ಹಳೆ – ಹೊಸ ಮಾಧ್ಯಮಗಳಲ್ಲಿ ಮುಕ್ತ ಜ್ಞಾನದ ಸಾಧ್ಯತೆಗಳು

ಜೀವವೈವಿಧ್ಯ, ಭಾಷಾವೈವಿಧ್ಯ, ಸಂಸ್ಕೃತಿಪರಂಪರೆಆಚರಣೆಯ ವೈವಿಧ್ಯ, ಉಡುಗೆ ತೊಡುಗೆಗಳ ವೈವಿಧ್ಯ ಹೀಗೆ ಹತ್ತಾರು ಆಯಾಮಗಳಲ್ಲಿ ಭಾರತವು ವೈವಿಧ್ಯದ ದೇಶವಾಗಿದೆ. ಇಂಥ ವಿಷಯ ಸಮೃದ್ಧ ನಾಡಿನಲ್ಲಿ ಸಾಂಪ್ರದಾಯಿಕ ಮುದ್ರಣ ಮಾಧ್ಯಮಗಳು ಮತ್ತು ಹೊಸ ಕಾಲದ ಅಂತರಜಾಲದ (ಆನ್‌ಲೈನ್‌) ಅಭಿವ್ಯಕ್ತಿ ವೇದಿಕೆಗಳು ಮುಕ್ತ ಜ್ಞಾನದ ವೇದಿಕೆಗಳಾಗಲು ಸಾಕಷ್ಟು ಅವಕಾಶಗಳಿವೆ.

ಮೊದಲು ಒಂದೆರಡು ಉದಾಹರಣೆಗಳನ್ನು ನೀಡುವೆ: ಕರ್ನಾಟಕ ಸರ್ಕಾರದ `ಕಣಜ‘ (www.kanaja.in), ಭಾರತ ಸರ್ಕಾರದ ಭಾರತವಾಣಿಯಂಥ (www.bharatavani.in) ಮುಕ್ತಜ್ಞಾನದ ಯೋಜನೆಗಳು ಇಂಥ ಮುಕ್ತಜ್ಞಾನದ ಸಲುವಾಗಿಯೇ ಕಾರ್ಯ ನಿರ್ವಹಿಸುತ್ತಿವೆ. ಬಹುಶಃ ಭಾರತದಲ್ಲಿ ತಮಿಳುನಾಡು, ಕರ್ನಾಟಕ ರಾಜ್ಯಗಳ ಇಂಥ ಜ್ಞಾನಕೋಶ ಪ್ರಯೋಗಗಳು ಬೇರೆಡೆ ನಡೆದಂತಿಲ್ಲ. ೧೨೧ ಭಾಷೆಗಳಿಗೆ ಬೆಂಬಲ ನೀಡುವ ಆನ್‌ಲೈನ್‌ ವೇದಿಕೆಯನ್ನು ಭಾರತವಾಣಿಯು ರೂಪಿಸುತ್ತಿರುವುದು ವಿಶೇಷವಾಗಿದೆ. ಈಗಾಗಲೇ ೫೦ಕ್ಕೂ ಹೆಚ್ಚು ಪಠ್ಯ ಹುಡುಕಾಟದ ಅವಕಾಶವಿರುವ ನಿಘಂಟುಗಳ ಆಪ್‌ ಬಿಡುಗಡೆ ಮಾಡಿದ್ದಲ್ಲದೆ ( ಆಂಡ್ರಾಯ್ಡ್‌ http://bit.ly/1XYqodI) ೨೦೦ಕ್ಕೂ ಹೆಚ್ಚು ನಿಘಂಟುಪದಕೋಶಗಳಿರುವ ವೆಬ್‌ಪುಟವನ್ನೂ ಭಾರತವಾಣಿಯು ಹೊಂದಿರುವುದು ವಿಶ್ವಕ್ಕೇ ಮಾದರಿಯಾಗಿದೆ ಎಂದು ವಿಶ್ವಾಸದಿಂದ ಹೇಳಬಹುದು.

ಅಂದಹಾಗೆ ಈ ಲೇಖನವನ್ನು ನಾನು ಭಾರತದ ಮಟ್ಟಿಗೆ ಸೀಮಿತವಾಗಿಸಿ ಬರೆಯುತ್ತಿದ್ದೇನೆ.

ಭಾರತವು ಎಂದೂ ಮುಕ್ತಜ್ಞಾನದ ವೇದಿಕೆಯಾಗಿಯೇ ಇತ್ತು. ಮುದ್ರಣ ತಂತ್ರಜ್ಞಾನ ಬಂದು ಪುಸ್ತಕಗಳ ಮುದ್ರಣ, ಮಾರಾಟ ಶುರುವಾದ ಮೇಲೆಯೇ ಹಕ್ಕುಸ್ವಾಮ್ಯವೆಂಬ ಜ್ಞಾನದ ಮೇಲಿನ ಸವಾರಿ ಆರಂಭವಾಯಿತು. ಕುಮಾರವ್ಯಾಸನ ಭಾರತವನ್ನು ಅದನ್ನೊಂದು ಸೃಜನಶೀಲ ಕೃತಿಯಾಗಿ ಪರಿಗಣಿಸಿದರೂತಾಳೆಗರಿಗಳಲ್ಲಿ ಪ್ರತಿಲಿಪಿ ಮಾಡಿಯೇ ಶತಮಾನಗಳನ್ನು ಕಳೆದವರು ನಾವು! ಇಂಥ ಎಷ್ಟೆಲ್ಲ ಕೃತಿಗಳು,ಅವುಗಳ ಪ್ರತಿಗಳು ಸಿಕ್ಕಿವೆ, ಈಗಲೂ ಸಿಗುತ್ತಿವೆ! ಮುಕ್ತಜ್ಞಾನದ ಚಳವಳಿಯ ಹೊಸ ಪಲಕುಗಳು ಪಾಶ್ಚಾತ್ಯ ದೇಶಗಳಲ್ಲಿ ಈಗಷ್ಟೇ ಕಂಡಿರಬಹುದು; ಅದರ ಬೇರು, ಬಿಳಲುಗಳು ಭಾರತದಲ್ಲೇ ಇವೆ. ೧೮ನೇ ಶತಮಾನದ ಆರಂಭದವರೆಗೂ ಜಗತ್ತಿನ ಎಲ್ಲೆಡೆಯೂ ಹಕ್ಕುಸ್ವಾಮ್ಯದ ಸೊಲ್ಲೇ ಇರಲಿಲ್ಲ ಎಂಬುದು ನನ್ನ ಅಲ್ಪ ತಿಳಿವಳಿಕೆ.

ಭಾರತದಲ್ಲಿ ಲಿಖಿತ ಜ್ಞಾನವು ಮುಕ್ತವಾಗಿದ್ದರೂ, ಅದು ಕೆಲವೇ ಉನ್ನತ ಜಾತಿಯವರಿಗೆ ಮೀಸಲಾಗಿತ್ತು ಎಂಬ ವಾದವನ್ನೂ ಹಲವರು ಮಂಡಿಸುತ್ತಾರೆ. ಇಂದಿಗೂ ಸಾಕ್ಷರತೆಯ ಪ್ರಮಾಣವು ಗಣನೀಯ ಏರುಗತಿಯನ್ನು ಕಂಡಿಲ್ಲ ಎಂಬುದನ್ನೇ ಗಮನಿಸಿದರೆ, ಈ ವಾದದಲ್ಲಿ ವಾಸ್ತವವಿದೆ ಎಂದೇ ಹೇಳಬೇಕು. ಲಿಖಿತ ಜ್ಞಾನದ ಕಥೆ ಹೀಗಾದರೆ, ಅಲಿಖಿತ, ಮೌಖಿಕ ಜ್ಞಾನ ಪರಂಪರೆಯೂ ನಮ್ಮಲ್ಲಿತ್ತು, ಈಗಲೂ ಇದೆ ಎಂಬುದನ್ನು ನಾವು ಮರೆಯುವಂತಿಲ್ಲ. ಅದರಲ್ಲೂ ಜೀವವೈವಿಧ್ಯದ ಪ್ರದೇಶಗಳಲ್ಲಿ ವಾಸಿಸುತ್ತಿರುವ ಆದಿವಾಸಿ, ಬುಡಕಟ್ಟು ಸಮುದಾಯಗಳಲ್ಲಿ ಈಗಲೂ ಅಪಾರವಾದ ಅಲಿಖಿತ ಜ್ಞಾನವು ಹುದುಗಿದೆ. ಈಗಲೂ ಒಡಿಶಾ ರಾಜ್ಯದ ಡೋಂಗ್ರಿಯಾ ಕೊಂಧ್‌ ಸಮುದಾಯದಲ್ಲಿ ತಂತಮ್ಮ ಹೊಲಗಳಲ್ಲಿ ಬೆಳೆದ ಬೆಳೆಗಳ ಬಿತ್ತನೆ ಬೀಜಗಳನ್ನು ವರ್ಷವರ್ಷವೂ ಹಬ್ಬದ ಮೂಲಕ ಹಂಚಿಕೊಳ್ಳುವ ಆಚರಣೆಯಿದೆ ಎಂಬ ಒಂದೇ ವರದಿಯೇ ಈ ಅಲಿಖಿತ ಜ್ಞಾನ ಎಷ್ಟು ಮುಖ್ಯ ಎಂಬುದನ್ನು ತೋರಿಸಿಕೊಡುತ್ತದೆ. ಆದ್ದರಿಂದ ಹಳೆಹೊಸ ಮಾಧ್ಯಮಗಳಲ್ಲಿ ಮುಕ್ತಜ್ಞಾನದ ಸಾಧ್ಯತೆಗಳ ಬಗ್ಗೆ ಮಾತನಾಡುವಾಗ ನಾವು ಲಿಖಿತಅಲಿಖಿತ ಎರಡೂ ಅರಿವಿನ ಪ್ರವಾಹಗಳನ್ನು ಲಕ್ಷಿಸಿಯೇ ಮುಂದುವರೆಯಬೇಕಿದೆ.

 • ಮುಕ್ತ ದತ್ತಾಂಶ: ಪಾಶ್ಚಾತ್ಯ ದೇಶಗಳಲ್ಲಿ ಈಗ ಹೆಚ್ಚಾಗಿ ಬಳಕೆಯಲ್ಲಿರುವ, ಭಾರತದಲ್ಲೂ ಕಾಲಿಟ್ಟಿರುವ ಡಾಟಾ ಜರ್ನಲಿಸಂ ದರೆ ದತ್ತಾಂಶ ಪತ್ರಿಕೋದ್ಯಮವು ಈ ಜ್ಞಾನದ ಅಂಕಿ ಅಂಶಗಳ ಸಂಗ್ರಹದ ಒಂದು ಶಾಖೆಯಾಗಿ ಹೊರಹೊಮ್ಮಿದೆ. ಡಾಟಾ ಜರ್ನಲಿಸಂನ್ನು ಸೂಕ್ತವಾಗಿ ಬಳಸಿಕೊಂಡರೆ, ದತ್ತಾಂಶಗಳನ್ನು ಮುಕ್ತವಾಗಿ ಹಂಚಿಕೊಂಡರೆ ಅದೇ ನಾಡಿನ ಅಭ್ಯುದಯಕ್ಕೆ ಅತಿದೊಡ್ಡ ಕೊಡುಗೆಯಾಗುತ್ತದೆ. ವಿವಿಧ ರಂಗಗಳ ಅಂಕಿ ಅಂಶಗಳನ್ನು ಕಾಲಕಾಲಕ್ಕೆ ಸಂಗ್ರಹಿಸಿ ಅವುಗಳನ್ನು ಅತ್ಯಾಧುನಿಕ ತಂತ್ರಾಂಶಗಳ ಮೂಲಕ ಸರಳವಾಗಿ, ಮುಕ್ತವಾಗಿ ಪ್ರಸ್ತುತಪಡಿಸುವುದನ್ನು ಓಪನ್‌ ಡಾಟಾ ಎನ್ನುತ್ತಾರೆ. ಇಂಥ ಮುಕ್ತ ದತ್ತಾಂಶ ಹಂಚಿಕೆಯಿಂದ ಸರ್ಕಾರದ ಸೇವೆಗಳ ಗುಣಮಟ್ಟ ಹೆಚ್ಚುವ, ಸಾರ್ವಜನಿಕ ಜಾಗೃತಿಯ ಪ್ರಮಾಣ ಹೆಚ್ಚಾಗುವ, ನೀತಿ ನಿರೂಪಣೆಗಳ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆಗಳಿವೆ. ಇಲ್ಲಿ ಕೇವಲ ಸರ್ಕಾರಿ ಅಂಕಿಅಂಶಗಳಲ್ಲ, ಸಮುದಾಯದ ಭಾಗಿತ್ವದ ಮೂಲಕ ಸಂಗ್ರಹಿಸಿದ ಮಾಹಿತಿಗಳನ್ನೂ ಹಂಚಿಕೊಳ್ಳಬಹುದು. ಹಳೆಯ ಮಾಧ್ಯಮಗಳಾದ ಮುದ್ರಿತ ಪತ್ರಿಕೆಗಳು, ಹೊಸ ಆನ್‌ಲೈನ್‌ ಮಾಧ್ಯಮಗಳು ಈ ಬಗೆಯ ದತ್ತಾಂಶ ಹಂಚಿಕೆಯಲ್ಲಿ ಭಾಗವಹಿಸಬಹುದು. ಪ್ರತಿದಿನವೂ ಸಂಗ್ರಹಿಸುವ ಹಲವು ಅಂಕಿಅಂಶಗಳನ್ನು ವ್ಯವಸ್ಥಿತವಾಗಿ ಕ್ರೋಡೀಕರಿಸುವ ವ್ಯವಸ್ಥೆಯನ್ನು ರೂಪಿಸಿಕೊಂಡು,ಅದಕ್ಕೆ ಸಾಮುದಾಯಿಕ ಸರ್ವಮಾನ್ಯ ವೇದಿಕೆಯನ್ನು ಒದಗಿಸಿದರೆ ಮಾಧ್ಯಮಗಳೂ ನೈಜ ಸಾಮಾಜಿಕ ಅಭ್ಯುದಯಕ್ಕೆ ಕೊಡುಗೆ ನೀಡಬಹುದು. ಇದು ಕೇವಲ ಸುದ್ದಿ, ಮಾಹಿತಿಯನ್ನೂ ನೀಡುವ ಸಾಂಪ್ರದಾಯಿಕ ಹೊಣೆಗಾರಿಕೆಗಳನ್ನು ಮೀರಿದ ಗುರುತರ ಕಾರ್ಯ.
 • ಸಂಪೂರ್ಣ ಉಚಿತ ಪುಸ್ತಕಗಳು: ಹಳೆ ಹೊಸ ಮಾಧ್ಯಮಗಳು ಕೈಗೊಳ್ಳಬಹುದಾದ ಮುಕ್ತಜ್ಞಾನದ ಇನ್ನೊಂದು ಹೆಜ್ಜೆ ಎಂದರೆ ಸಂಪೂರ್ಣವಾಗಿ ಉಚಿತವಾದ, ಜಾಹೀರಾತು ರಹಿತವಾದ ಪುಸ್ತಕಗಳ ಆನ್‌ಲೈನ್‌ ಪ್ರತಿಗಳನ್ನು (ಮುದ್ರಿತ ಪ್ರತಿ ಅಲ್ಲ) ಪ್ರಕಟಿಸುವುದು. ಹಲವು ಒಳನೋಟಗಳಿರುವ ಲೇಖನಗಳನ್ನು ಈ ಮಾಧ್ಯಮಗಳು ಸದಾ ಪ್ರಕಟಿಸುತ್ತಲೇ ಇರುತ್ತವೆ. ಇವೆಲ್ಲವನ್ನೂ ಒಪ್ಪವಾಗಿ ಜೋಡಿಸಿ, ಕಾಲಬಾಹಿರವಾಗದಂತೆ ಅಲ್ಲಲ್ಲಿ ಸಂಪಾದಿಸಿ ಸಂಗ್ರಹಿಸಿ ಪ್ರಕಟಿಸಿದರೆ ಸಮಾಜಕ್ಕೆ ತುಂಬಾ ಒಳಿತು. ದ ಟೆಲಿಗ್ರಾಫ್‌ ಪತ್ರಿಕೆಯು ಹಲವು ವರ್ಷಗಳಿಂದ ಈ ಬಗೆಯ ಆನ್‌ಲೈನ್‌ ಪುಸ್ತಕಗಳನ್ನು ಪ್ರಕಟಿಸುತ್ತ ಬಂದಿದೆ. ಒಮ್ಮೆ ಪ್ರಕಟವಾದ ಲೇಖನಗಳನ್ನೇ ಹೀಗೆ ಪ್ರಕಟಿಸುವುದರಿಂದ ಪತ್ರಿಕೆಗಳಿಗೆ ನಷ್ಟವಿಲ್ಲ.
 • ಸಂಪೂರ್ಣ ಉಚಿತ ಪತ್ರಿಕೆಗಳು: ಇಂಗ್ಲೆಂಡಿನಲ್ಲಿ ಮೆಟ್ರೋ ಎಂಬ ಪತ್ರಿಕೆಯು ಅಲ್ಲಿ ಎರಡನೇ ಅತಿದೊಡ್ಡ ಪತ್ರಿಕೆಯಾಗಿದೆ. ಆದರೆ ಇದು ಉಚಿತ ಪತ್ರಿಕೆ! ಸೋಮವಾರದಿಂದ ಶುಕ್ರವಾರದವೆರೆಗೆ ಪ್ರಕಟವಾಗುವ ಈ ಪತ್ರಿಕೆಯ ಸರಾಸರಿ ಪ್ರಸರಣ ೧೫ ಲಕ್ಷ. ಲಂಡನ್ನಿನ ನಗರ ಸಾರಿಗೆಗಳಲ್ಲಿ ಯಾವಾಗಲೂ ಉಚಿತವಾಗಿ ಸಿಗುವುದರಿಂದ ಈ ಪತ್ರಿಕೆಯ ಪ್ರಸರಣ ಹೆಚ್ಚು. ಜನ ಕಚೇರಿಗೆ ಹೋಗುವ ಮತ್ತು ಮನೆಗೆ ಮರಳುವ ಹೊತ್ತಿನಲ್ಲೇ ಬಸ್ಸಿನಲ್ಲಿ ಉಚಿತ ಪತ್ರಿಕೆ ಸಿಕ್ಕರೆ ಯಾರಿಗೆ ಬೇಡ? ಭಾರತದಲ್ಲೂ ಮಹಾನಗರಗಳಲ್ಲಿ ಇಂಥ ಪ್ರಯೋಗ ಮಾಡಬಾರದು ಎಂದೇನಿಲ್ಲ. ಆದರೆ ಅತಿ ಕೊಳ್ಳುಬಾಕತನವನ್ನು ಪ್ರಚೋದಿಸುವ ಜಾಹೀರಾತುಗಳನ್ನೇ ಪ್ರಕಟಿಸುವುದಾದರೆ ಇದು ಅಪಾಯಕಾರಿಯಾಗಿಯೂ ಪರಿಣಮಿಸುತ್ತದೆ. ಅಲ್ಲದೆ ಸುದ್ದಿಗಿಂತ ಜಾಹೀರಾತೇ ಹೆಚ್ಚಾದರೆ ಇಂಥ ಪತ್ರಿಕೆಗಳು ಸುದ್ದಿಗಾಗಿ ಬಾಳುವುದು ದುಸ್ತರ. ಹೀಗಿದ್ದರೂ ಇಂಥ ಪ್ರಯೋಗವನ್ನು ದೊಡ್ಡ ಪತ್ರಿಕೆಗಳೂ ಮಾಡಬಹುದಾಗಿದೆ. ಈಗ ೫೦ಕ್ಕೂ ಹೆಚ್ಚು ದೇಶಗಳಲ್ಲಿ ಇಂಥ ಉಚಿತ ಪತ್ರಿಕೆಗಳಿವೆ (೨೦೦೮) ಎಂದು ವಿಕಿಪೀಡಿಯಾ ಮಾಹಿತಿ ನೀಡುತ್ತದೆ. ಪ್ರತಿದಿನ ನಾಲ್ಕೂವರೆ ಕೋಟಿ ಪ್ರತಿಗಳು ಉಚಿತವಾಗಿ ವಿತರಣೆಯಾಗುತ್ತಿವೆಯಂತೆ!

ಮುಕ್ತಜ್ಞಾನದ ಇಂಥ ಹಲವು ಉದಾಹರಣೆಗಳನ್ನು ಇಲ್ಲಿ ಕೊಡಬಹುದು:

 • ಪ್ರೊಪಬ್ಲಿಕಾ (www.propublica.org) ಎಂಬ ಅಮೆರಿಕಾದ ಜಾಲತಾಣವು ಹಲವು ಸಂಸ್ಥೆಗಳಿಂದ ದೇಣಿಗೆ ಪಡೆದು ಸ್ವತಂತ್ರ ಪತ್ರಿಕೋದ್ಯಮವನ್ನು ನಡೆಸುತ್ತಿದೆ. `ನಮ್ಮ ಸುದ್ದಿಗಳನ್ನು ಕದಿಯಿರಿ’ ಎಂಬುದೇ ಈ ಜಾಲತಾಣದ ಮುಖ್ಯ ಘೋಷಣೆಯಾಗಿದೆ.

 • ಇಂಟರ್‌ನೆಟ್‌ ಆರ್ಕೈವ್‌ (www.archive.org) ಎಂಬ ಜಾಲತಾಣದಲ್ಲಿ ಭಾರೀ ಪ್ರಮಾಣದಲ್ಲಿ ಪುಸ್ತಕಗಳು, ದೃಶ್ಯಶ್ರಾವ್ಯ ಕಡತಗಳು ಲಭ್ಯ.

 • ವಿಕಿಪೀಡಿಯಾ (kn.wikipedia.org) ಜಾಲತಾಣದಲ್ಲಿ ಮುಕ್ತವಾಗಿ ಮಾಹಿತಿ ದೊರೆಯುವುದು ಎಲ್ಲರಿಗೂ ಗೊತ್ತಿದೆ.

 • ಮ್ಯಾಗ್ನಟ್ಯೂನ್‌ (magnatune.com) ಎಂಬ ಸಂಗೀತ ತಾಣದಲ್ಲಿ ನಿಮ್ಮ ಆಲ್ಬಮ್‌ಗಳನ್ನು ಆರಬಹುದು; ಬಳಕೆದಾರರು ಉಚಿತವಾಗಿ ಸಂಗೀತವನ್ನು ಕೇಳಬಹುದು.

 • ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯು (https://ocw.mit.edu/index.htm) ಮೊದಲ ಸಲ ಮುಕ್ತ ಕಲಿಕೆಯಯ ಅವಕಾಶಗಳನ್ನು ರೂಪಿಸಿ ತನ್ನೆಲ್ಲ ಕೋರ್ಸ್‌ಗಳ ಪಠ್ಯಗಳನ್ನು ಯಾರು ಬೇಕಾದರೂ ಬಳಸಬಹುದು ಎಂದು ಘೋಷಿಸಿತು.

 • ಪ್ರಾಜೆಕ್ಟ್‌ ಗುಟೆನ್‌ಬರ್ಗ್‌ (www.gutenberg.org) ಎಂಬ ಅತಿ ಹಳೆಯ ಯೋಜನೆಯಲ್ಲಿ ಕೂಡಾ ಭಾರೀ ಪ್ರಮಾಣದಲ್ಲಿ ಶಾಸ್ತ್ರೀಯ ಸಾಹಿತ್ಯವನ್ನು ಸಾರ್ವಜನಿಕರೇ ಅಕ್ಷರ ಜೋಡಿಸಿ ರೂಪಿಸಿದ್ದಾರೆ.

 • ಕಣಜ ಜಾಲತಾಣಕ್ಕಿಂತ ಮುಂಚಿತವಾಗಿ ತಮಿಳುನಾಡು ಸರ್ಕಾರವು ತಮಿಳು ವರ್ಚುಯಲ್‌ ವಿಶ್ವವಿದ್ಯಾಲಯವನ್ನು ರೂಪಿಸಿ (www.tamilvu.org) ಎಲ್ಲ ಪಠ್ಯಗಳನ್ನೂ ಪಿಡಿಎಫ್‌ ರೂಪದಲ್ಲಿ ಸಾರ್ವಜನಿಕರಿಗೆ ಕೊಟ್ಟಿದೆ.

 • ಪ್ಲಾಸ್‌ (www.plos.org) ಜಾಲತಾಣದಲ್ಲಿ ನೀವು ಸಾವಿರಾರು ಸಂಶೋಧನಾ ಲೇಖನಗಳನ್ನು ಉಚಿತವಾಗಿ ಪಡೆಯಬಹುದು.

 • ಭಾರತ ಸರ್ಕಾರವು ಈ ಪಾಠಶಾಲಾ ಎಂಬ ಯೋಜನೆಯ (epathshala.nic.in) ಮೂಲಕ ಪಠ್ಯಪುಸ್ತಕಗಳನ್ನು ಉಚಿತವಾಗಿ ನೀಡುತ್ತಿದೆ. ಬಾಸ್ತಾ ಎಂಬ ಇನ್ನೊಂದು ಜಾಲತಾಣದಲ್ಲಿ ಪಠ್ಯಪುಸ್ತಕಗಳಿವೆ. ಭಾರತವಾಣಿಯಲ್ಲೂ ಹಲವು ರಾಜ್ಯಗಳ ಪಠ್ಯಪುಸ್ತಕಗಳಿವೆ. ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಓಪನ್‌ ಸ್ಕೂಲಿಂಗ್‌ (ಎನ್‌ಐಓಎಸ್‌) ತಾಣದಲ್ಲಿ ಹಲವು ಪುಸ್ತಕಗಳು ಸಿಗುತ್ತವೆ.

 • ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ (ಐಜಿಎನ್‌ಸಿಎ)ದಲ್ಲಿ ಕಲೆಸಂಸ್ಕೃತಿಗೆ ಸಂಬಂಧಿಸಿದ ಹಲವು ಪುಸ್ತಕಗಳಿವೆ (http://ignca.nic.in/ebk_0001.htm) .

 • ಭಾರತದಾದ್ಯಂತ ಸ್ಪಿಕ್‌ಮೆಕೇ ಸಂಸ್ಥೆಯು ಶಾಸ್ತ್ರೀಯ ಸಂಗೀತದ ಕಚೇರಿಗಳನ್ನು ವಿದ್ಯಾರ್ಥಿಗಳಿಗೆ, ಯುವ ಸಮುದಾಯಕ್ಕಾಗಿ ಸಂಘಟಿಸುತ್ತಿದೆ. ಇಲ್ಲಿ ಸಂಗೀತಗಾರರೊಂದಿಗೆ ಸಭಿಕರು ಪ್ರಶ್ನೋತ್ತರ ನಡೆಸಬಹುದು

ಹಕ್ಕುಸ್ವಾಮ್ಯದ ಅರಿವು: ಮುಕ್ತಜ್ಞಾನದ ಹೊಸ ಸಾಧ್ಯತೆಗಳನ್ನು ಜಾರಿಗೊಳಿಸುವಾಗ ಹಳೆಹೊಸ ಮಾಧ್ಯಮಗಳು ಹಕ್ಕುಸ್ವಾಮ್ಯದ ಅಪಾಯಗಳನ್ನು ಕಡೆಗಣಿಸುವಂತಿಲ್ಲ. ಪ್ರಕಟಣೆ ಆಗಲಿರುವ ಅರ್ಹ ಲೇಖನಗಳ ಹಕ್ಕುಸ್ವಾಮ್ಯವನ್ನು ಮುಕ್ತ ಮಾಹಿತಿಯ ಭಾಗವಾಗಿ ಬಳಸುವುದಾಗಿ ಮೊದಲೇ ಘೋಷಿಸಿದರೆ ಪತ್ರಿಕೆಗಳ / ಆನ್‌ಲೈನ್‌ ಮಾಧ್ಯಮಗಳ ವಿಶ್ವಾಸಾರ್ಹತೆಯೂ ಹೆಚ್ಚುತ್ತದೆ. ಲೇಖಕರಿಗೂ ಪೂರ್ವಮಾಹಿತಿ ಸಿಕ್ಕಿದಂತಾಗುತ್ತದೆ. ಮುಖ್ಯವಾಗಿ ಒಮ್ಮೆ ಪ್ರಕಟವಾದ ಲೇಖನವನ್ನು ಎರಡನೇ ಸಲ ಪ್ರಕಟಿಸುವಾಗ ಸೂಕ್ತವಾದ ಕ್ರಿಯೇಟಿವ್‌ ಕಾಮನ್ಸ್‌ ಹಕ್ಕುಸ್ವಾಮ್ಯವನ್ನು ಅಳವಡಿಸಿಕೊಂಡರೆ ಮುಕ್ತಜ್ಞಾನದ ಹರಿವು ಸುಗಮವಾಗುತ್ತದೆ. ಈ ವಾದದ ಇನ್ನೊಂದು ಮುಖವಾಗಿ ಲೇಖಕರೂ ಕೂಡ ತಮ್ಮ ಲೇಖನಗಳನ್ನು ಮುಕ್ತವಾಗಿ ವಿತರಿಸಲು ಅನುಮತಿ ನೀಡಬೇಕು. ಲೇಖಕರೇ ಸ್ವತಃ ಮುಕ್ತಜ್ಞಾನ ಹಂಚಿಕೆಗೆ ಮುಂದಾಗಬಹುದು.

ಹಳೆಹೊಸ ಮಾಧ್ಯಮಗಳು ಜ್ಞಾನವನ್ನು ಮುಕ್ತವಾಗಿ ಕೊಡಬೇಕೆಂಬುದು ಹೊಸ ಬೇಡಿಕೆಯೇನೂ ಅಲ್ಲ. ಹಲವು ವರ್ಷಗಳ ಹಿಂದೆಯೇ ಲಾರೆನ್ಸ್‌ ಲೆಸ್ಸಿಗ್‌ ಬರೆದ ಪುಸ್ತಕದಲ್ಲಿ ಕಾರ್ಪೋರೇಟ್‌ ಪತ್ರಿಕೋದ್ಯಮವು ನಮ್ಮೆಲ್ಲರನ್ನೂ ಹೇಗೆ ಆವರಿಸಿದೆ ಎಂಬ ವಿವರಗಳಿವೆ. ಜ್ಞಾನವನ್ನು ಮುಕ್ತವಾಗಿ ಕೊಡುವ ಚಳವಳಿಯ ಆದ್ಯ ಪ್ರವರ್ತಕರಲ್ಲಿ ಒಬ್ಬರಾದ ಲಾರೆನ್ಸ್‌ ಲೆಸ್ಸಿಗ್‌ ಚಿಂತನೆ ಈಗಲೂ ಸಕಾಲಿಕ. ಕೇವಲ ಮಾಹಿತಿಯೇನು, ತಂತ್ರಜ್ಞಾನವೂ ಮುಕ್ತವಾಗಿರಬೇಕು ಎಂದು ಫ್ರೀ ಸಾಫ್ಟ್‌ವೇರ್‌ ಚಳವಳಿಯ ಹರಿಕಾರ, ಗ್ನು/ಲಿನಕ್ಸ್‌ ರೂಪಿಸಿದ ತಂಡದ ನಾಯಕ ರಿಚರ್ಡ್‌ ಸ್ಟಾಲ್‌ಮನ್‌ ವಾದಿಸುತ್ತಾರೆ. ಇವರಿಬ್ಬರೂ ಜಗತ್ತಿನಲ್ಲಿ ಮುಕ್ತಜ್ಞಾನ, ಹಕ್ಕುಸ್ವಾಮ್ಯದ ಸಡಿಲತೆ, ಅಲಿಪ್ತ ಅಂತರಜಾಲ ಹೀಗೆ ಹಲವು ಬಗೆಯ ಹೊಸಯುಗದ ಹಕ್ಕುಗಳಿಗಾಗಿ ಹೋರಾಡುತ್ತಿರುವವರು; ನೀತಿಗಳನ್ನು ನಿರೂಪಿಸುತ್ತಿರುವವರು; ತಮ್ಮ ಬೇಡಿಕೆಗಳಿಗೆ ತಕ್ಕಂತೆ ಚಳವಳಿಗಳನ್ನೂ ಹೂಡುತ್ತಿರುವವರು. ಮುಕ್ತಜ್ಞಾನದ ಚಳವಳಿಗೆ ಇವರ ಚಿಂತನೆಗಳ ಕೊಡುಗೆ ಅಪಾರ.

ಕನ್ನಡದಲ್ಲೂ ಮುಕ್ತಜ್ಞಾನದ ಚಳವಳಿ ನಡೆಯಬೇಕೆಂಬ ಆಶಯದಲ್ಲಿ ನಾನೂ ಟ್ರಸ್ಟೀಯಾಗಿರುವ ಮಿತ್ರಮಾಧ್ಯಮ ಟ್ರಸ್ಟ್‌ನಿಂದ `ಕಂಪ್ಯೂಟರ್‌ ಮತ್ತು ಕನ್ನಡಪುಸ್ತಕವನ್ನು ಪ್ರಕಟಿಸಿದೆವು. ಅದು ಕನ್ನಡದ ಮೊಟಟಮೊದಲ ಕ್ರಿಯೇಟಿವ್‌ ಕಾಮನ್ಸ್‌ ಹಕ್ಕುಸ್ವಾಮ್ಯದ ಅಡಿಯ ಪ್ರಕಟಣೆಯಾಗಿದೆ ಎಂದು ಹೇಳಲಾಗಿದೆ. ಈ ಪುಸ್ತಕವನ್ನು ಅದು ಇರುವ ರೀತಿಯಲ್ಲೇ ಯಾರು ಬೇಕಾದರೂ ಮುದ್ರಿಸಿ, ಉಚಿತವಾಗಿ ಹಂಚಬಹುದು. ಈ ಪುಸ್ತಕದ ೧೦೦೦ ಪ್ರತಿಗಳನ್ನು ಮುದ್ರಿಸಿ ಪುಸ್ತಕದ ಅವಶ್ಯಕತೆ ಇರುವ ಕಾಲೇಜು ವಿದ್ಯಾರ್ಥಿಗಳಿಗೆ ಹಂಚಲಾಯಿತು. ಅಂದರೆ ಉಚಿತ ಪುಸ್ತಕ ಚಳವಳಿ ಎಂಬುದು ಕಲ್ಪನಾತೀತವೇನಲ್ಲ, ವಾಸ್ತವ ಎಂಬುದು ಸಾಬೀತಾಯಿತು. ಈ ಪುಸ್ತಕದ ಆನ್‌ಲೈನ್‌ ಪ್ರತಿಗಳೂ ಲಭ್ಯ. ಈ ಪ್ರಕಟಣೆಯ ಬೆನ್ನಲ್ಲೇ ಫ್ರೀ ಬುಕ್‌ ಕಲ್ಚರ್‌ ಎಂಬ ಉಚಿತ ಪುಸ್ತಕಗಳ ತಾಣವನ್ನು (www.freebookculture.com) ಆರಂಭಿಸಿ ಹಲವು ಪುಸ್ತಕಗಳನ್ನು ಉಚಿತವಾಗಿ ನೀಡಲಾಗಿದೆ.

ಅಂತರಜಾಲದಲ್ಲಿ ಉಚಿತವಾಗಿ ಪುಸ್ತಕಗಳನ್ನು ಕೊಡುವ ಭಾರತೀಯ ಜ್ಞಾನದ ಹಿನ್ನೆಲೆಯ ಹಲವು ಜಾಲತಾಣಗಳಿವೆ. ಮುಖ್ಯವಾಗಿ ಖರಗ್‌ಪುರ್‌ ಐಐಟಿಯ ನಿರ್ವಹಣೆಯಲ್ಲಿರುವ ತಾಣದಲ್ಲಿ ೬೫ ಲಕ್ಷಕ್ಕೂ ಹೆಚ್ಚು ಪುಸ್ತಕಗಳು ಉಚಿತವಾಗಿ ಸಿಗುತ್ತವೆ (https://ndl.iitkgp.ac.in/). ಇವೆಲ್ಲವೂ ಪಿಡಿಎಫ್‌ (ಪೋರ್ಟಬಲ್‌ ಡಾಕ್ಯುಮೆಂಟ್‌ ಫಾರ್ಮಾಟ್‌) ರೂಪದಲ್ಲಿ ಇರುವುದರಿಂದ ಭಾರತೀಯ ಭಾಷೆಗಳ ಪಠ್ಯವನ್ನು ಹುಡುಕುವ ಸೌಲಭ್ಯ ಇಲ್ಲವಾದರೂ, ಒಮ್ಮೆಲೇ ಪುಸ್ತಕವನ್ನು ಪಡೆಯಬಹುದು. ಇಂಥ ಹಲವು ತಾಣಗಳ ಪಟ್ಟಿಯನ್ನು ಭಾರತವಾಣಿ ತಾಣದಲ್ಲಿ ನೀಡಲಾಗಿದೆ (http://bharatavani.in/useful-links/).

ಸ್ಮಾರ್ಟ್‌ಫೋನ್‌ಗಳ ಈ ಕಾಲದಲ್ಲಿ ಪುಸ್ತಕಗಳನ್ನು ಮುದ್ರಿಸಿ ಕಾಗದವನ್ನು ಬಳಸುವುದಕ್ಕಿಂತ ಸಾಫ್ಟ್‌ ಪ್ರತಿಗಳನ್ನು ಸಿದ್ಧಪಡಿಸಿ ಹಂಚುವುದರಲ್ಲಿ ಹೆಚ್ಚಿನ ಅನುಕೂಲವಿದೆ. ಆದ್ದರಿಂದ ಮುದ್ರಣ ಮಾಧ್ಯಮಗಳು ತಮ್ಮ ವ್ಯವಹಾರದ ಉತ್ಪನ್ನವಾದ ದಿನಪತ್ರಿಕೆಯನ್ನು ಕಾಗದದಲ್ಲಿ ಮುದ್ರಿಸಿದರೂ, ನಂತರದ ಆವೃತ್ತಿಗಳನ್ನು ಆನ್‌ಲೈನ್‌ನಲ್ಲೇ, ಮುಕ್ತವಾಗಿ ಪ್ರಕಟಿಸುವುದರಿಂದ ಹಣವೂ ಉಳಿಯುತ್ತದೆ; ಓದುಗರಿಗೂ ಅನುಕೂಲ.

ಜ್ಞಾನವನ್ನು ಮುಕ್ತವಾಗಿ ಹಂಚಬೇಕು ಎಂಬ ಘೋಷಣೆಯು ಮತ್ತೊಮ್ಮೆ ತನ್ನ ಬೆಲೆಯನ್ನು ಕಂಡುಕೊಳ್ಳುತ್ತಿರುವಾಗ ಸರ್ಕಾರಗಳೂ ಈ ಹಾದಿಯನ್ನು ಅನುಸರಿಸುತ್ತಿವೆ. ಭಾರತ ಸರ್ಕಾರದ ಹಲವು ಸಂಸ್ಥೆಗಳು ಪಠ್ಯಪುಸ್ತಕಗಳನ್ನು ಉಚಿತವಾಗಿ ನೀಡುತ್ತಿವೆ. ಪರೀಕ್ಷೆ ನಡೆಸುವುದು, ಮೌಲ್ಯಮಾಪನ ಮಾಡುವುದು ಮತ್ತು ಪ್ರಮಾಣಪತ್ರ ನೀಡುವುದು ಇವು ಮಾತ್ರವೇ ಶುಲ್ಕಾಧಾರಿತವಾಗಿವೆ.

ಮುಕ್ತ ಮಾಹಿತಿ ಹಂಚಿಕೆಯಿಂದ ಪ್ರಕಾಶನ ಉದ್ಯಮವು ಕುಸಿಯುತ್ತದೆ ಎಂಬ ಆರೋಪವೂ ಇದೆ. ನಿಜ, ಆನ್‌ಲೈನ್‌ನಲ್ಲಿ ಮುಕ್ತವಾಗಿ ಮಾಹಿತಿ ನೀಡುವುದರಿಂದ ಮುದ್ರಿತ ಪ್ರತಿಗಳ ವ್ಯಾಪಾರ ಕಡಿಮೆಯಾಗುತ್ತದೆ. ಈ ವಾದವು ಪೂರ್ಣ ನಿಜವೂ ಅಲ್ಲ. ಉದಾಹರಣೆಗೆ, ಕಣಜ ಜಾಲತಾಣದಲ್ಲಿ ಡಾ|| ಚಂದ್ರಶೇಖರ ಕಂಬಾರ, ಡಾ|| ಜಿ ಎಸ್‌ ಶಿವರುದ್ರಪ್ಪ, ಡಾ|| ಯು ಆರ್‌ ಅನಂತಮೂರ್ತಿ, ಮತ್ತು ಕುವೆಂಪು ಈ ನಾಲ್ವರು ಹಿರಿಯ ಸಾಹಿತಿಗಳ ಸಂಪೂರ್ಣ ಕೃತಿಗಳು ಪ್ರಕಟವಾಗಿ ಆರು ವರ್ಷಗಳೇ ಕಳೆದವು. ಈವರೆಗೂ ಈ ಲೇಖಕರ ಪುಸ್ತಕಗಳ ಮಾರಾಟ ಕುಸಿದಿದೆ ಎಂಬ ಆರೋಪ ಕೇಳಿಬಂದಿಲ್ಲ. ಆನ್‌ಲೈನ್‌ನಲ್ಲಿ ಬಳಸುವವರೇ ಬೇರೆ; ಪುಸ್ತಕಗಳನ್ನೇ ಓದುವವರು ಬೇರೆ ಎಂಬ ಮಾತನ್ನು ಈ ಅಂಶವು ಪುಷ್ಟೀಕರಿಸುತ್ತದೆ.

ಆನ್‌ಲೈನ್‌ ಜಗತ್ತನ್ನೇ ನೋಡಿ: ಮುಕ್ತವಾಗಿ ತಂತ್ರಾಂಶಗಳನ್ನೇ ಕೊಡುವುದರಿಂದ ಹಿಡಿದು ಅತ್ಯುನ್ನತ ತಂತ್ರಜ್ಞಾನವನ್ನೂ ನೀಡುವ ವೇದಿಕೆಗಳೂ ಬಂದಿವೆ. ಇಂದು ಅಂತರಿಕ್ಷ ಯಾನ ರಂಗದಲ್ಲಿ ಹೊಸ ಹೆಜ್ಜೆ ಮೂಡಿಸಿರುವ ವಿಜ್ಞಾನಿಹೂಡಿಕೆದಾರ ಇಲಾನ್‌ ಮಸ್ಕ್‌ರಂತೂ ತಮ್ಮ ಸಂಸ್ಥೆಗಳು ರೂಪಿಸುವ ಎಲ್ಲ ಇಂಧನ ಸ್ನೇಹಿ ಕಾರುಗಳ ಯಂತ್ರವಿನ್ಯಾಸವನ್ನು ಮುಕ್ತವಾಗಿ ನೀಡುವುದಾಗಿ ಪ್ರಕಟಿಸಿದ್ದಾರೆ. ಇಂದು ಟೆಲಿವಿಜನ್‌ ಚಾನೆಲ್‌ಗಳಲ್ಲಿ ಕೃತಕ ಧಾರಾವಾಹಿಗಳನ್ನು ನೋಡುವವರು ಇದ್ದಾರಾದರೂ, ಹವ್ಯಾಸಿಗಳು ತೆಗೆದ ವಿಡಿಯೋಗಳು, ಹಕ್ಕುಸ್ವಾಮ್ಯ ಇರುವ ಸಂಗೀತ, ಸಿನೆಮಾಗಳು ಅಧಿಕೃತವಾಗಿಯೇ ಉಚಿತ ವೇದಿಕೆಯಲ್ಲಿ ಸಿಗುತ್ತಿವೆ. ಇಂಥ ಉಚಿತ ವಿಡಿಯೋಗಳನ್ನೇ ಮುಂದಿಟ್ಟುಕೊಂಡು ಗೂಗಲ್‌ ಸಂಸ್ಥೆಯು ಯೂಟ್ಯೂಬ್‌ ಚಾನೆಲ್‌ ಆರಂಭಿಸಲು ಹೊರಟಿರುವುದನ್ನೂ ಮುಕ್ತಜ್ಞಾನದ ಹಿನ್ನೆಲೆಯಲ್ಲೇ ಗಮನಿಸಬೇಕು. ಗೂಗಲ್‌ ಎಂಬ ದೈತ್ಯ ಸಂಸ್ಥೆಯು ನಮ್ಮೆಲ್ಲ ಮುಕ್ತಜ್ಞಾನದ ಪ್ರತಿನಿಧಿಯಾಗಲು ಬಿಡದೇ ಸರ್ಕಾರಗಳು, ಮಾಧ್ಯಮ ಸಂಸ್ಥೆಗಳು ಪ್ರಯತ್ನಿಸಬಹುದು. ಇದು ನೋಡಲು ಕಷ್ಟವೆನಿಸಿದರೂ ಖಂಡಿತ ಸಾಧ್ಯವಿದೆ. `ಭಾರತವಾಣಿಯೋಜನೆಯ ಎಲ್ಲ ವಿಡಿಯೋಗಳನ್ನೂ `ಭಾರತವಾಣಿಯ ಸರ್ವರ್‌ನಲ್ಲೇ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿಯೂ ಯೂಟ್ಯೂಬ್‌ನಂತೆಯೇ ಹಲವು ಆಯ್ಕೆಗಳನ್ನು ಕೊಡಲು ಸಾಧ್ಯವಿದೆ.

ಆದ್ದರಿಂದ ಮುಕ್ತಮಾಹಿತಿ ಎಂಬುದು ಈ ಕಾಲದ ರೂಢಿಯಾಗಲಿದೆ. ಅದನ್ನು ತಡೆಯುವ ಯತ್ನವು ಕೆಲಕಾಲ ನಡೆಯಬಹುದಾದರೂ, ಅಂತಿಮವಾಗಿ ಮುಕ್ತಜ್ಞಾನವೇ ಎಲ್ಲೆಡೆ ಹಬ್ಬುವುದು ಖಂಡಿತ. `ಮಾಹಿತಿ ಉಚಿತ, ಸೇವೆಗೆ ಶುಲ್ಕಎಂಬ ನೀತಿ ಈಗಾಗಲೇ ಹಲವೆಡೆ ಜಾರಿಯಲ್ಲಿದೆ. ಯುರೋಪಿನ ಹಲವು ನೂರು ಆನ್‌ಲೈನ್‌ ಕೋರ್ಸ್‌ಗಳು ಅತ್ಯಂತ ವೃತ್ತಿಪರವಾಗಿ ನಿರ್ಮಾಣವಾಗಿದ್ದರೂ ಉಚಿತವಾಗಿ ದೊರಕುತ್ತವೆ. ಹೀಗೆ ಶಿಕ್ಷಣವೂ ಮುಕ್ತವಾಗಿ ಸಿಗುತ್ತಿದೆ. ಈ ಬಗೆಯಲ್ಲಿ ಕೋರ್ಸ್‌ವೇರ್‌ಗಳನ್ನು ಮುಕ್ತವಾಗಿ ನೀಡಲು ಆರಂಭಿಸಿದ ಮೆಸಾಚುಸೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯನ್ನು ಅಭಿನಂದಿಸಲೇಬೇಕಿದೆ. ತಮ್ಮ ಪತ್ರಿಕೆಗಳಲ್ಲಿ ಎಸೆಸೆಲ್ಸಿ, ಪಿಯುಸಿ ಪ್ರಶ್ನೆಪತ್ರಿಕೆಗಳನ್ನು ಉತ್ತರಗಳನ್ನು ಪ್ರಕಟಿಸುವ ಪತ್ರಿಕೆಗಳು ಅವನ್ನೆಲ್ಲ ಪಾಠದ ಮಾದರಿಯಲ್ಲೂ ಆನ್‌ಲೈನ್‌ನಲ್ಲಿ ಕೊಡಬಹುದು.

ವಿಶ್ವವ್ಯಾಪಿ ಜಾಲವನ್ನು (ವರ್ಲ್ಡ್‌ ವೈಡ್‌ ವೆಬ್‌ ಅಥವಾ www) ರೂಪಿಸಿಕೊಟ್ಟ ಟಿಂ ಬರ್ನರ್ಸ್‌ ಲೀ ಹೇಳಿದ ಮಾತುಗಳಿವು: “ಶಿಕ್ಷಣ ನೀಡುವವರು ತಮ್ಮೆಲ್ಲ ಸಂಪನ್ಮೂಲಗಳನ್ನು ಕ್ರೋಡೀಕರಿಸಿ ಆನ್‌ಲೈನ್‌ನಲ್ಲಿ ಬೃಹತ್ತಾದ ಮಾಹಿತಿಯ ಪೂರೈಕೆ ಮಾಡುತ್ತಾರೆ ಎಂಬ ನಿರೀಕ್ಷೆ ನನ್ನದು. ಅದರಲ್ಲೂ ಈ ಮಾಹಿತಿಗಳು ಹೆಚ್ಚಾಗಿ ಅಭಿವೃದ್ಧಿಶೀಲ ದೇಶಗಳಲ್ಲಿ ಇರುವವರಿಗೆ ಉಚಿತವಾಗಿಯೇ ಸಿಗಬೇಕು ಎಂಬುದು ನನ್ನ ಅಪೇಕ್ಷೆ ; ಏಕೆಂದರೆ ಅವರೆಲ್ಲ ಈ ಮಾಹಿತಿಗಳನ್ನು ಬೇರೆ ವಿಧಾನದಲ್ಲಿ ಪಡೆಯುವುದು ಕಷ್ಟ“. ಟಿಂ ಬರ್ನರ್ಸ್‌ ಲೀಯೇ ತನ್ನ ವಿಶ್ವವ್ಯಾಪಿ ಜಾಲದ ಸಂಶೋಧನೆಯ ಹಕ್ಕುಸ್ವಾಮ್ಯವನ್ನು ಇಟ್ಟುಕೊಳ್ಳದೆ ಈ ವಿಶ್ವಕ್ಕೆ ಮುಕ್ತವಾಗಿ ಕೊಟ್ಟಿದ್ದಾರೆ! ಟಿಂ ಅವರ ಜೀವಿತ ಕಾಲದಲ್ಲಿಯೇ ಭಾರತವೂ ಹಳೆಹೊಸ ಮಾಧ್ಯಮಗಳ ಮೂಲಕ ಮುಕ್ತಜ್ಞಾನದತ್ತ, ಅರಿವಿನ ಗೋಮಾಳದತ್ತ ಹೆಜ್ಜೆ ಹಾಕಬೇಕಾದ್ದು ಈಗಿನ ತುರ್ತು ಹೊಣೆಗಾರಿಕೆಯಾಗಿದೆ.

Leave a Reply

Your email address will not be published. Required fields are marked *

eleven − nine =

This site uses Akismet to reduce spam. Learn how your comment data is processed.