ರಾಷ್ಟ್ರೀಯ ಆಹ್ವಾನ ಸಿಕ್ಕಿದೆ: ಪಂಥಾಹ್ವಾನ ಮುಂದಿದೆ!

ಗರಿಷ್ಠ ಪ್ರಮಾಣದ ಮತದಾನ; ಕನಿಷ್ಠ ಪ್ರಮಾಣದ ಹಿಂಸಾ ಪ್ರಕರಣಗಳು, `ಮೇಲಿನ ಯಾರೂ ಅಲ್ಲ’ ಎಂದು ದಾಖಲಿಸುವ ಅವಕಾಶ; ಪಕ್ಷಬೇಧವಿಲ್ಲದೆ ಹಿರಿಯ ನಾಯಕರ ವಿರುದ್ಧವೂ ಎಫ್‌ಐಆರ್…;೩೦ ವರ್ಷಗಳ ನಂತರ ಕಾಂಗ್ರೆಸೇತರ ಏಕಪಕ್ಷಕ್ಕೆ ಬಹುಮತ; ಸ್ವಾತಂತ್ರ್ಯದ ನಂತರದ ಕಾಂಗ್ರೆಸೇತರ ಪಕ್ಷದ ಮೊಟ್ಟಮೊದಲ ಸಾಧನೆ – ಲೋಕಸಭಾ ಚುನಾವಣೆಯ ವಿಶೇಷಗಳು ನನ್ನನ್ನು ಬೆರಗುಗೊಳಿಸಿವೆ. ಬಡತನ, ಹಸಿವು, ಪರಿಸರ ನಾಶ, ಕೊಳ್ಳುಬಾಕತನ, ಭ್ರಷ್ಟಾಚಾರ, ನಿರುದ್ಯೋಗದ ಹಲವು ಸಮಸ್ಯೆಗಳನ್ನು ಹೊಟ್ಟೆಯಲ್ಲಿ ಇಟ್ಟುಕೊಂಡೇ ಈ ಸಾಧನೆ ತೋರಿದ್ದೇವೆ.    

ನಿಜ, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುತ್ತಿದೆ. ಮೋದಿ ಅಲೆಯ ಫಲ ಸಿಕ್ಕಿದ ಮೇಲೆ ಬಿಜೆಪಿಯ ಪ್ರಣಾಳಿಕೆಯೇ ಆಡಳಿತದ ಮೂಲಮಂತ್ರ ಆಗಲಿದೆ. ಪ್ರಣಾಳಿಕೆಯ ಹಲವು ಅಂಶಗಳು ಪಕ್ಷದ ಆಂತರಿಕ ಚಿಂತನೆಯಲ್ಲೇ ಪ್ರಗತಿಯ ಚಹರೆ ಹೊಂದಿವೆ ಎಂದು ನನಗನ್ನಿಸಿದೆ. ಮೋದಿಯವರು ದೇಶದ ಉದ್ದಗಲಕ್ಕೂ ಮಾಡಿದ ಭಾಷಣಗಳಲ್ಲಿ ಅಭಿವೃದ್ಧಿಯ ನೂರಾರು ಅಂಶಗಳನ್ನು ಉಲ್ಲೇಖಿಸಿದ್ದಾರೆ. ಐದು `ಟಿ’, ಕಾಮನಬಿಲ್ಲಿನ ಅಭ್ಯುದಯ ಅಂಶಗಳು – ಹೀಗೆ ಹಲವು ಕನಸುಗಳನ್ನು ಬಿತ್ತಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಇವೆಲ್ಲ ಕಾರ್ಯಗತವಾಗಬೇಕು. ಸೇತುವೆ ಕಟ್ಟುವುದು ಅಭಿವೃದ್ಧಿ; ಆ ಸೇತುವೆಯನ್ನು ಕ್ರಮಿಸಿ ಶಾಲೆಗೆ ಹೋಗಿ ಕಲಿಯುವುದು ಅಭ್ಯುದಯ. ಅಭಿವೃದ್ಧಿ ಮತ್ತು ಅಭ್ಯುದಯದ ಸಮನ್ವಯ ದೃಷ್ಟಿಕೋನವನ್ನು ಹೊಸ ಸರ್ಕಾರ ಹೊಂದಬೇಕಿದೆ. ಕಾಂಕ್ರೀಟು ಮತ್ತು ಕಬ್ಬಿಣ ಆಧಾರಿತ ಅಭಿವೃದ್ಧಿ ಕಾರ್ಯಗಳು ಸಮಾಜದ ಸುಸ್ಥಿರ ವಿಕಾಸಕ್ಕೆ ದಾರಿಯಾಗಬೇಕು.

ರಸ್ತೆ, ರೈಲು, ದೂರಸಂಪರ್ಕ, ಇಂಟರ್‌ನೆಟ್ ಹೆದ್ದಾರಿಗಳ ನಿರ್ಮಾಣದೊಂದಿಗೆ ೧೦೦ ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸುವ ಭರವಸೆ ನಗರೀಕರಣಕ್ಕೆ ದಾರಿಯಾಗಬಾರದು; ಇದ್ದ ನಗರಗಳ ಮೇಲಿನ ಹೊರೆಯೂ ಹೆಚ್ಚಾಗಬಾರದು. ಯುವರಂಗದಲ್ಲಿ ಕ್ರೀಡೆ, ಉನ್ನತ ಶಿಕ್ಷಣ, ಸಂಶೋಧನೆ ಪ್ರಗತಿಯಾಗಬೇಕಿದೆ. ಎಲ್ಲ ಕೃಷಿ ಪಂಪ್‌ಸೆಟ್‌ಗಳಿಗೂ ಗುಣಮಟ್ಟದ ವಿದ್ಯುತ್ ದೊರಕುವುದಂತೂ ದೊಡ್ಡ ಸವಾಲು. ಇಂಧನ ಸುರಕ್ಷತೆ, ವಿದ್ಯುತ್ ಉತ್ಪಾದನೆಯಲ್ಲಿ ಸರ್ಕಾರವು ಪರಿಸರ ಸ್ನೇಹಿ ಕ್ರಮಗಳಿಗೆ ಮುಂದಾಗದಿದ್ದರೆ ದುಷ್ಪರಿಣಾಮ ಖಚಿತ. ವಿದ್ಯುತ್ತಿನ ದುರ್ಬಳಕೆ, ಅತಿಬಳಕೆಯನ್ನೇ ಸೂಕ್ತವಾಗಿ ನಿರ್ವಹಿಸಿದಲ್ಲಿ ಮೋದಿ ಸರ್ಕಾರ ಗಮನಾರ್ಹ ಸಂಪನ್ಮೂಲ ಕ್ರೋಡೀಕರಿಸಬಹುದು.

ಐದು ವರ್ಷಗಳಲ್ಲಿ ಶೇ. ೯೦ರಷ್ಟು ಸಾಕ್ಷರತೆ, ಮಕ್ಕಳು ಶಾಲೆ ಬಿಡುವ ದರ ಕುಸಿತ, ಶಿಕ್ಷಕರ ಗುಣಮಟ್ಟ ಹೆಚ್ಚಳ ೩೬ ವಿಶ್ವದರ್ಜೆಯ  ವಿಶ್ವವಿದ್ಯಾಲಯಗಳು, ಶೇ. ೧೦ ದಾಟಿದ ಜಿಡಿಪಿ ಬೆಳವಣಿಗೆ, ಕನಿಷ್ಠ ಒಂದು ಲಕ್ಷ ಅಂಗೀಕೃತ ಪೇಟೆಂಟ್‌ಗಳು, ೧೫ ಸಾವಿರ ಕಿಮೀಗಳ ಸೂಪರ್ ಹೆದ್ದಾರಿಗಳು, ಎಲ್ಲಾ ಗ್ರಾಮಗಳಿಗೂ ರಸ್ತೆ ಸಂಪರ್ಕ, ಕಾರ್ಬನ್ ಕ್ರೆಡಿಟ್‌ನಲ್ಲಿ ಏಶ್ಯಾದಲ್ಲೇ ಪ್ರಥಮ ಸ್ಥಾನ, ಅರಣ್ಯಪ್ರಮಾಣ ಶೇ. ೩೦ಕ್ಕೆ ಹೆಚ್ಚಳ, ಎಲ್ಲಾ ಪ್ರಜೆಗಳಿಗೂ ಏಕೀಕೃತ ನಾಗರಿಕ ಗುರುತು ಚೀಟಿ, ಆಡಳಿತದ ಎಲ್ಲ ಹಂತಗಳಲ್ಲೂ ಮಾಹಿತಿ ತಂತ್ರಜ್ಞಾನದ ಸಂಪೂರ್ಣ- ದಕ್ಷ ಅಳವಡಿಕೆ, ಆಂತರಿಕ- ಬಾಹ್ಯ ಭದ್ರತೆ, ಗಲಭೆಗಳಿಗೆ ಇತಿಶ್ರೀ  – ಇವು ನಾನು ಮೋದಿ  ಸರ್ಕಾರಕ್ಕೆ ಎಸೆಯುವ ಭೌತಿಕ ಗುರಿಸಾಧನೆಯ ಸವಾಲು! ಜೀತ – ಮಲಹೊರುವ ಪದ್ಧತಿ, ಬಾಲಕಾರ್ಮಿಕತೆ ನಿಷೇಧ, ಮಹಿಳಾ ಸುರಕ್ಷೆ – ಈ ಉದ್ದ ಪಟ್ಟಿಯೂ ಆದ್ಯತೆಯಾಗಬೇಕಿದೆ. ಸಿರಿವಂತರಿಂದ ತೆರಿಗೆ ಸಂಗ್ರಹಿಸಿ ಬಡವರಿಗೆ ಹಂಚುವ ನರೇಗಾ, ಹಣ ಜಮಾ ವ್ಯವಸ್ಥೆಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತರದೇ ಹೋದರೆ, ಸುಸ್ಥಿರ ಅಭ್ಯುದಯ ಸಾಧ್ಯವಿಲ್ಲ. ಕಾರ್ಯಾಂಗದ ಸಾರ್ವಭೌಮತ್ವ ಉಳಿಸಿಕೊಂಡೇ ಕಪ್ಪುಹಣದ ಬಗ್ಗೆ ಸುಪ್ರೀಂ ಕೋರ್ಟು ಸೂಚಿಸಿದ ಸಮಿತಿಯನ್ನು ರಚಿಸಬೇಕಾದ್ದು ಅತಿ ತುರ್ತಿನ ಸಂಗತಿ. ಈ ಹಣ ಭಾರತಕ್ಕೆ ಬರಲೇಬೇಕು; ಬಡವರಿಗೆ ಹಂಚಲೇಬೇಕು.

ಸಂಸ್ಕೃತಿ, ಪರಂಪರೆಯ ಬಗ್ಗೆ ಅತೀವ ಕಾಳಜಿ ಪ್ರಕಟಿಸುತ್ತಲೇ ಇರುವ ಬಿಜೆಪಿಯು ಭಾರತದ ಎಲ್ಲಾ ಭಾಷೆಗಳನ್ನೂ, ಪ್ರಾದೇಶಿಕ ಸಂಸ್ಕೃತಿಗಳನ್ನೂ ಉಳಿಸಿ, ಬೆಳೆಸಲು ಕ್ರಮ ಕೈಗೊಳ್ಳಲೇಬೇಕು. ಜಾತಿ-ಭಾಷೆ-ಆಹಾರ-ಆಚರಣೆಗಳು ಸಂಕೀರ್ಣವಾಗಿ ತಳುಕು ಹಾಕಿಕೊಂಡಿರುವ ಭಾರತೀಯ ಸಮಾಜದಲ್ಲಿ ಸಮರಸತೆ ತರಲು ಇದೇ ವಿಧಾಯಕ ಮಾರ್ಗ. ರಾಮಜನ್ಮಭೂಮಿ-ಕಾಶ್ಮೀರದಂಥ ಜಟಿಲ ಸಮಸ್ಯೆಗಳಿಗೆ ಐದೇ ವರ್ಷಗಳಲ್ಲಿ ಉತ್ತರ ಸಿಗುವುದೆ? ನೋಡೋಣ.  `ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ಘೋಷಣೆಯನ್ನು ವಡೋದರಾದ ವಿಜಯಭಾಷಣದಲ್ಲೂ ಒತ್ತಿಹೇಳಿದ ಮೋದಿಗೆ ಇವೆಲ್ಲವನ್ನೂ ಸಾಧಿಸಲು ಭಾರತದ ಜನತೆ ಅವಕಾಶ ನೀಡಿದೆ. ಇದು ತಪ್ಪಲ್ಲ; ಅತೀವ ವಿಶ್ವಾಸದ, ನಿರೀಕ್ಷೆಯ ಸಂಕೇತ.

ಮನಮೋಹನ್‌ಸಿಂಗ್ ಎಂಬ ಸಜ್ಜನ, ಮೌನಿ, ದುರ್ಬಲ ಪ್ರಧಾನಮಂತ್ರಿಯ ಬದಲಿಗೆ ನರೇಂದ್ರ ಮೋದಿ ಎಂಬ ವಾಕ್ಪಟುತ್ವದ, ಅವಕಾಶಗಳ ಪಾರಮ್ಯವನ್ನೇ ಅಪೇಕ್ಷಿಸಿರುವ, ಸವಾಲುಗಳ ಪಟ್ಟಿಯನ್ನು ಕಿಸೆಯಲ್ಲಿ ಇಟ್ಟುಕೊಂಡೇ ರ್‍ಯಾಲಿ ನಡೆಸಿದ ಪ್ರಧಾನಮಂತ್ರಿ ಬರುತ್ತಿದ್ದಾರೆ. ವ್ಯಕ್ತಿ, ಪಕ್ಷ ಬದಲಾದ ಮೇಲೆ ಆಡಳಿತವೂ ಬದಲಾಗಲೇಬೇಕು.

ಆದರೆ ಅದು ಎಂದೆಂದೂ ಶ್ರೀಸಾಮಾನ್ಯನ ಪರವಾಗಿರಬೇಕು. ಇದೇ ಈ ಜನಾದೇಶದ ಸಂದೇಶ.

ಮೂಲ ಪ್ರಕಟಣೆ: ಪ್ರಜಾವಾಣಿ

Leave a Reply

Your email address will not be published. Required fields are marked *

19 + 8 =

This site uses Akismet to reduce spam. Learn how your comment data is processed.