ಬೇಯರ್ – ಮೊನ್ಸಾಂಟೋ ವಿಲೀನ ವಿಚಾರ: ವಿಷಗುಡಾಣದಲ್ಲಿ ಬೀಜಬಿಡಾರ

ಬೇಯರ್ – ಜಗತ್ತಿನ ದೈತ್ಯ ಕೀಟನಾಶಕ ಕಂಪನಿ. ಮೊನ್ಸಾಂಟೋ –  ದೈತ್ಯ ಬೀಜ ಉತ್ಪಾದನಾ ಕಂಪನಿ. ಇವೆರಡೂ ವಿಲೀನವಾದರೆ? ಅದೇ `ವಿಷಬೀಜ’ ಯುಗ. ರೈತರ ಬಿತ್ತನೆ ಬೀಜದ ಹಕ್ಕುಗಳನ್ನು ಕಸಿದುಕೊಂಡೇ ಸವಾರಿ ಮಾಡುತ್ತಿದ್ದ ಮೊನ್ಸಾಂಟೋ  ಹೆಸರು ಇನ್ನಿಲ್ಲವಾಗಬಹುದು. ಆದರೆ ಈ ವಿಲೀನದಿಂದ ಹೊಸ ಪ್ರಮೇಯಗಳು ಹುಟ್ಟಿಕೊಂಡಿವೆ. ಅವೆಷ್ಟು ಭಯಂಕರವೆಂದರೆ ಅದರ ಮುಂದೆ ಕಾವೇರಿ ನೀರಿನ ಬಳಕೆಯ ಘಟನೆಯೂ ನಗಣ್ಯ! ಬಿತ್ತನೆ ಬೀಜ, ಬೆಳೆಪದ್ಧತಿ, ಮಾರುಕಟ್ಟೆಯ ಅವಕಾಶ – ಎಲ್ಲವನ್ನೂ ಕಳೆದುಕೊಂಡ ರೈತರು ನೀರು ಪಡೆದರೆಷ್ಟು ಬಿಟ್ಟರೆಷ್ಟು? ಕಾವೇರಿಯಿಂದ ಗೋದಾವರಿವರೆಗಷ್ಟೇ ಅಲ್ಲ, ಗಂಗೆ, ಸಿಂಧೂ, ಬ್ರಹ್ಮಪುತ್ರಾವರೆಗೂ ಬೇಯರ್ ನಮ್ಮೆಲ್ಲ ರೈತರನ್ನು ತನ್ನ ಕಾರ್ಪೋರೇಟ್‌ ಪಾಶದಲ್ಲಿ ಬಿಗಿಯಲಿದೆ. ಆಧುನಿಕ ಡಿಜಿಟಲ್‌ ಕೃಷಿ ತಂತ್ರಜ್ಞಾನದ ಹೆಸರಿನಲ್ಲಿ ನೂರಾರು ದೇಶಗಳ ಮಗ್ಗುಲು ಮುರಿಯಲಿದೆ.  ಈಗಾಗಲೇ ಸ್ಮಾರ್ಟ್‌ಫೋನ್‌ ಮೋಹಕ್ಕೆ ಸಿಲುಕಿದ, ಇನ್ನೇನು ಸಿಲುಕಲಿರುವ ರೈತರನ್ನು ತನ್ನ ಉತ್ಪನ್ನಗಳನ್ನೇ ಬಳಸುವ ಕೃಷಿಪದ್ಧತಿಗೆ ಒಲಿಸಿಕೊಳ್ಳುವ ಹೊಸ ವರಸೆ ಶುರುವಾಗಿದೆ. ಇದೆಲ್ಲವೂ ಉತ್ಪ್ರೇಕ್ಷೆ ಅನ್ನಿಸಿದರೆ ಈ ಪ್ಯಾರಾ ಬಿಟ್ಟು ಮುಂದೆ ಓದಿ.

monsanto-bayer

ನಿಮಗೆ ಹೆಚ್ಚಾಗಿ ಗೊತ್ತಿರದ ವಿಯೆಟ್ನಾಂ ಯುದ್ಧದಲ್ಲಿ ಈ ಎರಡೂ ಕಂಪನಿಗಳು ಒಗ್ಗಟ್ಟಾಗಿ ತಮ್ಮ ಏಜೆಂಟ್‌ ಆರೆಂಜ್‌ ಸಸ್ಯನಾಶಕದ ಮೂಲಕ  ಉತ್ತರ ವಿಯೆಟ್ನಾಂನ ೪೫ ಲಕ್ಷ ಎಕರೆ ಕಾಡನ್ನು ನಾಶಪಡಿಸಿ ಅಮೆರಿಕಾದ ವಿಮಾನದಾಳಿಗೆ ಸಹಕರಿಸಿದ್ದವು. ಕಾಡಿನ ನಾಶದ ಜೊತೆಗೇ ವಿಯೆಟ್ನಾಮೀಯರಲ್ಲಿ ಗಡ್ಡೆಗಳು ಕಾಣಿಸಿಕೊಂಡವು; ವಿಕಲಾಂಗ ಮಕ್ಕಳು ಹುಟ್ಟಿದವು; ಮನೋರೋಗವೂ ಹಬ್ಬಿತು. ನಾಲ್ಕು ಲಕ್ಷ ವಿಯೆಟ್ನಾಮೀಯರು ಸತ್ತರು. ಅಮೆರಿಕಾದ ಯೋಧರನ್ನೂ ಈ ಶಾಪ ಬಿಡಲಿಲ್ಲ. `ಆಪರೇಶನ್‌ ರಾಂಚ್‌’ ಹೆಸರಿನ ಈ ಕಾರ್ಯಾಚರಣೆಯು ಬರೋಬ್ಬರಿ ೧೨ ವರ್ಷಗಳ ಕಾಲ (೧೯೬೧-೭೨) ನಡೆಯಿತು. ಈ ಅವಧಿಯಲ್ಲಿ ಒಟ್ಟು  ಎರಡು ಕೋಟಿ ಗ್ಯಾಲನ್‌ಗಳಷ್ಟು ಸಸ್ಯನಾಶಕಗಳನ್ನು ವಿಯೆಟ್ನಾಮಿನಲ್ಲಿ ಬೀರಲಾಗಿತ್ತು. ಇಷ್ಟಾಗಿ ಬೇಯರ್ ಕಂಪನಿಯು ಹುಟ್ಟಿದ್ದೇ ಹಿಟ್ಲರನ ನಾಝಿ ಆಡಳಿತದ ಬೆಂಬಲದಲ್ಲಿ!  ಈ ಸಂಸ್ಥೆಯ ಅಧ್ಯಕ್ಷನಾಗಿದ್ದ ಡಾ|| ಫ್ರಿಜ್‌ ಟರ್ ಮೀರ್ ಬೇರಾರೂ ಅಲ್ಲ; ಲಕ್ಷಗಟ್ಟಳೆ ಯೆಹೂದಿಗಳನ್ನು ಕೊಂದ ನರ್ವ್ ಗ್ಯಾಸ್‌ `ಝಿಕ್ಲೋನ್ – ಬಿ’ಯ ಅನ್ವೇಷಕ!

ಇತಿಹಾಸವನ್ನೂ ಒಂದು ಕ್ಷಣ ಬಿಡೋಣ. ವಿಲೀನದ ನಂತರ ಬೇಯರ ಸಂಸ್ಥೆಯ ವಾರ್ಷಿಕ ವಹಿವಾಟು ೬೭ ಬಿಲಿಯ ಡಾಲರ್ ಆಗಲಿದೆ ಎಂಬುದು ಒಂದು ಸಣ್ಣ ಅಂದಾಜು. ಈ ಮೆಗಾ- ರಾಸಾಯನಿಕ/ಬೀಜ ಸಂಸ್ಥೆಯು ಜಗತ್ತಿನ ಬಿತ್ತನೆ ಬೀಜ ಮಾರುಕಟ್ಟೆಯ ಶೇಕಡಾ ೨೯ರಷ್ಟನ್ನು (ಮೂರನೇ ಒಂದರಷ್ಟು) ಮತ್ತು ಶೇಕಡಾ ೨೪ರಷ್ಟು ಕೀಟನಾಶಕ ಮಾರುಕಟ್ಟೆಯನ್ನು (ಒಟ್ಟಾರೆ ಮಾರುಕಟ್ಟೆಯ ಕಾಲು ಭಾಗ) ಹೊಂದಲಿವೆ.  ಈ ಬಗೆಯ ವಿಷ-ಬೀಜ ವಿಲೀನ ಇದೇನೂ ಹೊಸತಲ್ಲ. ಕೆಮ್‌ಚೀನಾ ಮತ್ತು ಸಿಂಜೆಂಟಾ ವಿಲೀನವಾಗಿದೆ; ಡೋವ್‌ ಮತ್ತು ಡ್ಯೂಪಾಂಟ್ ವಿಲೀನ ಪ್ರಕ್ರಿಯೆ ನಡೆದಿದೆ. ಹೀಗೆ ವಿಷ-ಬೀಜ ಕಂಪೆನಿಗಳ ಅನುಕೂಲಸಿಂಧು ವಿಲೀನಗಳು ಹೆಚ್ಚಾಗುತ್ತಿವೆ. . ಅಂದಮೇಲೆ ರೈತರು ಬೀಜ ಕೇಳಲು ವಿಷದ ಸಂಸ್ಥೆಯ ಅಂಗಡಿಗೇ ಹೋಗಬೇಕು. ೮೦ರ ದಶಕದಲ್ಲಿ ರಕ್ತ ಹೆಪ್ಪುಗಟ್ಟುವ ಔಷಧದ ಮೂಲಕ ಏಯ್ಡ್ಸ್‌ ರೋಗದ ಹೆಚ್ಚಳಕ್ಕೂ, ಸ್ಟಾಟಿನ್‌ ಬೇಕೋಲ್ ಮೂಲಕ ನೂರಾರು ಜನರ ಮರಣಕ್ಕೂ, ಜನನ ನಿಯಂತ್ರಣದ ಗುಳಿಗೆಯ ಮೂಲಕ ಹಲವು ಮಾರಕ ರೋಗಗಳಿಗೂ, ಪ್ರತ್ಯೌಷಧವೇ ಇಲ್ಲದ ಕ್ಸಾರೆಲ್ಟೋ  ಎಂಬ ಹೆಪ್ಪುನಿರೋಧಕ ಔಷಧಕ್ಕೂ, ಬೇಟ್ರಿಲ್‌ ಎಂಬ ಔಷಧದದ ಮೂಲಕ ರಾಸುಗಳ ರೋಗಕ್ಕೂ, ಇಮಿಡಾಕ್ಲೋಪ್ರಿಡ್, ಕ್ಲೋಥಿಯಾನಿಡಿನ್  ಮೂಲಕ ಭಾರೀ ಪ್ರಮಾಣದಲ್ಲಿ ೧೨೦ ದೇಶಗಳಲ್ಲಿನ ಜೇನು ಸಂಕುಲದ ನಾಶಕ್ಕೂ ಕಾರಣವಾದ ಬೇಯರ್ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ.

ಈ ವಿಲೀನದಿಂದ ಕುಲಾಂತರಿ ತಳಿಗಳನ್ನು ಕೃಷಿಕರ ಮೇಲೆ ಹೇರುವ ಯತ್ನಗಳಿಗೆ ಇನ್ನಷ್ಟು ಬಲ ಬರಲಿದೆ. ಇನ್ನೊಂದೆಡೆ ಈ ವಿಲೀನಗಳು ಇಂಥ ಕಂಪನಿಗಳ ಹತಾಶೆಯ ಪ್ರತೀಕ ಎಂದೂ ಬಣ್ಣಿಸಲಾಗುತ್ತಿದೆ. ಹೆಚ್ಚು ಇಳುವರಿ ಕೊಡುತ್ತವೆ ಎಂದೇ ಮಾರುಕಟ್ಟೆಗೆ ತಳ್ಳಿದ ಈ ಕುಲಾಂತರಿ ತಳಿಗಳು ಹಾಗೇನೂ ಫಸಲು ನೀಡುತ್ತಿಲ್ಲ ಎಂದು ಅಮೆರಿಕಾದ ಕಾರ್ಪೋರೇಟ್‌ ಸ್ನೇಹಿ ಸಂಸ್ಥೆ – ನ್ಯಾಶನಲ್‌ ಅಕಾಡೆಮೀಸ್‌ ಆಫ್ ಸೈನ್ಸಸ್, ಇಂಜಿನಿಯರಿಂಗ್‌ ಎಂಡ್ ಮೆಡಿಸಿನ್‌ – ಯೇ ಹೇಳಿದೆ!

ತನ್ನ ಹೆಸರನ್ನು ಮರೆಮಾಚಿ ಬಚಾವಾಗಬಹುದು ಎಂದು ಮೊನ್ಸಾಂಟೋ ಭಾವಿಸಿರಬಹುದು. ಆದರೆ ಬರುವ ಅಕ್ಟೋಬರ್ ೧೪-೧೬ರಂದು ಹೇಗ್‌ನಲ್ಲಿ ನಾಗರಿಕರ ನ್ಯಾಮಂಡಳಿಯು ಮೊನ್ಸಾಂಟೋದ ಪಾಪಕೃತ್ಯಗಳ ಬಗ್ಗೆ ತನ್ನ ವಿಚಾರಣೆ ನಡೆಸಲಿದೆ.

ಅದೇನೇ ಇದ್ದರೂ ಜಗತ್ತಿನಲ್ಲಿ ಕೃಷಿ ಒಳಸುರಿ (ಇನ್‌ಪುಟ್) ಮಾರುಕಟ್ಟೆಯ ಪ್ರಮಾಣ ೧೨ ಸಾವಿರ ಕೋಟಿ ಪೌಂಡ್‌ ಎಂಬ ಸಣ್ಣ ಲೆಕ್ಕವನ್ನು ಈ ವಿಲೀನದ ಬಗ್ಗೆಯೇ ಶುರುವಾಗಿರುವ ವೆಬ್‌ಸೈಟಿನಲ್ಲಿ ಬೇಯರ್ ಸಂಸ್ಥೆಯು ಪ್ರಾಮಾಣಿಕವಾಗಿ ಕೊಟ್ಟಿದೆ.  ರೈತರಿಗೆ ಹೇಳಿ ಮಾಡಿಸಿದ ಪರಿಹಾರಗಳನ್ನು ಕೊಡುವುದೇ ಈ ಸಂಸ್ಥೆಯ ಹೊಸ ಮಾರುಕಟ್ಟೆ ತಂತ್ರ.  ಇದಕ್ಕಾಗಿ ಬೇಯರ್ `ಡಿಜಿಟಲ್‌ ಕೃಷಿ’ ಎಂಬ ಹೊಸ ಪದಗುಚ್ಛವನ್ನೇ ರೂಪಿಸಿ ವ್ಯಾಪಕವಾದ ಬಲೆ ಬೀಸುತ್ತಿದೆ.  ನಿಮ್ಮ ಊರಿನ ಹವಾಮಾನ ಮತ್ತಿತರ ಅಂಶಗಳನ್ನು ಸೂಕ್ತವಾಗಿ ಲೆಕ್ಕಹಾಕಿ ನೀವು ಹೇಗೆ ಕೃಷಿ ಮಾಡಬೇಕು ಎಂಬ ಎಲ್ಲ ಸೂತ್ರಗಳನ್ನೂ ಅದು ಮೊಬೈಲ್‌ ಮೂಲಕವೇ ನೀಡಲಿದೆ. ಇನ್ನು ರೈತರು `ರೈತರಿಗೆ ಸಲಹೆ’ ಕಾರ್ಯಕ್ರಮಗಳನ್ನು ಕೇಳಬೇಕಿಲ್ಲ ರೈತ ಸಂಪರ್ಕ ಕೇಂದ್ರಗಳಿಗೆ ಹೋಗಬೇಕಿಲ್ಲ. ಬೇಯರ್ ನ ಸ್ಮಾರ್ಟ್‌ಫೋನ್ ಆಪ್ ಇದೆಯಲ್ಲ? ಹೀಗೆ ಬೇಯರ್ ಆಧುನಿಕತೆಯ ವೇಷ ಹಾಕಿಕೊಂಡು, ಮೊನ್ಸಾಂಟೋ ಬೀಜದ ಚೀಲವನ್ನು ಹೊತ್ತುಕೊಂಡು ರೈತರ ಮನೆಗಳಿಗೆ ವಕ್ಕರಿಸಲಿದೆ. ಅಧಿಕ ಇಳುವರಿ ಎಂದರೆ ಬೇಯರ್ ಕೊಡುವ ಬೀಜ; ಅದಕ್ಕಾಗಿ ಚಿಮ್ಮಿಸಬೇಕು ಬೇಯರ್ ಕೀಟನಾಶಕ / ಸಸ್ಯನಾಶಕ. ಜೀವವೈವಿಧ್ಯಕ್ಕೇ ಮಾರಕವಾದ ಈ ಕೃಷಿ ವಿಕೃತಿಯನ್ನು ಡಿಜಿಟಲ್ ಅವತಾರದ ಮೂಲಕ ಹಬ್ಬಿಸಲು ಬೇಯರ್ ಮುನ್ನುಗ್ಗಿದೆ.

agricultureindustry

bayer

ವರ್ಷದ ಹನ್ನೆರಡೂ ತಿಂಗಳುಗಳ ಕಾಲ ಕೃಷಿ ವ್ಯವಹಾರವನ್ನು ಮಾಡಬಹುದು? ಜಗತ್ತಿನ ಆಹಾರ ಸುರಕ್ಷತೆಗಾಗಿ ಗೋಧಿ ಕೃಷಿಯನ್ನು ಹೇಗೆ ಸುಧಾರಿಸಬಹುದು? ತಮ್ಮ ಟ್ರಾಕ್ಟರ್‌ಗಳಲ್ಲಿ ಆಧುನಿಕ ಗ್ಯಾಜೆಟ್‌ಗಳನ್ನು ಪೇರಿಸಿಕೊಂಡು ರೈತರು ಹೇಗೆ  ಅಂಕಿ ಅಂಶಗಳನ್ನು ವಿಶ್ಲೇಷಿಸಿಕೊಂಡು ಉತ್ತಮ ಕೃಷಿ ಅಳವಡಿಸಿಕೊಳ್ಳಬಹುದು? ಜಗತ್ತಿನ ೧೦೦೦ ಕೋಟಿ ಜನರು (ಅಂದರೆ ಮುಂದೆ ಹುಟ್ಟುವ ಪೀಳಿಗೆಯನ್ನೂ ಸೇರಿಸಿಕೊಂಡು!)  ಹೇಗೆ ಸುಸ್ಥಿರ ಕೃಷಿಯನ್ನು ಸಾಧಿಸಬಹುದು? – ಇವೆಲ್ಲವನ್ನೂ ನೀವು ಬೇಯರ್ ಮೂಲಕ ತಿಳಿಯಬಹುದು. ಗೊತ್ತಾಯಿತಲ್ಲ? ನಿಮಗೆ ಬದುಕಬೇಕೆಂದಿದ್ದರೆ ಬೇಯರ್ ಕಂಪನಿಯೊಂದು ಇದ್ದರೆ ಸಾಕು ಅನ್ನಿಸುತ್ತಿಲ್ಲವೆ?

ಮುಂದೆ? ಕೀಟನಾಶಕಗಳನ್ನು ಸಿಂಪಡಿಸಲು ದ್ರೋನ್‌ಗಳೇ ಬಂದಿವೆ ಎಂದಮೇಲೆ ಬೇಯರ್ ಕನಸು  ನನಸಾಗಲೂ ಬಹುದು.

ಕೀಟನಾಶಕಗಳನ್ನು ಮಾರಿಯೇ ಬದುಕುವ ಬೇಯರ್‌ ಸುಸ್ಥಿರ ಬದುಕನ್ನು ಹೇಗೆ ರೂಪಿಸುತ್ತದೆ  ಎಂಬ ಚಿಕ್ಕ ಪ್ರಶ್ನೆಯೊಂದು ಉಳಿದುಕೊಳ್ಳುತ್ತದೆ. ಅದನ್ನೂ ನೀವು ಬೇಯರ್ ಕೊಡುವ ಇನ್ನಾವುದೋ ರಾಸಾಯನಿಕವನ್ನು ಮೂಸಿ ಮರೆಯಬಹುದು.

ಸಾವಯವ ಕೃಷಿ ನೀತಿಯೆಂದು ಬಡಬಡಿಸುವ ಸರ್ಕಾರಗಳು ಇನ್ನಾದರೂ ಜಗತ್ತನ್ನೇ ಆಳಹೊರಟ ಇಂಥ ಕೀಟನಾಶಕ ರಕ್ಕಸರಿಂದ ರೈತರನ್ನು ರಕ್ಷಿಸುವ ಕೆಲಸದಲ್ಲಿ ತೊಡಗಬೇಕಿದೆ. ತನ್ನ ಬೇಳೆ ಬೇಯಿಸಿಕೊಳ್ಳಲೆಂದು ಸಂಶೋಧನಾ ನಿಧಿಯನ್ನು ಎಸೆಯುವ ಇಂಥ ಕಂಪನಿಗಳ ಮುಖ ನೋಡಿಕೊಂಡು ನಮ್ಮ ಸಂಶೋಧಕ ವರ್ಗದವರು ತೆಪ್ಪಗಿದ್ದರೆ ಅವರನ್ನು ಈ ನಾಡು ಕ್ಷಮಿಸುವುದಿಲ್ಲ.

ಬದನೆಕಾಯಿ ಬಿಡಿ, ಸಾಸಿವೆಯೆಂಬ ಚಿಕ್ಕ ಕಾಳೂ ಕುಲಾಂತರಿಯಾಗುವ ಕಾಲ ನಮ್ಮ ಬುಡಕ್ಕೇ ಬಂದಿದೆ. ಸಾವಿಲ್ಲದ ಮನೆಯ ಸಾಸಿವೆ ಕಾಳಿನ ಬದಲು ಬೇಯರ್ ಇಲ್ಲದ ಹೊಲದ ದೇಸಿ ಸಾಸಿವೆ ಕಾಳು ಅಪರೂಪವಾಗಲಿದೆ. ಭೂಮಿಯೆಂಬ ಹಸಿರು ತಾಯಿಗೆ ವಿಷ ಕುಡಿಸುವ ಕೃತ್ಯವೇ ದಿನಚರಿಯಾಗಲಿದೆ.

ಆಗಬೇಕೆ?

Leave a Reply

Your email address will not be published. Required fields are marked *

1 × 5 =

This site uses Akismet to reduce spam. Learn how your comment data is processed.