ಭವಿಷ್ಯದ ಕಾರಿಗೆ ಭದ್ರ ಬೆಸುಗೆ

ಕನ್ನಡನಾಡಿನ ಅನಂತನಾರಾಯಣನ್ ‘ಆಂಥೋನಿ’ಯ ಭರವಸೆಯ ಆವಿಷ್ಕಾರ

ಅಲ್ಯುಮಿನಿಯಂಯುಕ್ತ ಹಗುರ, ದಕ್ಷ ಕಾರುಗಳ ಕನಸನ್ನು ಕರ್ನಾಟಕದ ವಿಜ್ಞಾನಿ ನನಸು ಮಾಡುತ್ತಿದ್ದಾರೆ ಇಂಧನ ಸುರಕ್ಷತೆಯ ಬೆಸುಗೆಯನ್ನೂ ಹಾಕಲಿದ್ದಾರೆ!

14 Innovative Welding - Anthony photo at the aluminum welder

ಕಾರುಗಳ ಉತ್ಪಾದನೆಯಲ್ಲಿ ವಿಶ್ವಪ್ರಸಿದ್ಧ ಸಂಸ್ಥೆಗಳಾದ ಹೊಂಡಾ, ಟೆಲ್ಸಾ, ಜನರಲ್ ಮೋಟಾರ್ಸ್ – ಎಲ್ಲವೂ ಇಂಥ ಅಲ್ಯುಮಿನಿಯಂಯುಕ್ತ ಹಗುರ ಕಾರಿನ ಸಂಶೋಧನೆಗಳಲ್ಲಿ ತೊಡಗಿವೆ. ನೀವು ಅಂತರಜಾಲದಲ್ಲಿ ಹುಡುಕಿದರೆ ಈ ಬಗ್ಗೆ ಸಾಕಷ್ಟು ಮಾಹಿತಿಗಳು ಸಿಗುತ್ತವೆ. ಹೆಚ್ಚಾಗಿ ಸಿಗದೇ ಇರೋದು ಎಂದರೆ, ಈ ದೈತ್ಯ ಸಂಸ್ಥೆಗಳ ಸಂಶೋಧನೆಗಳಿಗಿಂತಲೂ ಹೆಚ್ಚು ದಕ್ಷವಾದ, ಬಾಳಿಕೆ ಬರುವ ವಿಧಾನವನ್ನು ರೂಪಿಸಿದ ಆಂಥೋನಿ ಫಾರ್ಮುಲಾ!

ಅಮೆರಿಕಾದವರ ನಾಲಗೆಯಲ್ಲಿ `ಆಂಥೋನಿ’ ಆದ ನಮ್ಮ ಕನ್ನಡದ ಸಂಶೋಧಕ, ವಿಜ್ಞಾನಿ ಅನಂತನಾರಾಯಣನ್ ಶೋಧಿಸಿದ ಅಲ್ಯುಮಿನಿಯಂ ಬೆಸುಗೆ (ವೆಲ್ಡಿಂಗ್) ತಂತ್ರಜ್ಞಾನವೇ ಈ ಸೂತ್ರ. ಈ ಬೆಸುಗೆಯ ವಿಧಾನವು ಕಾರು ಉದ್ಯಮದ ಚಹರೆಯನ್ನೇ ಬದಲಿಸಲಿದೆ; ಅಲ್ಯುಮಿನಿಯಂ ಬೆಸುಗೆ ಅಗತ್ಯವಿರುವ ಇನ್ನಿತರೆ ರಂಗಗಳಲ್ಲೂ ಈ ತಂತ್ರಜ್ಞಾನದ ಛಾಪು ಮೂಡಲಿದೆ.

ಪರಿಣಾಮ: ಈಗ ಕಾರು ಉದ್ಯಮದಲ್ಲಿ ಇರುವ ಮಾನದಂಡಗಳು ಬೆಲೆ ಕಳೆದುಕೊಳ್ಳಲಿವೆ. ನಿರ್ಮಾಣದ ನಿರ್ದಿಷ್ಟತೆಗಳು ಬುಡಮೇಲಾಗಲಿವೆ. ವಿನ್ಯಾಸದ ನಿಯಮಗಳು ಬೆಲೆ ಕಳೆದುಕೊಳ್ಳಲಿವೆ. ಉತ್ಪಾದನಾ ತರಬೇತಿಯ ವಿಧಾನಗಳು ಉಲ್ಟಾಪಲ್ಟಾ ಆಗಲಿವೆ. ಸಂಕ್ಷಿಪ್ತವಾಗಿ ಹೇಳಬೇಕು ಎಂದರೆ ಈ ಸಂಶೋಧನೆಯಿಂದಾಗಿ ಅಲ್ಯುಮಿನಿಯಂ ಬೆಸುಗೆಯ ಈಗಿರುವ ಕೈಪಿಡಿಯನ್ನೇ ಕಸದ ಬುಟ್ಟಿಗೆ ಎಸೆದು ಹೊಸ ಸೂತ್ರಗಳನ್ನು ಬರೆಯಬೇಕಾಗುತ್ತದೆ.

ಹಗುರ, ದಕ್ಷ, ಸುರಕ್ಷಿತ

Anthony article May 2015 image 4

ಸಂಪೂರ್ಣವಾಗಿ ಅಲ್ಯುಮಿನಿಯಂನಿಂದಲೇ ತಯಾರಾಗುವ ಕಾರುಗಳು ಹಗುರ. ಆಗ ಅವು ಬಳಸುವ ಇಂಧನದ ಪ್ರಮಾಣವೂ ಕಡಮೆ; ವೇಗೋತ್ಕರ್ಷ (ಆಕ್ಸೆಲೆರೇಶನ್)ವೂ ಸುಧಾರಿಸುತ್ತದೆ; ಬ್ರೇಕ್ ಹಾಕುವುದಕ್ಕೂ, ಕಾರು ನಿಲ್ಲುವುದಕ್ಕೂ ಅಂತರ ಕಡಿಮೆಯಾಗುತ್ತದೆ; ಕಷ್ಟದ ಸನ್ನಿವೇಶದಲ್ಲಿ ಹಗುರ ಕಾರೇ ಉತ್ತಮ; ಕಾರಿನ ಸ್ಥಿರತೆ ಹೆಚ್ಚುತ್ತದೆ; ಅದರಲ್ಲೂ ಕಾರಿನ ಮುಂಭಾಗದಲ್ಲಿ ಅಲ್ಯುಮಿಯಂ ಪ್ರಮಾಣ ಹೆಚ್ಚಿದ್ದರೆ ಇನ್ನೂ ಅನುಕೂಲಕರ.

`ನನ್ನ ಆವಿಷ್ಕಾರಗಳು ಅಲ್ಯುಮಿನಿಯಂ ಬೆಸುಗೆ ಉದ್ಯಮದ ಮೂಲ ಸೂತ್ರಗಳನ್ನೇ ಬುಡಮೇಲು ಮಾಡುತ್ತವೆ’ ಎಂಬುದು ಅನಂತನಾರಾಯಣನ್‌ರ ಖಚಿತ, ಸ್ಪಷ್ಟ ಘೋಷಣೆ. ಕಳೆದ ವರ್ಷ ಬೆಂಗಳೂರಿಗೆ ಬಂದಾಗ ಈ ಲೇಖಕನೊಂದಿಗೆ ಎರಡು ತಾಸು ಮನಬಿಚ್ಚಿ ಮಾತನಾಡಿದ ಅನಂತನಾರಾಯಣನ್‌ಗೆ ಭಾರತವೆಂದರೆ ಈಗಲೂ ಅಚ್ಚುಮೆಚ್ಚು.

ನಾವು ಡೆಲ್ಫಿ ಆಟೋಮೋಟಿವ್ಸ್‌ಗಾಗಿ ಕೆಲಸ ಮಾಡುತ್ತಿದ್ದಾಗ ಶ್ರೀ ಅನಂತನಾರಾಯಣನ್‌ರವರು ವಿವಿಧ ಲೋಹಗಳ ಕೊಳವೆಗಳನ್ನು ದಕ್ಷತೆಯಿಂದ ಬೆಸುಗೆ ಮಾಡುವುದನ್ನು ಅಭಿವೃದ್ಧಿಪಡಿಸಿದರು. ಇದರಿಂದ ಕಾರಿನ ತೂಕ ಕಡಮೆಯಾಯಿತು. ಇಷ್ಟೇ ಅಲ್ಲ, ಬಾಯ್ಲರ್‌ಗಳು, ಪ್ರೆಜರ್ ವೆಸೆಲ್‌ಗಳು, ವಾಹನಗಳ ಚಕ್ರಗಳು, ಟ್ರಕ್ ಚಾಸಿ – ಎಲ್ಲದರಲ್ಲೂ ಅವರ ತಂತ್ರಜ್ಞಾನವನ್ನು ನಾವು ಬಳಸಿ ಯಶ ಪಡೆದಿದ್ದೇವೆ. ಅವರ ತಂತ್ರಜ್ಞಾನದ ಪ್ರೌಢಿಮೆಯನ್ನು ಬಳಸಿಕೊಳ್ಳುವ ಕಾಲ ಭಾರತದ ಉದ್ಯಮಕ್ಕೆ ಇನ್ನೂ ಬಂದಿಲ್ಲ!
     – ಡಾ|| ಶಾಮಸುಂದರ್, ಲೋಹ ವಿನ್ಯಾಸ ತಜ್ಞ, ಬೆಂಗಳೂರಿನ ಪ್ರೋಸಿಮ್ ಸಂಸ್ಥೆಯ ಮುಖ್ಯಸ್ಥ

Anthony article May 2015 image 1

ಈಗ ನಿರ್ಮಾಣವಾಗುತ್ತಿರುವ ಕಾರುಗಳಲ್ಲಿ ಅಲ್ಯುಮಿನಿಯಂ ಮತ್ತು ಉಕ್ಕಿನಿಂದ ತಯಾರಿಸಿದ ಅಡಿಗಟ್ಟು (ಚಾಸಿ) ಮತ್ತು ಬಿಡಿಭಾಗಗಳನ್ನು ಬಳಸುತ್ತಾರೆ. ಅದರಲ್ಲೂ ಅಡಿಗಟ್ಟಿನ ರಚನೆಯಲ್ಲಿ ಕಾರು ಉತ್ಪಾದಕರು ಸಾಕಷ್ಟು ತಲೆ ಕೆರೆದುಕೊಂಡಿದ್ದಾರೆ. ಅಲ್ಯುಮಿನಿಯಂ ಹಗುರವಾದ ಲೋಹವೇನೋ ನಿಜ. ಆದರೆ ಎರಡು ಅಲ್ಯುಮಿನಿಯಂ ಭಾಗಗಳನ್ನು ಪರಸ್ಪರ ಬೆಸುಗೆ ಹಾಕುವುದೆಂದರೆ ವಿಜ್ಞಾನಕ್ಕೇ ಸವಾಲು! ಈ ಬೆಸುಗೆ ನಿಲ್ಲುವುದೇ ಕಷ್ಟ. ಆಂಥೋನಿ ಈ ಸವಾಲನ್ನು ಎದುರಿಸಿ ಗೆದ್ದಿದ್ದಾರೆ. ಎಲ್ಲವೂ ಸರಿಯಾಗಿ ಮುನ್ನಡೆದರೆ ಇನ್ನೆರಡು ವರ್ಷಗಳಲ್ಲಿ ಅವರ ತಂತ್ರಜ್ಞಾನವನ್ನು ಕಾರು ಉತ್ಪಾದನಾ ಸಂಸ್ಥೆಗಳು ಖರೀದಿಸಲಿವೆ. ಭವಿಷ್ಯದ ಕಾರುಗಳಿಗೆ ಆಂಥೋನಿ ಸೂತ್ರದ ಬೆಸುಗೆಯೇ ಭದ್ರ ಬುನಾದಿಯಾಗಲಿವೆ. ಇಂಧನದ ಬಳಕೆಯಲ್ಲಿ ಕಾರುಗಳ ದಕ್ಷತೆ ಹೆಚ್ಚಾಗಲಿದೆ. ಪೆಟ್ರೋಲ್, ಡೀಸೆಲ್, ಸೌರಶಕ್ತಿ, ಹೈಡ್ರೋಜನ್ ಕಾರು – ಇಂಧನ ಯಾವುದೇ ಇರಲಿ, ಮಿಗತೆ ಸಾಧ್ಯವಾಗಲಿದೆ. ಕಾರಿನ ತೂಕ ಒಂದು ಕಿಲೋಗ್ರಾಂ ಕಡಮೆಯಾದರೂ ಸಾಕು, ಅಷ್ಟರಮಟ್ಟಿಗೆ ಇಂಧನ ಉಳಿತಾಯ. ಹನಿಹನಿಗೂಡಿದರೆ ಹಳ್ಳ ತಾನೆ?

ಅಲ್ಯುಮಿನಿಯಂ ಬೆಸುಗೆಯ ಸಮಸ್ಯೆ ಅಷ್ಟಿಷ್ಟಲ್ಲ. ಬೆಸುಗೆ ಮಾಡುವಾಗ ಉಷ್ಣತೆ ವಿಪರೀತ ಹೆಚ್ಚಾಗಿ ಬಿಸಿಯೇರಿದ ಭಾಗವೆಲ್ಲ ಮೆದುವಾಗುತ್ತದೆ. ಬೆಸುಗೆ ಆದಮೇಲೆ ಕಾಣುವ ಚಿಕ್ಕ ಗಂಟುಗಳಲ್ಲಿ ಬಿರುಕು ಮೂಡುತ್ತದೆ. ಒಂದುವೇಳೆ ಬೆಸುಗೆ ಆಗುವಾಗ ಚಿಕ್ಕ ರಂಧ್ರಗಳಲ್ಲಿ ಗಾಳಿ ತುಂಬಿಕೊಂಡರೆ ಆಕ್ಸೈಡ್‌ಗಳು ತೇವಾಂಶವನ್ನು ಹೀರಿಕೊಂಡು ಲೋಹದ ಚಹರೆ ಬದಲಾಗುತ್ತದೆ. ಯಂತ್ರಮಾನವರನ್ನು (ರೊಬೊಟ್) ಬಳಸಿ ಬೆಸುಗೆ ಹಾಕೋಣ ಎಂದರೆ ಅದೂ ಕಷ್ಟ; ದುಬಾರಿ.

ಆದ್ದರಿಂದಲೇ ಕನ್ನಡಿಗ `ಆಂಥೋನಿ’ ಅನಂತನಾರಾ ಯಣನ್ ಈಗಿರುವ ತಂತ್ರಜ್ಞಾನದಲ್ಲಿ ಇರುವ ಎಲ್ಲ ಸಮಸ್ಯೆಗಳಿಗೂ ಪರಿಹಾರ ಹುಡುಕಿದ್ದಾರೆ. ಈ ಕುರಿತ ಬೌದ್ಧಿಕ ಹಕ್ಕುಸ್ವಾಮ್ಯ ಇನ್ನೇನು ಅವರ ಕೈಸೇರಲಿದೆ. ಜನರಲ್ ಮೋಟಾರ್ಸ್ ಕಾರ್ಪೋರೇಶನ್‌ನಲ್ಲಿ, ಅದರದ್ದೇ ಭಾಗವಾದ ಡೆಲ್ಫಿ ಕಾರ್ಪೋರೇಶನ್‌ನಲ್ಲಿ ೧೯ ವರ್ಷಗಳ ಕಾಲ ಕೆಲಸ ಮಾಡಿ, ಸಂಸ್ಥೆಯ ಹಲವು ಮಹತ್ತ್ವದ ಸಂಶೋಧನೆಗಳಿಗೆ ಕಾರಣವಾದ, ಬೆಸುಗೆ ಮತ್ತು ಲೋಹ ತಂತ್ರಜ್ಞಾನದಲ್ಲಿ ಈಗಾಗಲೇ ೨೬ ಪೇಟೆಂಟ್‌ಗಳನ್ನು ಖಚಿತವಾಗಿ ಬುಟ್ಟಿಗೆ ಹಾಕಿಕೊಂಡಿರುವ ಆಂಥೋನಿಗೆ ಇದೇನೂ ಹೊಸತಲ್ಲ ಬಿಡಿ!

`ಅಲ್ಯುಮಿನಿಯಂ ಬೆಸುಗೆ ಕುರಿತ ಕಾರು ನಿರ್ಮಾಣದ ಭಾಷ್ಯೆಯನ್ನೇ ಬದಲಿಸುವುದು ತಮಾಶೆಯ ಸಂಗತಿಯಲ್ಲ. ಅದಕ್ಕೆ ಸಾಕಷ್ಟು ಸಮಯ ಬೇಕು. ಆದರೆ ಈಗಿರುವ ಬೆಸುಗೆ ವಿಧಾನಗಳು ಯಾವ ಪ್ರಯೋಜನಕ್ಕೂ ಬಾರದೆ ಒದ್ದಾಟ ನಡೆದಿರುವ ರಂಗಗಳಲ್ಲಿ ಆದಷ್ಟೂ ಬೇಗ ನನ್ನ ತಂತ್ರಜ್ಞಾನದ ಅಳವಡಿಕೆ ಆಗುವ ಸಾಧ್ಯತೆ ಇದೆ. ಮುಂದಿನ ಒಂದೆರಡು ವರ್ಷಗಳಲ್ಲೇ ನನ್ನ ಸೂತ್ರವನ್ನು ವಾಣಿಜ್ಯಕ ಬಳಕೆ ಮಾಡಿಕೊಂಡು ತಯಾರಾದ ಉತ್ಪನ್ನಗಳು ಮಾರುಕಟ್ಟೆಗೆ ಬರಲಿವೆ’ ಎಂದು ಆಂಥೋನಿ ಅನಂತನಾರಾಯಣನ್ `ಉತ್ಥಾನ’ಕ್ಕೆ ತಿಳಿಸಿದ್ದಾರೆ. ಈಗಿರುವ ಬೆಸುಗೆ ತಂತ್ರಜ್ಞಾನದಿಂದ ಉಂಟಾಗುತ್ತಿರುವ ಭಾರೀ ಖರ್ಚು ಮತ್ತು ಕಳಪೆ ಗುಣಮಟ್ಟ – ಎರಡನ್ನೂ ಗಮನಿಸಿದರೆ ತನ್ನ ಕೇಬಲ್ ವೆಲ್ಡಿಂಗ್ ಪೇಟೆಂಟ್ ಬಹುಬೇಗ ಸಿಗುತ್ತೆ ಎಂಬ ವಿಶ್ವಾಸವೂ ಅವರಿಗಿದೆ. ಕಾರುಗಳೂ ಸೇರಿದಂತೆ ವಾಹನಗಳನ್ನು ಉತ್ಪಾದಿಸುವ ಆಟೋ ರಂಗದಲ್ಲಿ ದೊಡ್ಡ ಗಾತ್ರದ ಕೇಬಲ್ ವೆಲ್ಡಿಂಗ್ ಹಕ್ಕನ್ನು ಮಾರಿ ಅವೆಲ್ಲವೂ ಜಾಗತಿಕವಾಗಿ ತನ್ನ ತಂತ್ರಜ್ಞಾನ ಅಳವಡಿಸಿಕೊಳ್ಳುವ ನಿರೀಕ್ಷೆಯನ್ನೂ ಅವರು ಇಟ್ಟುಕೊಂಡಿದ್ದಾರೆ. ಅಂದರೆ ಚಿಕ್ಕ ಮತ್ತು ದೊಡ್ಡ ಪ್ರಮಾಣದ ಬೆಸುಗೆಗಳನ್ನು ದಕ್ಷವಾಗಿ, ಅಗ್ಗದಲ್ಲಿ, ಗುಣಮಟ್ಟದಲ್ಲಿ ರಾಜಿಯಿಲ್ಲದಂತೆ ಮಾಡುವ ವಿಶಿಷ್ಟ ಸೂತ್ರವನ್ನು ಆಂಥೋನಿ ಸಿದ್ಧಿಸಿಕೊಂಡಿದ್ದಾರೆ.

ಆಂಥೋನಿ ಆವಿಷ್ಕಾರದ ವೈಶಿಷ್ಟ್ಯಗಳೇನು?

Anthony article May 2015 image 5
ಹಾಗಾದರೆ ಆಂಥೋನಿ ಅನಂತನಾರಾಯಣನ್ ಆವಿಷ್ಕಾರಗಳು ದೈತ್ಯ ಸಂಸ್ಥೆಗಳ ಆವಿಷ್ಕಾರಗಳನ್ನೇ ಬದಿಗೆ ಸರಿಸುವಷ್ಟು ಉತ್ತಮವೆ? ಈ ಪ್ರಶ್ನೆಯನ್ನು ಅವರಿಗೆ ನೇರವಾಗಿ ಕೇಳಿದಾಗ ಅನಂತನಾರಾಯಣನ್ ಖುಷಿಯಿಂದ ಒಂದು ತುಲನಾತ್ಮಕ ಪಟ್ಟಿ ಕಳಿಸಿಕೊಟ್ಟರು. ಅದನ್ನೇ ಸರಳವಾಗಿ ಹೇಳುವುದಾದರೆ, ಅನಂತನಾರಾಯಣನ್ ಆವಿಷ್ಕಾರವು ೫೦೦ಕ್ಕೂ ಹೆಚ್ಚು ಬೆಸುಗೆಗಳ ನಂತರ ಎಲೆಕ್ಟ್ರೋಡ್‌ಗಳು ಬಾಳಿಕೆ ಬರುವಂತೆ ನೋಡಿಕೊಳ್ಳುತ್ತವೆ. ಈ ಅಂಶ ಜನರಲ್ ಮೋಟಾರ್ಸ್ ಸೂತ್ರದಲ್ಲಿ ಇಲ್ಲ. ಅಲ್ಯುಮಿನಿಯಂ ಹಾಳೆಗಳ ದಪ್ಪವನ್ನು ಹೆಚ್ಚಿಸಿದರೂ ಅನಂತನಾರಾಯಣನ್ ಆವಿಷ್ಕಾರದ ಬೆಸುಗೆ ನಿಲ್ಲುತ್ತದೆ; ಜನರಲ್ ಮೋಟಾರ್ಸ್‌ನಲ್ಲಿ ಈ ಗುಣವಿಲ್ಲ. ವಿವಿಧ ಅಳತೆಯ ದಪ್ಪದ ಹಾಳೆಗಳನ್ನು ಸ್ಪಾಟ್ ವೆಲ್ಡಿಂಗ್ ಮಾಡುವುದು, ವಿಮಾನರಂಗದಲ್ಲಿ ಬಳಸುವ ಮಿಶ್ರಲೋಹಗಳನ್ನು ಖಚಿತವಾಗಿ ಬೆಸುಗೆ ಹಾಕುವುದು, ವಜ್ರವಿನ್ಯಾಸದ ಅಲ್ಯುಮಿನಿಯಂ ಪ್ಲೇಟುಗಳ ಬೆಸುಗೆ, – ಹೀಗೆ ಹಲವು ವಿಶೇಷ ಸಾಧ್ಯತೆಗಳನ್ನು ಅನಂತನಾರಾಯಣನ್ ಆವಿಷ್ಕಾರವು ಹೊಂದಿದೆ. ಜನರಲ್ ಮೋಟಾರ್ಸ್‌ನಲ್ಲಿ ಇವಿಲ್ಲ. ಇದೇ ಬಗೆಯ ನ್ಯೂನತೆಗಳು ಫ್ರೋನಿಯಸ್ ಡೆಲ್ಟಾ ವೆಲ್ಡಿಂಗ್ ವಿಧಾನದಲ್ಲೂ ಇವೆ; ಸಾಂಪ್ರದಾಯಿಕ ಸ್ಪಾಟ್ ಬೆಸುಗೆ ವಿಧಾನಗಳಲ್ಲೂ ಇವೆ. ಆದ್ದರಿಂದಲೇ ಆಂಥೋನಿ ಬೆಸುಗೆ ಭದ್ರ, ವಿಶಿಷ್ಟ ಮತ್ತು ಬಾಳಿಕೆಯದು.

Anthony article May 2015 image 3

ಅಲ್ಯುಮಿನಿಯಂ ಬೆಸುಗೆಯ ಅನುಕೂಲಗಳನ್ನು ಆಂಥೋನಿ ವಿವರಿಸುವ ಪರಿಯೇ ಕುತೂಹಲಕರ. ವಿಶ್ವದಲ್ಲೇ ಮೊದಲ ಸಲ ನೀವು ತೆಳು – ದಪ್ಪ ಗಾತ್ರದ ಅಲ್ಯುಮಿನಿಯಂ ವಸ್ತುಗಳನ್ನು ಬೆಸುಗೆ ಹಾಕಬಹುದು; ಅದೂ ಹಿಂದೆಂದೂ ಸಾಧಿಸಲಾಗದಂತಹ ದೃಢತೆಯಿಂದ ಎಂಬುದು ಆಂಥೋನಿಯವರ ಖಚಿತ ಹೇಳಿಕೆ. ತುಕ್ಕು ಹಿಡಿಯಲಾರದಂಥ, ಸ್ಫೋಟನಿರೋಧಕ ಬೆಸುಗೆಯುಕ್ತ ಅಲ್ಯುಮಿನಿಯಂ ವಸ್ತುಗಳನ್ನು ರೂಪಿಸಿ ಎಂದು ಅವರು ಆಹ್ವಾನಿಸುತ್ತಾರೆ. ಈಗಿರುವ ಬೆಸುಗೆ ಸಾಮರ್ಥ್ಯಕ್ಕಿಂತ ಶೇ. ೫೦ರಿಂದ ೧೫೦ ಪಟ್ಟು ಹೆಚ್ಚಿನ ಪ್ರಮಾಣದ ದೃಢತೆ ಸಾಧಿಸಿ ಎಂದು ಆಂಥೋನಿ ಹೇಳಿದರೂ, ಡೇಟನ್ ಉದ್ಯಮ ಸಂಘದ ಪ್ರಕಾರ ಆಂಥೋನಿಯವರ ಬೆಸುಗೆಯು ಈಗಿರುವ ಯಾವುದೇ ಬೆಸುಗೆಗಿಂತ ಎರಡು ಪಟ್ಟು ಹೆಚ್ಚಿನ ಸಾಮರ್ಥ್ಯ ಹೊಂದಿದೆ. ಇಂಥ ಬೆಸುಗೆಯಿಂದ ನೂರಕ್ಕೆ ೬೦ರಷ್ಟು ಹಣವನ್ನೂ ಉಳಿಸಬಹುದು; ಆಮ್ಲಶುದ್ಧೀಕರಣ ಬೇಕಿಲ್ಲ; ತುಕ್ಕುನಿರೋಧಕ ಸಂಸ್ಕರಣೆ ಬೇಕಿಲ್ಲ; ಆಕ್ಸಿಡೇಶನ್ ಎಂಬ ಅನಗತ್ಯ ರಾಸಾಯನಿಕ ಪ್ರಕ್ರಿಯೆಗೆ ಅವಕಾಶವೇ ಇಲ್ಲ. ಸಮುದ್ರ ಅಥವಾ ರಸ್ತೆಯ ಲವಣಪ್ರಭಾವಕ್ಕೆ ಈ ಬೆಸುಗೆ ಒಳಗಾಗುವುದಿಲ್ಲ. ಕೇವಲ ಅಲ್ಯುಮಿನಿಯಂ ಅಲ್ಲ, ತಾಮ್ರ, ಮ್ಯಾಗ್ನೀಶಿಯಂ ಲೋಹದ ವಸ್ತುಗಳ ಬೆಸುಗೆಯ ಸಾಮರ್ಥ್ಯವನ್ನೂ ಆಂಥೋನಿ ವೃದ್ಧಿಸಿದ್ದಾರೆ.
ಅವರ ಈ ವಿಶೇಷ ಆವಿಷ್ಕಾರವನ್ನು ಗಮನಿಸಿದ ಅಮೆರಿಕಾದ ವೆಲ್ಡಿಂಗ್ ಅಸೋಸಿಯೇಶನ್ ೨೦೧೫ರ ಫೆಬ್ರುವರಿ ೨೮ರಂದು ಅನಂತನಾರಾಯಣನ್‌ರ ವಿಶೇಷ ಉಪನ್ಯಾಸವನ್ನು ಏರ್ಪಡಿಸಿತ್ತು. ಆಂಥೋನಿ ತಮ್ಮ ವಿಶಿಷ್ಟ ಸಾಧನೆಯನ್ನು ಅಮೆರಿಕಾದ ಮುಂದಿಟ್ಟರು.

ಕಾರು ಉತ್ಪಾದಕರ ಲಾಬಿ

ಆ೦ಥೋನಿ ಎಷ್ಟೆಂದರೂ ಒಬ್ಬ ಖಾಸಗಿ ವ್ಯಕ್ತಿ. ಅವರ ತಂತ್ರಜ್ಞಾನವು ಎಷ್ಟೇ ಅನುಕೂಲಕರವಾಗಿ ಇದ್ದರೂ, ದೈತ್ಯ ಕಂಪನಿಗಳು ಅವರನ್ನು, ಅವರ ಸಂಶೋಧನೆಗಳನ್ನು ಕೂಡಲೇ ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ ಈ ಕಂಪನಿಗಳೂ ತಮ್ಮದೇ ಆದ ಸಂಶೋಧನಾ ವಿಭಾಗ ಹೊಂದಿರುತ್ತವೆ.  ಅದಕ್ಕಿಂತ ಹೆಚ್ಚಾಗಿ ಕಾರು ಉತ್ಪಾದನೆಯ ವಿಧಾನಗಳನ್ನೇ ಆಮೂಲಾಗ್ರವಾಗಿ ಬದಲಿಸಲು ಈ ಕಂಪನಿಗಳು ಸಿದ್ಧವಿಲ್ಲ. ಅವು ಈಗಾಗಲೇ ಮುಂದಿನ ಎರಡು ದಶಕಗಳ ಕಾಲ ಮಾರಲು ಬೇಕಾದ ಕಾರುಗಳಿಗೆ ತಕ್ಕಂತೆ, ಈಗಿನ ತಂತ್ರಜ್ಞಾನವನ್ನೇ ಬಳಸಿ ಕಾರ್ಖಾನೆಗಳನ್ನು ಸ್ಥಾಪಿಸಿದೆ. ಹಳೆಯ ತಂತ್ರಜ್ಞಾನದ ಕಾರುಗಳನ್ನು ಮಾರಿ ಬಂದ ಹಣದಿಂದ ಹೂಡಿದ ಹಣ ವಾಪಸು ಬರುವುದೇ ಈ ಕಂಪನಿಗಳ ಆದ್ಯತೆ! ಇಷ್ಟಾಗಿಯೂ ಕೆಲವು ಕಂಪನಿಗಳು ಆಸಕ್ತಿ ತೋರುವ ಸಾಧ್ಯತೆಯೂ ಇದೆ.

ಭಾರತದಲ್ಲಿ ತರಬೇತಿ: ಆಂಥೋನಿ ಕನಸು

`ನನ್ನ ಆವಿಷ್ಕಾರಗಳು ವಾಣಿಜ್ಯೀಕರಣಗೊಂಡ ಮೇಲೆ ನಾನು ಭಾರತದಲ್ಲಿ `ವೆಲ್ಡಿಂಗ್ ಜಾಬ್ ರೆಡಿ’ ತರಬೇತಿ ಶಾಲೆಗಳನ್ನು ಇ-ಶಿಕ್ಷಣಯುಕ್ತವಾಗಿ ಸ್ಥಾಪಿಸುವ ಯೋಜನೆ ಇದೆ’ ಎಂದು ಅನಂತನಾರಾಯಣನ್ ಹೇಳಿದ್ದಾರೆ. ಅದರಲ್ಲೂ ಬಡ ಮಹಿಳೆಯರಿಗೆ ವೆಲ್ಡಿಂಗ್ ರಂಗದ ಅವಕಾಶಗಳನ್ನು ಪರಿಚಯಿಸುವುದು ಅವರ ಉದ್ದೇಶ. ಇಂಥ ಮಹಿಳೆಯರು ತಮ್ಮ ಬಗ್ಗೆ ಯೋಚಿಸುವ ಪರಿಯನ್ನೇ ಬದಲಾಯಿಸುವ ಅಗತ್ಯ ಇದೆ ಎಂಬುದು ಅವರ ಅಭಿಮತ.

ಆಂಥೋನಿ ಈಗಷ್ಟೆ ತಮ್ಮದೇ ಇನ್ನೋವೇಟಿವ್ ವೆಲ್ಡ್ ಸೊಲುಶನ್ಸ್ ಲಿಮಿಟೆಡ್ ಸಂಸ್ಥೆಯನ್ನು ಡೇಟನ್ ನಗರದಲ್ಲಿ ಸ್ಥಾಪಿಸಿದ್ದಾರೆ. ಕೊಮಾವು ಮತ್ತು ಡಬ್ಲ್ಯುಟಿಸಿ ಕಾರ್ಪೋರೇಶನ್ ಸಂಸ್ಥೆಗಳ ಜೊತೆಗೆ ಹೊಸ ಮಾರುಕಟ್ಟೆಗೆ ತಕ್ಕಂತೆ ವಸ್ತುಗಳ ಉತ್ಪಾದನೆಯ ಹಾದಿಯಲ್ಲಿದೆ ಎಂದು ಆಂಥೋನಿ ಈಗಷ್ಟೆ ಪ್ರಕಟಿಸಿದ್ದಾರೆ.
ಇಂಥ ಸಂಶೋಧಕ ಕನ್ನಡನಾಡಿನಿಂದ ಮೂಡಿದವರು ಎಂಬುದು ನಮಗೆ ಅಭಿಮಾನದ ವಿಷಯ.?

ಸಂಶೋಧನೆಯ ನೆಲೆ, ಬೆಲೆ

ಅಮೆರಿಕದಲ್ಲಿ ತನ್ನ ವೃತ್ತಿ ಅನುಭವ ತುಂಬಾ ಚೆನ್ನಾಗಿತ್ತು ಎನ್ನುತ್ತಾರೆ ಅನಂತನಾರಾಯಣನ್. `ಡೆಲ್ಫಿ ಕಾರ್ಪೋರೇಶನ್‌ನಲ್ಲಿ ನನಗೆ ೬ ಸಲ ಬಡ್ತಿ ದೊರೆಯಿತು. ಸಂಶೋಧನಾ ಪ್ರಯೋಗಾಲಯವನ್ನು ನಡೆಸುವುದಕ್ಕೆ ನನಗೆ ಬೇಕಾದಷ್ಟು ಸ್ವಾತಂತ್ರ್ಯ ಕೊಟ್ಟಿದ್ದರು. ಅಲ್ಲಿ ಕಾರ್ಯಸಂಸ್ಕೃತಿ ತುಂಬಾ ಮುಕ್ತವಾಗಿದೆ. ಯಾವುದೇ ವ್ಯಕ್ತಿಯೂ ಅಲ್ಲಿ ಪ್ರಮುಖವಾಗುವುದಿಲ್ಲ. ಇಲ್ಲಿಗೆ ಬಂದ ಭಾರತೀಯ ವೈದ್ಯರನ್ನು ಮತ್ತು ಇಂಜಿನಿಯರ್‌ಗಳನ್ನು ತುಂಬಾ ಗೌರವದಿಂದಲೇ ನೋಡಿಕೊಳ್ಳುತ್ತಾರೆ. ಡೆಲ್ಫಿಯಲ್ಲಿದ್ದಾಗ ಅವರಿಗೆ `ಇನ್ನೋವೇಶನ್ ಹಾಲ್ ಆಫ್ ಫೇಮ್ ಗೌರವ ಬಂದಿತ್ತು; ಜೊತೆಗೇ `ಇಂಟೆಲೆಕ್ಚುಯಲ್ ಪ್ರಾಪರ್ಟಿ ಎಕ್ಸೆಲೆನ್ಸ್ ಪ್ರಶಸ್ತಿಯನ್ನೂ ಪಡೆದಿದ್ದರು. ೨೦೦೦ದಲ್ಲಿ ಅವರಿಗೆ ಡೇಟನ್‌ನ ಅಫಿಲಿಯೇಟೆಡ್ ಸೊಸೈಟೀಸ್ ಕೌನ್ಸಿಲ್‌ನಿಂದ ಮತ್ತು ಇಂಜಿನಿಯರಿಂಗ್ ಎಂಡ್ ಸೈನ್ಸ್ ಫೌಂಡೇಶನ್‌ನಿಂದ ಪ್ರಶಸ್ತಿಗಳು ದಕ್ಕಿದ್ದವು.

ತನಗೆ ಗೊತ್ತಿರುವ ಭಾರತೀಯ ಸಂಶೋಧಕರು ಹೆಚ್ಚಾಗಿ ಪ್ರಕಟಿತ ವಿಷಯಗಳನ್ನೇ ಮರುಪ್ರತಿ ಮಾಡಿ ಬಳಸುತ್ತಾರೆ ಎಂಬುದು ಅನಂತನಾರಾಯಣನ್‌ರ ಕಟುನುಡಿ. ಇದು ಬಿಟ್ಟರೆ ಬಳಕೆಗೆ ಸಿದ್ಧವಿರುವ ಪಾಶ್ಚಾತ್ಯ ತಂತ್ರಜ್ಞಾನವನ್ನು ಎರವಲು ಪಡೆಯುತ್ತಾರೆ. ಭಾರತೀಯ ಸಂಶೋಧಕರು ಅತ್ಯಾಧುನಿಕ ಸಂಗತಿಗಳನ್ನು ಉದ್ಯಮಗಳಿಗಿಂತ ಮುಂಚಿತವಾಗಿ ಆವಿಷ್ಕರಿಸಿದ್ದನ್ನು ಅನಂತನಾರಾಯಣನ್ ನೋಡಿಲ್ಲವಂತೆ. ಇದು ಲೋಹಶಾಸ್ತ್ರಕ್ಕೆ ಸಂಬಂಧಿಸಿದಂತೆ ಅವರ ನೋಟ.

ಇಂದಿನ ಯುವ ಪೀಳಿಗೆಗೆ ಅನಂತನಾರಾಯಣನ್ ಹೇಳುವುದಿಷ್ಟೆ: `ಆಯ್ಕೆಗಳು ಮತ್ತು ಪರಿಣಾಮಗಳ ಬಗ್ಗೆ ಎಚ್ಚರದಿಂದ ಇರಿ. ನಿಮ್ಮ ಆಸಕ್ತಿಗೆ ತಕ್ಕ ವೃತ್ತಿಯನ್ನು ಮಾಡಿರಿ. ನಿಮ್ಮ ವೃತ್ತಿಯಲ್ಲಿ ಅತ್ಯುತ್ಕೃಷ್ಟವಾಗಿರುವ ವ್ಯಕ್ತಿಗಳ ಸಹವಾಸವನ್ನೇ ಹೊಂದಿ. ದೊಡ್ಡ ಕನಸು ಕಾಣಿ; ಚಿಕ್ಕ ಕನಸನ್ನು ಕಾಣುವುದರಿಂದ ಏನೂ ಪ್ರಯೋಜನವಿಲ್ಲ. ವಿಷಯಗಳ ಮೂಲಸಂಗತಿಗಳನ್ನು ಮರೆಯಬೇಡಿ. ಬಡದುರ್ಬಲ ವರ್ಗದ ಜನರನ್ನು ಅತ್ಯಂತ ಮಾನವೀಯತೆಯಿಂದ ನೋಡಿಕೊಳ್ಳಿ.

ನಾಡಿನ ಹೆಮ್ಮೆ `ಆಂಥೋನಿ’ ಅನಂತನಾರಾಯಣನ್

ಅನಂತನಾರಾಯಣನ್ ಎಂಬ ಹೆಸರನ್ನು ಒಂದೇ ಉಸಿರಿನಲ್ಲಿ ಹೇಳಲಾಗದ ಅಮೆರಿಕನ್ನರು ಅವರಿಗೆ `ಆಂಥೋನಿ’ ಎಂಬ ಪ್ರೀತಿಯ ಪುಟ್ಟ ಹೆಸರಿಟ್ಟರೇ ಹೊರತು ಮತ್ತೇನಿಲ್ಲ. ಅನಂತನಾರಾಯಣನ್ ಹುಟ್ಟಿದ್ದು ತಮಿಳುನಾಡಿನ ಮದುರೈ ಬಳಿಯ ತಿರುಮಂಗಲಂನಲ್ಲಿ, ೧೯೫೦ರ ಸೆಪ್ಟೆಂಬರ್ ೨೦ರಂದು. ಅವರ ತಂದೆ ಶ್ರೀ ಎ. ವೆಂಕಟಸುಬ್ರಮಣಿಯನ್, ೧೯೪೦-೮೦ರ ವರ್ಷಗಳಲ್ಲಿ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದವರು. ಅನಂತನಾರಾಯಣನ್‌ರ ಎರಡನೇ ವಯಸ್ಸಿನಿಂದ ೧೮ರವರೆಗೂ ಅವರ ತಂದೆ ಬೆಂಗಳೂರಿನ ಜಾಲಹಳ್ಳಿ ವಾಯುನೆಲೆಯಲ್ಲಿ ಕೆಲಸ ಮಾಡುತ್ತಿದ್ದರು. ಆಗ ಅವರು ಮಲ್ಲೇಶ್ವರಂನಲ್ಲಿ ಬಾಡಿಗೆ ಮನೆಯಲ್ಲಿ ಇದ್ದರು. ಮಲ್ಲೇಶ್ವರಂನ ಗಾಂಧಿ ವಿದ್ಯಾಲಯದಲ್ಲಿ (ಅದೀಗ ಇಲ್ಲ) ಪ್ರಾಥಮಿಕ ಶಿಕ್ಷಣ ಮುಗಿಸಿದ ಅನಂತನಾರಾಯಣನ್ ಶೇಷಾದ್ರಿಪುರಂ ಹೈಸ್ಕೂಲಿನಲ್ಲಿ ಪ್ರೌಢಶಾಲಾ ಶಿಕ್ಷಣ, ದಂಡು ಪ್ರದೇಶದ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದರು. ಆಗ ಅವರಿಗೆ ಕ್ರಿಕೆಟ್ – ಫುಟ್‌ಬಾಲ್ ಆಟವೆಂದರೆ ತುಂಬಾ ಇಷ್ಟವಾಗಿತ್ತು. ಚದುರಂಗ ಆಡುತ್ತಿದ್ದ ಅವರು ಮುಂಬಯಿಯ ಕೇಂದ್ರ ಸರ್ಕಾರಿ ನೌಕರರ ಚದುರಂಗ ಚಾಂಪಿಯನ್ ಕೂಡಾ ಆಗಿದ್ದರು.

`ಶೇಷಾದ್ರಿಪುರಂ ಕಾಲೇಜಿನಲ್ಲಿ ನನ್ನ ಸಂಸ್ಕೃತ ಶಿಕ್ಷಕ ಶ್ರೀ ಶ್ಯಾಮಭಟ್ಟರು, ಗಣಿತದ ಶಿಕ್ಷಕ ಶ್ರೀ ಕೆ. ಶ್ರೀನಿವಾಸಮೂರ್ತಿ, ಭೌತಶಾಸ್ತ್ರದ ಶಿಕ್ಷಕ ಶ್ರೀ ಕೆ.ವಿ. ಶ್ರೀನಿವಾಸ – ಎಲ್ಲರೂ ನನ್ನ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಅವರು ಬರಿಯ ಶಿಕ್ಷಕರಲ್ಲ, ಉತ್ಕೃಷ್ಟ ಮಾನವೀಯ ಅಂತಃಕರಣ ಹೊಂದಿದ್ದ ಚೇತನಗಳು’ ಎಂದು ಅನಂತನಾರಾಯಣನ್ ನೆನಪಿಸಿಕೊಳ್ಳುತ್ತಾರೆ.

ನಂತರ ಮದ್ರಾಸಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಲೋಹಶಾಸ್ತ್ರದಲ್ಲಿ ಬಿಟೆಕ್ ಮಾಡಿದ ಅನಂತನಾರಾಯಣನ್ ೧೯೭೨ರಲ್ಲಿ ಮುಂಬಯಿಯ ಭಾಭಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ ಉದ್ಯೋಗ ಪಡೆದರು. ಅಲ್ಲಿ ೧೧ ವರ್ಷಗಳ ಕಾಲ ಕೆಲಸ ಮಾಡಿದ ಅವರು ಅಮೆರಿಕದ ಒಹೈಯೋ ರಾಜ್ಯ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆದರು. ೧೯೮೫ರಲ್ಲಿ ಎಂ.ಎಸ್. ಸ್ನಾತಕೋತ್ತರ ಪದವಿ ಪಡೆದ ಅವರು ೧೯೮೮ರಲ್ಲಿ ಅದೇ ವಿವಿಯಿಂದ ವೆಲ್ಡಿಂಗ್ ಇಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿಯನ್ನೂ ಪಡೆದರು.

`೧೯೮೦ರ ದಶಕದಲ್ಲಿ ಸರ್ಕಾರಿ ಸಂಬಳ ತುಂಬಾ ಕಡಮೆ ಇತ್ತು. ಮುಂಬಯಿಯಲ್ಲಿ ನನ್ನ ಹೆಂಡತಿ – ಮಕ್ಕಳಿಗೆ ಮನೆ ಮಾಡಿಕೊಳ್ಳಲೂ ಕಷ್ಟವಾಯ್ತು. ಆದ್ದರಿಂದ ನಾನು ದುಡಿಮೆ ಮತ್ತು ಓದಿನ ಅವಕಾಶ ಹುಡುಕಿಕೊಂಡು ಅಮೆರಿಕಗೆ ಹೋದೆ’ ಎಂದು ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಅನಂತನಾರಾಯಣನ್.

ಆಂಥೋನಿ ಅನಂತನಾರಾಯಣನ್ ಸಂಸ್ಥೆಯ ಜಾಲತಾಣ: www.innovativeweldsolutions.com
ವಿವಿಧ ವಾಹನಗಳ ಉತ್ಪಾದನೆ, ಬಳಕೆಯ ಅಂಕಿ-ಅಂಶಗಳು: www.oica.net

ಕಾರು ಬಳಕೆ ತಗ್ಗಿಸಿ; ಭೂಮಿಯ ಬಿಸಿ ತಪ್ಪಿಸಿ

Anthony article May 2015 image 2

ಭೂಮಿಯ ತಾಪಮಾನ ಹೆಚ್ಚಳಕ್ಕೆ ಕಾರು ಮತ್ತು ಇತರೆ ವಾಹನಗಳ ಭರಾಟೆಯೇ ಮುಖ್ಯ ಕಾರಣಗಳಲ್ಲಿ ಒಂದು. ಆದ್ದರಿಂದ ಹಗುರ ಕಾರಿನಿಂದ ಇಂಧನ ಉಳಿತಾಯ ಆಗುವುದಾದರೂ, ಒಟ್ಟಾರೆ ಸಾಮಾಜಿಕ ಮತ್ತು ಪಾರಿಸರಿಕ ಹಿತವನ್ನು ಗಮನಿಸಲೇಬೇಕು. ಅದಕ್ಕಾಗಿ ಕಾರು ಬಳಸುವವರು ಹೀಗೆ ಮಾಡಬಹುದು:

 • ಇಂಧನ ದಕ್ಷ ಕಾರುಗಳನ್ನು ಬಳಸಿ. ಕಡಮೆ ಇಂಧನದಲ್ಲಿ ಹೆಚ್ಚು ದೂರ ಪ್ರಯಾಣ ಮಾಡಬಹುದಾದ ಕಾರುಗಳನ್ನು ಖರೀದಿಸಿ. ಕಡಿಮೆ ಇಂಧನ ಉರಿಸಿದರೆ, ಅಷ್ಟರಮಟ್ಟಿಗೆ ನೀವು ಹೊರಸೂಸುವ ಇಂಗಾಲದ ಡಯಾಕ್ಸೈಡ್ ಕಡಮೆಯಾಗಲಿದೆ!
 • ಆದಷ್ಟೂ ಶುದ್ಧ ಇಂಧನ ಬಳಸಿ. ಡೀಸೆಲ್ ವಾಹನವಾದರೆ ಜೈವಿಕ ಡೀಸೆಲ್ (ಬಯೋಡೀಸೆಲ್) ಬಳಸಲು ಯತ್ನಿಸಿ. ಪೆಟ್ರೋಲಿಗೆ ಎಥನಾಲ್ ಬೆರೆಸಿ ಬಳಸುವ ಬಗ್ಗೆ ಪರಿಶೀಲಿಸಿ.
 • ಪೆಟ್ರೋಲ್/ಡೀಸೆಲ್ ಚಾಲಿತ ಕಾರುಗಳಿಗಿಂತ ವಿದ್ಯುತ್‌ಚಾಲಿತ ಕಾರುಗಳಿಗೆ ಆದ್ಯತೆ ನೀಡಿ. ಡೀಸೆಲ್ ಕಾರುಗಳನ್ನಂತೂ ಬಳಸದೇ ಇರುವುದೇ ಒಳ್ಳೆಯದು.
 • ಕಡಮೆ ದೂರದ ಪ್ರಯಾಣಕ್ಕೆ ನಡೆದೇ ಹೋಗಲು ಯೋಚಿಸಿ. ದೂರದ ಊರುಗಳಿಗೆ ಸಾರ್ವಜನಿಕ ಸಾರಿಗೆ ಬಳಸಿ.
 • ಕಾರಿನ ಯಂತ್ರಭಾಗಗಳು ಸರಿಯಾಗಿವೆಯೇ ಎಂದು ಪರಿಶೀಲಿಸುತ್ತ ಇರಿ. ಸದಾ ನಿಗದಿತ ಮಧ್ಯಮ ವೇಗದಲ್ಲೇ ಪ್ರಯಾಣಿಸಿ. ಸಂಚಾರದಟ್ಟಣೆಯಲ್ಲಿ, ಸಿಗ್ನಲ್‌ಗಳಲ್ಲಿ ಸಿಲುಕಿಕೊಂಡಾಗ ಆಫ್ ಮಾಡಿ.
 • ಅಗತ್ಯ ಇದ್ದಾಗ ಮಾತ್ರ ಕಾರಿನ ಏರ್‌ಕಂಡಿಶನ್ ಸೌಲಭ್ಯ ಬಳಸಿ.
 • ಕಾರನ್ನು ಆದಷ್ಟೂ ಮರುಬಳಕೆ ನೀರಿನಿಂದ ತೊಳೆಯಿರಿ. ಕುಡಿಯುವ ನೀರನ್ನು ಕಾರು ತೊಳೆಯಲು ಬಳಸುವುದು ಸಮರ್ಥನೀಯವಲ್ಲ.

ವಾಹನ ಉದ್ಯಮದ ಮೆಗಾಟ್ರೆಂಡ್

ಮುಂದಿನ ಹತ್ತು ವರ್ಷಗಳಲ್ಲಿ ವಾಹನ ಉದ್ಯಮವು ಹೇಗಿರುತ್ತದೆ? ಈ ಕುರಿತು ಅಮೆರಿಕದ ಆಟೋಮೋಟಿವ್ ಮೆಗಾಟ್ರೆಂಡ್ಸ್ ಮೇಳದಲ್ಲಿ ಉತ್ತರ ಸಿಗುತ್ತದೆ. ೨೦೧೫ರ ಮೆಗಾಟ್ರೆಂಡ್ ಮೇಳದಲ್ಲಿ ದಾಖಲಾದ `ಮೆಗಾಟ್ರೆಂಡ್ ಅರ್ಥಾತ್ ಮಹಾತಿರುವುಗಳು ಹೀಗಿರುತ್ತವೆಯಂತೆ:

 • ವಾಹನ ಉದ್ಯಮದ ಸೂತ್ರಗಳನ್ನೇ ಬುಡಮೇಲು ಮಾಡುವ ತಂತ್ರಜ್ಞಾನಗಳನ್ನು ಹೆಚ್ಚು ಹೆಚ್ಚಾಗಿ ಕಾಣಬಹುದು.
 • ಇಂಗಾಲದ ಡಯಾಕ್ಸೈಡ್ ಎಂಬ ಹಾನಿಕಾರಕ ಅನಿಲವನ್ನು ಹೊರಸೂಸುವ ಪ್ರಮಾಣವನ್ನು ಕಡಮೆ ಮಾಡುವ ಪ್ರಯತ್ನಗಳು ಹೆಚ್ಚಾಗಲಿವೆ.
 • ಗ್ರಾಹಕರ ಅನುಕೂಲಗಳಿಗೆ ತಕ್ಕಂತೆ ಕಾರುಗಳನ್ನು ಇಂಟರ್‌ನೆಟ್‌ಗೆ ಇನ್ನಷ್ಟು ನಿಕಟವಾಗಿ ಜೋಡಿಸುವ ತಂತ್ರಜ್ಞಾನಗಳು ಬರಲಿವೆ.
 • ವಾಹನಗಳ ತೂಕವನ್ನು ಇಳಿಸುವುದು ಈ ದಶಕದ ಮುಖ್ಯ ಬೆಳವಣಿಗೆಯಾಗಲಿದೆ. ಬಹುಶಃ ಇಲ್ಲೇ ಆಂಥೋನಿಯವರ ಸಂಶೋಧನೆಗಳಿಗೆ ಬೆಲೆ ಬರಲಿದೆ.