತೆ ಎಬ್ಬಿಸಬೇಡ. 

ಜಡೆ ಕಟ್ಟಿ ಕುಳಿತುಕೋ, ನಿನ್ನ ಝರಿ ಲಂಗ ಹುಷಾರು

ನಿನ್ನ ಕೊರಳೊಳಗೆ ಹರಿದಿರೋ ಸರ ಕೊಯ್ಯಬಹುದು

ಟಯರುಗಳು ಎಳೆದಾಡಿದರೆ. 

ನಿನ್ನೊಳಗೆ ಕ್ಷಣಮಾತ್ರ ಆತಂಕ ಹುಟ್ಟಿ ಕಣ್ಣು ತೆರೆದಂತೆಯೇ 

ನಿಂತೇಹೋಗುತ್ತೆ ಮಗು, ನಿನ್ನ ದಿನಚರಿ. 

ಶುರುವಾಗುತ್ತೆ ಪೋಲೀಸರ ಮಹಜರು. 

ಮಗೂ, ಈ ಊರು ಸ್ವಲ್ಪ ಭಾವವಿಕಲ

ಸಕಲವಿಕೃತಿಗಳ ಗೋಜಲು. ಹೂಗಿಡದ ತೋಟದ ಪಕ್ಕದಲ್ಲೇ 

ಹೊಸಕಿಹೋಗುತ್ತೆ ಗುಲಾಬಿ ಹೂವು. 

ನಿನ್ನ ಬಿಸಿ ಅಂಗೈಯೊಳಗೆ ಇದ್ದ ಫೋನು ಎಲ್ಲೋ ಹಾರಿ

ಹೋಗುತ್ತೆ ಮಗೂ….. ರಸ್ತೆ ಮಲಗಿದೆ ಬಿಡು, ಎಬ್ಬಿಸಬೇಡ. 

 

ಮಗು ಈ ರಸ್ತೆ ತಣ್ಣಗೆ ಮಲಗಿದೆ

ಇಲ್ಲಿ ತಿರುವುಗಳು ಬಲವಾಗಿವೆ. 

ಏರಿಳಿತ ನಿನ್ನೊಳಗೆ ರೊಚ್ಚೆಬ್ಬಿಸಿ

ವೇಗೋತ್ಕರ್ಷಕ್ಕೆ ಎಳೆಯುತ್ತೆ; 

ಮೊದಲೇ ಹೇಳಿದ್ದೆ… ನಮ್ಮೆಲ್ಲ 

ಭಾವಗುಚ್ಚಗಳನ್ನು ತರಿದುಹಾಕುತ್ತೆ

ರಸ್ತೆ ತಣ್ಣಗೆ ನಮ್ಮನ್ನು ಹಾಸಿಕೊಂಡೇ ಮಲಗುತ್ತೆ…. 

ಈ ರಸ್ತೆ ತಣ್ಣಗೆ ನಮ್ಮನ್ನು ಮಲಗಿಸುತ್ತೆ ಮಗೂ…. 

 

ಮಗು…. ಮಗು… ಎಲ್ಲಿದ್ದೀಯ ಹೇಳೆ….. 

ಮಾತಾಡೆ….. ಮಗೂ….. ಹೇ ಪುಟ್ಟಾ….

0 thoughts on “ತಣ್ಣಗೆ ಮಲಗಿದೆ ರಸ್ತೆ

Leave a Reply