ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ

೨೦೧೫ರ ಜೂನ್ ೨೮. ಅಂತಾರಾಷ್ಟ್ರೀಯ ವ್ಯೋಮಕೇಂದ್ರಕ್ಕೆ ಸರಕು ತೆಗೆದುಕೊಂಡು ಹೊರಟಿದ್ದ ಸ್ಪೇಸ್‌ಎಕ್ಸ್ ಸಂಸ್ಥೆಯ `ಫಾಲ್ಕನ್ ೯’ ರಾಕೆಟ್ ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಂಡಿತು. ಈ ಸಂಸ್ಥೆಯ ಸ್ಥಾಪಕ, ವಿಶ್ವಖ್ಯಾತ ಅನ್ವೇಷಕ ಇಂಜಿನಿಯರ್ ಇಲಾನ್ ಮಸ್ಕ್ ತನ್ನ ಜನ್ಮದಿನದಂದೇ ಈ ದುರಂತ ಘಟಿಸುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಆ ಕ್ಷಣ ಅವರು ಟ್ವೀಟ್ ಮಾಡಿದ್ದು ಹೀಗೆ: ನಿಜ, ಇಂಥ ಹುಟ್ಟುಹಬ್ಬವನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಈ ರಾಕೆಟ್ ಸ್ಫೋಟಗೊಂಡಿದ್ದು ಏಕೆ ಎಂಬುದಕ್ಕೆ ಸಾವಿರಾರು ಗಂಟೆಗಳ ಕಾಲದ ತನಿಖೆಯ ನಂತರವೂ ಕಾರಣ ಗೊತ್ತಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

elon musk 1

ಹಾಗಂತ ಇಲಾನ್ ಮಸ್ಕ್‌ಗೆ ರಾಕೆಟ್ ಹಾರಿಸುವುದೊಂದೇ ಕೆಲಸ ಎಂದು ತಿಳಿಯಬೇಡಿ. ಈ ಕಾಲದ ಅತ್ಯುತ್ತಮ ಕಾರು ಎಂದೇ ಖ್ಯಾತವಾದ ಟೆಸ್ಲಾ ಕಾರುಗಳು ಅವರ ಸಂಶೋಧನೆಗಳಿಂದ ಮೂಡಿದ ಹೊಸ ಕನಸು. ಈ ಕಾಲದ ಅತ್ಯುತ್ತಮ ಗೃಹಬಳಕೆ ಸೌರಕೋಶ ರೂಪಿಸಿದವರೂ ಅವರೇ. ಲಾಸ್ ಏಂಜಲಿನಿಂದ ಸ್ಯಾನ್ ಫ್ರಾನ್ಸಿಸ್ಕೋವರೆಗೆ ಟ್ಯೂಬ್ ರೈಲಿನ ಮೂಲಕ ಅರ್ಧ ಗಂಟೆಯೊಳಗೇ ನೆಲದ ಮೇಲೆ ಜಾರಿ ತಲುಪಲು ಹಳಿ ಹಾಕಲು ಮುಂದಾದವರೂ ಇಲಾನ್ ಮಸ್ಕ್. ಮನುಕುಲದ ಏಳಿಗೆಗಾಗಿ ಬೇಕಾದ ಎಲ್ಲ ಬಗೆಯ ಹೊಸ ಆವಿಷ್ಕಾರಗಳನ್ನೂ ಮಾಡುವ ಅಮಿತೋತ್ಸಾಹ ಅವರದು.

ಇಲಾನ್ ಮಸ್ಕ್ ಕೇವಲ ವಾಣಿಜ್ಯ ಉದ್ದೇಶದ ಅನ್ವೇಷಕರಲ್ಲ; ತನ್ನೆಲ್ಲ ಸಂಶೋಧನೆಗಳನ್ನೂ ಸಾರ್ವಜನಿಕರಿಗೆ ಬಿಟ್ಟುಕೊಡುವ ಅಪರೂಪದ ನಿರ್ಧಾರವನ್ನೂ ಅವರು ಮಾಡಿಯಾಗಿದೆ. ಇಂಧನ ಉಳಿತಾಯದ ಟೆಸ್ಲಾ ಕಾರಿನಿಂದ ಹಿಡಿದು, ಸೌರಕೋಶದವರೆಗೆ ಎಲ್ಲ ಇಂಜಿನಿಯರಿಂಗ್ ವಿನ್ಯಾಸಗಳನ್ನೂ ಓಪನ್ ಸೋರ್ಸ್ ಮೂಲಕ ಹಂಚುವುದಾಗಿ ಇಲಾನ್ ಮಸ್ಕ್ ಘೋಷಿಸಿದ್ದಾರೆ.

ಈಗಷ್ಟೇ ೪೪ರ ಹರೆಯ ದಾಟಿದ ಈ ದಕ್ಷಿಣ ಆಫ್ರಿಕಾದ ಸಾಹಸಿಯ ಮೊದಲ ಯಶಸ್ವೀ ಯೋಜನೆಯೇ `ಪೇಪಾಲ್’. ಹಲವು ಜಾಲತಾಣಗಳಲ್ಲಿ ಹಣ ಪಾವತಿ ಮಾಡಲು ಹೋದಾಗ `ಪೇಪಾಲ್’ ಎಂಬ ವಿಧಾನವನ್ನು ನೀವು ಕಂಡಿರಬಹುದು. ವಿಶ್ವದಲ್ಲೇ ಇಂಥ ಆನ್‌ಲೈನ್ ಪಾವತಿ ವ್ಯವಸ್ಥೆಯನ್ನು ಅತಿ ಸರಳ ರೂಪದಲ್ಲಿ ಜಾರಿಗೆ ತಂದ ಕೀರ್ತಿಯೂ ಇಲಾನ್ ಮಸ್ಕ್‌ಗೆ ಸಲ್ಲುತ್ತದೆ!

ಪಿಎಚ್‌ಡಿ ಬಿಟ್ಟು ಅನ್ವೇಷಣೆಯ ಹಾದಿ

೧೦ರ ವಯಸ್ಸಿನಲ್ಲೇ ಗಣಕದ ಕೆಲಸಗಳನ್ನು ಕಲಿತ, ೧೨ನೇ ವಯಸ್ಸಿಗೇ ವಿಡಿಯೋ ಗೇಮ್ ರೂಪಿಸಿದ ಇಲಾನ್ ಮಸ್ಕ್ ಪೆನ್ಸಿಲ್ವೇನಿಯಾ ವಿವಿಯಿಂದ ಭೌತಶಾಸ್ತ್ರದಲ್ಲಿ, ವಾರ್ಟನ್ ಸ್ಕೂಲ್‌ನಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ೧೯೯೫ರಲ್ಲಿ ಪಿಎಚ್‌ಡಿ ಓದಲು ಸೇರಿದ ಮಸ್ಕ್ ಎರಡೇ ದಿನಗಳಲ್ಲಿ ಕೋರ್ಸ್ ಬಿಟ್ಟರು! ಇಂಟರ್‌ನೆಟ್, ನವೀಕರಿಸಬಹುದಾದ ಇಂಧನ ಮತ್ತು ವ್ಯೋಮರಂಗದಲ್ಲಿ ತನಗಿರುವ ಉದ್ಯಮಶೀಲತೆಯನ್ನು ಬೆಳೆಸಿಕೊಳ್ಳಲು ಮುಂದಾದರು. ಅಲ್ಲಿಂದ ಅವರದು ಕೇವಲ ಮುನ್ನಡೆ.

೧೯೯೫ರಲ್ಲೇ ಝಿಪ್೨ ಎಂಬ ಇಂಟರ್‌ನೆಟ್ ನಗರದರ್ಶನ ತಂತ್ರಾಂಶ ರೂಪಿಸಿದರು. ಇದು ೧೯೯೯ರಲ್ಲಿ ಕಾಂಪಾಕ್ ಸಂಸ್ಥೆಗೆ ಮಾರಾಟವಾದಾಗ ಮಸ್ಕ್‌ಗೆ ೨೨ ದಶಲಕ್ಷ ಡಾಲರ್ ಸಿಕ್ಕಿತು. ಅದರಲ್ಲಿ ೧೦ ದಶಲಕ್ಷ ಡಾಲರ್‌ಗಳನ್ನು ಹೂಡಿದ ಮಸ್ಕ್ ಎಕ್ಸ್ ಡಾಟ್‌ಕಾಮ್ ಎಂಬ ಆನ್‌ಲೈನ್ ಹಣಕಾಸು ಸೇವೆ ಮತ್ತು ಈಮೈಲ್ ಮೂಲಕ ಹಣಪಾವತಿ ಸೇವೆ ಆರಂಭಿಸಿದರು. ಇದೇ ಮುಂದೆ ಪೇಪಾಲ್ ಆಯಿತು. ಈಬೇ ಸಂಸ್ಥೆಯು ಇದನ್ನು ಖರೀದಿಸಿದಾಗ ಮಸ್ಕ್‌ಗೆ ಸಿಕ್ಕಿದ್ದು ೧೬೫ ದಶಲಕ್ಷ ಡಾಲರ್! ಹಣ ಹಲವು ಪಟ್ಟು ಬೆಳೆದಾಗ ಮಸ್ಕ್ ಕನಸುಗಳಿಗೆ ಇನ್ನಷ್ಟು ರೆಕ್ಕೆಪುಕ್ಕ ಬಂತು.

೨೦೦೧ರಲ್ಲಿ ಮಸ್ಕ್ `ಮಾರ್ಸ್ ಓಯಸಿಸ್’ ಎಂಬ ಜನಪ್ರಿಯ ಪ್ರಯೋಗ ಆರಂಭಿಸಿದರು, ಮಂಗಳ ಗ್ರಹದಲ್ಲಿ ಆಹಾರ ಬೆಳೆಸುವ ಈ ವ್ಯವಸ್ಥೆಯನ್ನು ಮಸ್ಕ್ ರೂಪಿಸಿದ್ದು ಕೇವಲ ಜನಪ್ರಿಯತೆಗೆ; ವ್ಯೋಮರಂಗದಲ್ಲಿ ಆಸಕ್ತಿ ಕೆರಳಿಸಲು. ಅದಾದ ಮೇಲೆ ಮಸ್ಕ್ ವ್ಯೋಮರಂಗದಲ್ಲೇ ಹಲವು ಅನುಭವಗಳಿಗೆ ಪಕ್ಕಾದರು. ನಾಸಾ ಸಂಸ್ಥೆಗೆ ಮಾರಾಟ ಮಾಡುವ ರಾಕೆಟ್‌ಗಳ ಬೆಲೆಯು ಅವುಗಳ ಉತ್ಪಾದನಾ ವೆಚ್ಚದ ಶೇಕಡಾ ೩ರಷ್ಟು ಮಾತ್ರ ಎಂಬ ರಹಸ್ಯವನ್ನು ಅರಿತ ಮಸ್ಕ್ ತಡ ಮಾಡಲಿಲ್ಲ. ಅದಕ್ಕಾಗಿ ತಂತ್ರಜ್ಞಾನವನ್ನೂ ಸುಧಾರಿಸಿದ ಮಸ್ಕ್ ಆ ಕಾಲದ ಬೆಲೆಗಿಂತ ಹತ್ತನೇ ಒಂದರಷ್ಟು ಬೆಲೆಗೆ ರಾಕೆಟ್ ರೂಪಿಸಿಯೂ ಶೇ. ೭೦ರಷ್ಟು ಲಾಭ ಪಡೆದರು! ಅವರ ಕಾರ್ಯತತ್ಪರತೆ, ಅಗ್ಗದ ಬೆಲೆ ಮತ್ತು ನವೀನ ವಿಧಾನಗಳನ್ನು ಗಮನಿಸಿದ ನಾಸಾ ಸಂಸ್ಥೆಯು ತನ್ನ ಸ್ಪೇಸ್ ಶಟಲ್ ಬದಲಿಗೆ ಮಸ್ಕ್ ಕಂಪನಿಯ ರಾಕೆಟ್‌ಗಳನ್ನೇ ಬಳಸಲು ನಿರ್ಧರಿಸಿತು.

ಅದೇ ಹೊತ್ತಿಗೆ (೨೦೦೩) ಮಸ್ಕ್ ಇನ್ನಿಬ್ಬರೊಂದಿಗೆ ಟೆಸ್ಲಾ ಎಂಬ ಕಾರು ಉತ್ಪಾದಕ ಸಂಸ್ಥೆಯನ್ನು ಸ್ಥಾಪಿಸಿದರು. ೨೦೧೨ರಿಂದ ಟೆಸ್ಲಾ ಕಾರುಗಳು ಮಾರುಕಟ್ಟೆಯಲ್ಲಿ ಬಿರುಸಾಗಿ ಮಾರಾಟವಾಗುತ್ತಿವೆ. ಒಂದೆಡೆಗೆ ಕಾರು ಮಾರುತ್ತಲೇ ಡೇಮ್ಲರ್, ಮರ್ಸಿಡಿಸ್ ಬೆಂಝ್, ಟೋಯಟಾದಂತ ದೈತ್ಯ ಸಂಸ್ಥೆಗಳಿಗೆ ವಿದ್ಯುತ್ ಪವರ್‌ಟ್ರೈನ್ ವ್ಯವಸ್ಥೆಗಳನ್ನೂ ಮಾರಿದರು. ಕಾರು ಮಾರುಕಟ್ಟೆಯಲ್ಲಿ ಚಂಡಮಾರುತವಾದ ಮಸ್ಕ್‌ರನ್ನು ಹಲವು ಪ್ರತಿಷ್ಠಿತ ಮಾಧ್ಯಮಗಳು ಅವರನ್ನು ಕಾರುಜನಕ ಹೆನ್ರಿ ಫೋರ್ಡ್‌ಗೆ ಹೋಲಿಸಿದರೆ ತಪ್ಪೆ?

elon musk 2

ಇಷ್ಟಾಗಿ ೨೦೧೪ರಿಂದ ಟೆಸ್ಲಾ ಸಂಸ್ಥೆಯಿಂದ ಮಸ್ಕ್ ಪಡೆಯುತ್ತಿರುವುದು ಕೇವಲ ಒಂದು ಡಾಲರ್‌ನ ವಾರ್ಷಿಕ ವೇತನ!

ಭೂಮಿ ಬಿಸಿಯಾಗುವುದನ್ನು ತಡೆವ ಯತ್ನ

೨೦೦೬ರಲ್ಲಿ ಮಸ್ಕ್ ಇನ್ನೊಂದು ಕನಸಿಗೆ ಲಗ್ಗೆ ಹಾಕಿದರು. ಅದೇ ಸೋಲಾರ್ ಸಿಟಿ. ವಿಶ್ವದಲ್ಲೇ ಅತಿದೊಡ್ಡ ಸೌರಶಕ್ತಿ ಆಧಾರಿತ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಗುರಿ ಮಸ್ಕ್‌ಗೆ ಇದೆ. ಈಗ ಸೋಲಾರ್ ಸಿಟಿಯು ಅಮೆರಿಕಾದ ಸೌರಶಕ್ತಿ ಉತ್ಪಾದನೆಯ ಎರಡನೇ ಅತಿದೊಡ್ಡ ಸಂಸ್ಥೆಯಾಗಿ ಬೆಳೆದಿದೆ.

ಟೆಸ್ಲಾ ಮತ್ತು ಸೋಲಾರ್ ಸಿಟಿ – ಎರಡೂ ಪರಿಕಲ್ಪನೆಗಳಿಗೆ ಭೂಮಿ ಬಿಸಿಯಾಗುವುದನ್ನು ತಪ್ಪಿಸುವ ಉದ್ದೇಶವೇ ಮೂಲಾಧಾರ ಎಂದು ಮಸ್ಕ್ ಘೋಷಿಸಿದ್ದಾರೆ. ಇಲಾನ್ ಮಸ್ಕ್ ಒಣ ಹೂಡಿಕೆದಾರನಲ್ಲ; ಭೂಮಿಯ ಬಗ್ಗೆ ಕಾಳಜಿ ಹೊಂದಿರುವ ಹಸಿಬಿಸಿ ಅನ್ವೇಷಕ. ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನಸ್ಸಿದ್ದೂ ಹೆಚ್ಚಾಗಿ ಗೆಲುವನ್ನೇ ಕಂಡ ನಾಯಕ.

elon musk 4

೨೦೧೩ರಲ್ಲಿ ಮಸ್ಕ್ ಮತ್ತೊಂದು ಕನಸನ್ನು ಅನಾವರಣಗೊಳಿಸಿದರು. ಬೃಹತ್ ಲಾಸ್ ಏಂಜಲಿಸ್‌ನಿಂದ ಸ್ನಾನ್‌ಫ್ರಾನ್ಸಿಸ್ಕೋ ಬೇ ಏರಿಯಾದವರೆಗೆ ಹೊಸಬಗೆಯ ಸಾರಿಗೆ ವ್ಯವಸ್ಥೆಯನ್ನು ಮಸ್ಕ್ ಪ್ರಸ್ತಾಪಿಸಿದರು. ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಂಸ್ಥೆಯ ನುರಿತ ವಿಜ್ಞಾನಿಗಳೊಂದಿಗೆ ಕುಳಿತು ಚರ್ಚಿಸಿ ತಯಾರಿಸಿದ ನವೋನವ ಸಾರಿಗೆ ವಿಧಾನವನ್ನು ಮಸ್ಕ್ `ಹೈಪರ್‌ಲೂಪ್’ ಎಂದು ಕರೆದಿದ್ದಾರೆ. ೫೬೦ ಕಿಲೋಮೀಟರ್‌ಗಳ ದೂರವನ್ನು ೩೫ ನಿಮಿಷಗಳ ಒಳಗೇ ಕ್ರಮಿಸಲು ಮಸ್ಕ್ ನೀಲನಕಾಶೆ ಹಾಕಿದರು. ವಿಮಾನದಲ್ಲೇ ದೂರ ಕ್ರಮಿಸಲು ಒಂದೂಕಾಲು ತಾಸು ಬೇಕು! ಸರಿಯಾಗಿ ಜಾರಿಮಾಡಿದರೆ ಹೈಪರ್‌ಲೂಪ್‌ನಲ್ಲಿ ಖರ್ಚೂ ಕಡಿಮೆ ಎನ್ನುವುದು ಮಸ್ಕ್ ಪ್ರತಿಪಾದನೆ. ತನ್ನ ಕನಸನ್ನು ಸಮರ್ಥಿಸಿಕೊಳ್ಳಲು ಕ್ಯಾಲಿಫೋರ್ನಿಯಾದ ಖ್ವೇ ಕಣಿವೆಯಲ್ಲಿ ೫ ಕಿಮೀ ಹೈಪರ್‌ಲೂಪ್ ಸ್ಥಾಪಿಸಲು ಮಸ್ಕ್ ಮುಂದಾಗಿದ್ದಾರೆ. ೭೫ ಸಾವಿರ ಜನರಿರುವ ನಗರದಲ್ಲಿ ಸೌರಶಕ್ತಿಯನ್ನೇ ಮೂಲ ಇಂಧನವಾಗಿಸಲೂ ನಿರ್ಧರಿಸಲಾಗಿದೆ. ೨೦೧೬ರಲ್ಲಿ ಈ ಎಲ್ಲ ಚಟುವಟಿಕೆಗಳು ಆರಂಭವಾಗಲಿವೆ. ಈ ಮಾದರಿ ನಗರದ ಮೂಲಕ ಜಗತ್ತಿನ ಇಂಧನ, ಸಾಗಾಣಿಕೆ ಚಿತ್ರಣವನ್ನೇ ಬದಲಿಸಲು ಮಸ್ಕ್ ಪಣ ತೊಟ್ಟಿದ್ದಾರೆ.

elon musk 3

ಇಲಾನ್ ಮಸ್ಕ್ ಮಾಡಿದ್ದೆಲ್ಲ ಅತ್ಯಪರೂಪದ ಸಂಗತಿಗಳೆ? ಅವರ ಪ್ರಮುಖ ಯೋಜನೆಗಳನ್ನು ವಿಶ್ಲೇಷಿಸಿದಾಗ `ಹೌದು’ ಎನ್ನದೆ ವಿಧಿಯಿಲ್ಲ.

ಟೆಸ್ಲಾ ಕಾರುಗಳ ಉತ್ಪಾದನೆಯನ್ನೇ ತೆಗೆದುಕೊಳ್ಳಿ. ಟೆಸ್ಲಾ ಕಾರುಗಳು ಹೇಗೆ ಬದುಕು ಬದಲಿಸುವ ತಂತ್ರಜ್ಞಾನ ಎಂದು ಟಿಮ್ ಅರ್ಬನ್ ಎಂಬ ವಿಜ್ಞಾನ ಲೇಖಕ ಸವಿವರವಾಗಿ ದಾಖಲಿಸಿದ್ದಾರೆ. ಅವರದೇ ಮಾತುಗಳಲ್ಲಿ ಕೇಳೋಣ.

ಉಳ್ಳವರಿಂದ ಹಣ ಪಡೆದು ಅಗ್ಗದ ಕಾರು ನಿರ್ಮಾಣ

ಈ ಭೂಮಿಯ ಇಂಧನ ಮೂಲಗಳ ಪೈಕಿ ಕಲ್ಲಿದ್ದಲನ್ನು ಇನ್ನು ೧೧೦ ವರ್ಷಗಳ ಕಾಲ ಮಾತ್ರವೇ ಬಳಸಬಹುದು. ನೈಸರ್ಗಿಕ ಅನಿಲದ ಕಾಲಾವಧಿ ೫೨ ವರ್ಷಗಳು, ಕಚ್ಚಾ ತೈಲದ ಕಾಲಾವಧಿ ೫೦ ವರ್ಷಗಳು. ಆದ್ದರಿಂದ ವಿದ್ಯುತ್ ಚಾಲಿತ ಟೆಸ್ಲಾ ಕಾರುಗಳು ದಕ್ಷತೆಯಿಂದ ಬಳಸಿದರೆ ಲಾಭ ಹೆಚ್ಚು ಎನ್ನುವುದು ಅರ್ಬನ್ ವಾದದ ಅತಿ ಸಂಕ್ಷಿಪ್ತ ರೂಪ. ಟೆಸ್ಲಾ ಸಂಸ್ಥೆಯು ಅತಿಸಿರಿವಂತರಿಗೆ ಒಂದು ಲಕ್ಷ ಡಾಲರ್ ಬೆಲೆಯ ಐಷಾರಾಮಿ ಕಾರುಗಳನ್ನೂ, ೭೫ ಸಾವಿರ ಡಾಲರ್ ಬೆಲೆಯ ಮಧ್ಯಮ ಬೆಲೆ ಕಾರುಗಳನ್ನೂ, ೩೫ ಸಾವಿರ ಡಾಲರ್ ಬೆಲೆಯ ಗರಿಷ್ಠ ಮಾರುಕಟ್ಟೆ ಇರುವ ಕಡಿಮೆ ಬೆಲೆ ಕಾರುಗಳನ್ನೂ ಹಂತ ಹಂತವಾಗಿ ಉತ್ಪಾದಿಸಲಿದೆ. ದುಬಾರಿ ಬೆಲೆಯ ಕಾರುಗಳ ಮಾರಾಟದ ಹಣವನ್ನೇ ಅಗ್ಗದ ಕಾರುಗಳ ಉತ್ಪಾದನೆಗೆ ಬಳಸುವುದು ಇಲ್ಲಿನ ತಂತ್ರ! ಅದಕ್ಕೇ ಈಗ ರೋಡ್‌ಸ್ಟರ್ ಎಂಬ ಐಷಾರಾಮಿ ಕಾರು ಬೀದಿಗೆ ಬಂದಿದೆ. ಮೂರನೇ ಹಂತದ (ಸುಮಾರು ೨೧ ಲಕ್ಷ ರೂ.) ಕಾರುಗಳು ೨೦೧೭ರಲ್ಲಿ ಮಾರುಕಟ್ಟೆಗೆ ಬರಬಹುದು ಎಂಬ ಅಂದಾಜಿದೆ.

ಈ ಕಾರುಗಳನ್ನು ಓಡಿಸುವುದು ಸುಲಭ. ಗೇರ್‌ಗಳಿಲ್ಲ ಈ ಕಾರುಗಳು ಸದ್ದಿಲ್ಲದೆ ಸಾಗುತ್ತವೆ. ಗ್ಯಾಸ್ ತುಂಬಲು ನಿಲ್ಲಿಸಬೇಕಿಲ್ಲ. ಸಾಂಪ್ರದಾಯಿಕ ಎಂಜಿನ್ನೇ ಇಲ್ಲದಿರುವುದರಿಂದ ಹೆಚ್ಚು ಸರಕು ತುಂಬಿಸಬಹುದು. ಅದಕ್ಕೇ ಈ ಕಾರುಗಳ ಮುಂಭಾಗವನ್ನು `ಹುಡ್ ಎಂದು ಕರೆಯುತ್ತಿಲ್ಲ; ಫ್ರಂಕ್ (ಫ್ರಂಟ್+ಟ್ರಂಕ್) ಎನ್ನುತ್ತಾರೆ. ಎಂಜಿನ್ ಇಲ್ಲದಿರುವುದರಿಂದ ಹೆಚ್ಚು ಸುರಕ್ಷಿತ. ಅತಿ ಕಡಿಮೆ ನಿರ್ವಹಣಾ ವೆಚ್ಚ. ಹೊಗೆಯಿಲ್ಲ. ಒಟ್ಟಿನಲ್ಲಿ ಪರಿಸರ ಸ್ನೇಹಿ, ಕಡಿಮೆ ನಿರ್ವಹಣಾ ವೆಚ್ಚದ ವಾಹನಗಳು. ವರ್ಷಕ್ಕೆ ಇಂಥ ೫೦ ಸಾವಿರ ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯ ಟೆಸ್ಲಾ ಮೋಟಾರ್ಸ್‌ಗೆ ಇದೆ. ಕ್ಯಾಲಿಫೋರ್ನಿಯಾದಲ್ಲಿ ಇರುವ ಅದರ ಉತ್ಪಾದನಾ ಘಟಕದ ಜಾಗ ಈ ಮೊದಲು ಜಿಎಂ ಮತ್ತು ಟೋಯಟಾ ಸಂಸ್ಥೆಗಳಿಗೆ ಸೇರಿತ್ತು!

elon musk 5

ವಿದ್ಯುತ್ ಕೋಶಗಳಲ್ಲಿ ಲಿಥಿಯಂ ಬಳಸಿದೆ; ಅವುಗಳನ್ನು ತ್ಯಾಜ್ಯವಾಗಿ ಭೂಹೊಂಡಗಳಲ್ಲಿ ತುಂಬಿಸಲು ಕಾನೂನಿನ ಅನುಮತಿ ಇದೆ. ಹೀಗಿದ್ದೂ ಇವುಗಳ ಮರುಬಳಕೆಯೂ ಸಾಧ್ಯ. ಟೆಸ್ಲಾ ಬ್ಯಾಟರಿಗಳಲ್ಲಿ ಜಪಾನ್ ಮತ್ತು ಪೋಲೆಂಡ್‌ಗಳಿಂದ ಆಮದಾದ ಕೃತಕ ಗ್ರಾಫೈಟ್ ಬಳಸಲಾಗಿದೆ. ಆದ್ದರಿಂದ ಮಾಲಿನ್ಯಕಾರಕವಾದ ಚೀನಾದ ಗ್ರಾಫೈಟ್ ಬಳಸುವ ಸಾಧ್ಯತೆ ಇಲ್ಲ. ಇಷ್ಟಾಗಿಯೂ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲನ್ನೇ ಹೆಚ್ಚಾಗಿ ಬಳಸುತ್ತಾರೆ ಎಂಬ ವಾಸ್ತವವನ್ನು ಅಲ್ಲಗಳೆಯಲಾಗದು. ಮುಂದಿನ ದಿನಗಳಲ್ಲಿ ಸೌರಶಕ್ತಿಯಿಂದಲೇ ವಿದ್ಯುತ್ ಉತ್ಪಾದನೆ ಹೆಚ್ಚಾಗಬೇಕು ಎಂಬ ಆಶಯದಲ್ಲಿ ನೋಡಿದಾಗ, ಈ ಕಾರುಗಳನ್ನು ತೆಗಳಲು ಕಾರಣಗಳು ಇರುವುದಿಲ್ಲ.

ಒಮ್ಮೆ ಚಾರ್ಜ್ ಆದರೆ ಈ ಕಾರುಗಳು ಕನಿಷ್ಠ ೩೨೦ ಕಿಮೀ ಓಡುತ್ತವೆ. ಈ ಕಾರುಗಳ ಬ್ಯಾಟರಿಗಳನ್ನು ರಿಚಾರ್ಜ್ ಮಾಡುವುದಕ್ಕೆ ಅಮೆರಿಕಾವೂ ಸೇರಿದಂತೆ ವಿಶ್ವದ ಎಲ್ಲೆಡೆ ಇಂಥ `ಸೂಪರ್ ಚಾರ್ಜರ್’ ಕೇಂದ್ರಗಳನ್ನು ಸ್ಥಾಪಿಸಲು ಇಲಾನ್ ಮಸ್ಕ್ ತಂಡ ಸಿದ್ಧತೆ ನಡೆಸಿದೆ. ಮಾಡೆಲ್ ಎಸ್ ಕಾರು ಒಂದೇ ಸಲಕ್ಕೆ ೪೮೦ ಕಿಮೀ ಓಡುತ್ತದೆ. ಇದರಲ್ಲಿ ಏಳು ಜನ ಕುಳಿತುಕೊಳ್ಳಬಹುದು. ಇದರಲ್ಲಿ ಇರುವ ಬಿಡಿಭಾಗಗಳ ಸಂಖ್ಯೆ ೧೨ ದಾಟುವುದಿಲ್ಲ.

ವಿಮಾನದ ವೇಗ ಮೀರಿದರೂ ಅತಿ ಅಗ್ಗ!

ಹೈಪರ್‌ಲೂಪ್ ಎಂಬ ಅತಿವೇಗದ ವಾಹನ ವ್ಯವಸ್ಥೆಯೂ ಇದೇ ರೀತಿ ಕ್ರಾಂತಿಕಾರಕ. ಇದು ಸುರಕ್ಷಿತ; ಶೀಘ್ರಾತಿಶೀಘ್ರ; ಕಡಿಮೆ ಖರ್ಚು; ಹೆಚ್ಚು ಅನುಕೂಲಕರ; ಗಾಳಿ-ಮಳೆ-ಬಿಸಿಲಿನಿಂದ ರಕ್ಷಣೆ; ಸ್ವಯಂ ಇಂಧನ ತಯಾರಿಕೆಯ ವ್ಯವಸ್ಥೆ; ಭೂಕಂಪ ನಿರೋಧಕ ವ್ಯವಸ್ಥೆ.

elon musk 6

ಗಂಟೆಗೆ ೪೮೩ ಕಿಮೀನಿಂದ ಹಿಡಿದು ೧೨೨೦ ಕಿಮೀ ವೇಗವನ್ನೂ ತಲುಪುವ ಹೈಪರ್‌ಲೂಪ್ ಕ್ಯಾಪ್ಸೂಲ್ ಅತಿ ವಿರಳ ಗಾಳಿ ಇರುವ (ಬಹುತೇಕ ನಿರ್ವಾತ ಎಂದೇ ಕರೆಯಬಹುದಾದ) ಕೊಳವೆಯೊಳಗೆ ಜಾರಿದಂತೆ ಸಾಗುತ್ತದೆ. ಈ ಕೊಳವೆಯ ಕವಚದಲ್ಲೇ ಸೌರಶಕ್ತಿಯಿಂದ ವಿದ್ಯುತ್ ಉತ್ಪಾದನೆ; ಇದು ಬಳಕೆಯ ಅಗತ್ಯಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಎನ್ನುತ್ತಾರೆ ಮಸ್ಕ್.

ಈ ಕ್ಯಾಪ್ಸೂಲ್ ಗಾತ್ರವೇ ಚಿಕ್ಕದು: ೪.೪೩ ಅಡಿ ಅಗಲ, ೩.೬೧ ಅಡಿ ಎತ್ತರ. ಕೊಳವೆಯು ಉಕ್ಕಿನದು; ಆದ್ದರಿಂದ ಕಿಟಕಿಗಳು ಇರುವುದಿಲ್ಲ. ಪ್ರಯಾಣಿಕರು ತಮಗೆ ಬೇಕಾದ ಚಿತ್ರಗಳನ್ನು ನೋಡಿಕೊಳ್ಳುವ ವ್ಯವಸ್ಥೆ ಇರುತ್ತದೆ. ಈ ಕ್ಯಾಪ್ಸೂಲ್‌ಗಳನ್ನು ಏಳೂವರೆ ಅಡಿ ವ್ಯಾಸದ ಉಕ್ಕಿನ ಕೊಳವೆಯಲ್ಲಿ ತೂರಿಸುತ್ತಾರೆ. ಈ ಕೊಳವೆಯನ್ನು ನೆಲದಿಂದ ೨೦ ಅಡಿಗಳ ಮೇಲೆ (ಮೆಟ್ರೋ ಮಾದರಿಯಲ್ಲಿ) ಕಾಂಕ್ರೀಟ್ ಸ್ತಂಭಗಳ ಮೇಲೆ ಕೂರಿಸುತ್ತಾರೆ. ಒಂದು ಮಾರ್ಗದಲ್ಲಿ ಎರಡು ಕೊಳವೆಗಳಿರುತ್ತವೆ; ಆದ್ದರಿಂದ ದ್ವಿಮುಖ ಪ್ರಯಾಣ ಸಾಧ್ಯ. ಗಂಟೆಗೆ ಒಟ್ಟು ೮೪೦ ಪ್ರಯಾಣಿಕರು ಓಡಾಡುತ್ತಾರೆ; ಅಂದರೆ ವರ್ಷಕ್ಕೆ ೬೦ ಲಕ್ಷ ಪ್ರಯಾಣಿಕರನ್ನು ಈ ಹೈಪರ್‌ಲೂಪ್ (ಲಾಸ್ ಏಂಜಲಿಸ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ನಡುವೆ) ಸಾಗಿಸುತ್ತದೆ!

ಒಟ್ಟು ೯೦೦ ಕೋಟಿ ಡಾಲರ್ ವೆಚ್ಚದಲ್ಲಿ ಈ ವ್ಯವಸ್ಥೆಯನ್ನು ಸ್ಥಾಪಿಸಬಹುದು. ಇದನ್ನು ೬೮೪೦ ಕೋಟಿ ಡಾಲರ್ ವೆಚ್ಚದ ಹೈಸ್ಪೀಡ್ ರೈಲಿಗೆ ಹೋಲಿಸಿದರೆ? ವ್ಯತ್ಯಾಸ ಸ್ಪಷ್ಟ. ಒಂದು ದಿಕ್ಕಿನಲ್ಲಿ ಪ್ರಯಾಣಿಸಲು ಟಿಕೆಟ್ ಬೆಲೆ ಕೇವಲ ೨೦ ಡಾಲರ್. ಭಾರತದ ಲೆಕ್ಕದಲ್ಲಿ ಇದೇ ವೆಚ್ಚದಲ್ಲಿ ೩೫ ನಿಮಿಷಗಳಲ್ಲಿ ಬೆಂಗಳೂರಿನಿಂದ ಯಾದಗಿರಿಗೆ ೧೨೦೦ ರೂ. ವೆಚ್ಚದಲ್ಲಿ ಹೋಗಬಹುದು. ಈಗ ಬಸ್ಸಿನಲ್ಲಿ ಯಾದಗಿರಿಗೆ ಹೋಗಲು ಕನಿಷ್ಠ ೮ ಗಂಟೆ ಬೇಕು.

ಟೆಸ್ಲಾ ಹೋಮ್ ಬ್ಯಾಟರಿ (ಮನೆ ಬ್ಯಾಟರಿ) ಕೂಡಾ ಇಲಾನ್ ಮಸ್ಕ್‌ರ ಇನ್ನೊಂದು ಮಹತ್ವದ ಉತ್ಪನ್ನವೇ. ೩೫೦೦ ಡಾಲರ್ (೨.೧೦ ಲಕ್ಷ ರೂ) ಬೆಲೆಯ ಈ ಬ್ಯಾಟರಿಯಲ್ಲಿ ಒಮ್ಮೆ ೧೦ ಕಿಲೋವಾಟ್ ಅವರ್‌ನಷ್ಟು ವಿದ್ಯುತ್ ಸಂಗ್ರಹಿಸಿ ಇಡಬಹುದು. ಅಂದರೆ ಒಂದು ಮನೆಯಲ್ಲಿ ಈ ಕೋಶವು ಹಲವು ಗಂಟೆಗಳ ಕಾಲ ಕಾರ್ಯಾಚರಿಸುತ್ತದೆ. ಇಂಥ ೧೬ ಕೋಟಿ ಕೋಶಗಳಿಂದ ಇಡೀ ಅಮೆರಿಕಾದ, ಇಂಥ ೯೦ ಕೋಟಿ ಕೋಶಗಳಿಂದ ಇಡೀ ಪ್ರಪಂಚದ ವಿದ್ಯುತ್ ಅಗತ್ಯವನ್ನು ಪೂರೈಸಬಹುದು ಎಂಬುದು ಮಸ್ಕ್‌ರ ಸರಳ ಲೆಕ್ಕ. ೨೦೦ ಕೋಟಿ ಕೋಶಗಳನ್ನು ತಯಾರಿಸಿದರೆ ವಿಶ್ವದ ಎಲ್ಲ ಸಾರಿಗೆಯನ್ನೂ ಇದರಲ್ಲೇ ನಡೆಸಬಹುದು. ಇಂಥ ಉತ್ಪಾದನೆಗಾಗಿಯೇ ಅವರು `ಗಿಗಾಫ್ಯಾಕ್ಟರಿ’ ವಿನ್ಯಾಸವನ್ನು ರೂಪಿಸಿದ್ದಾರೆ.

elon musk 7

ವಾರಕ್ಕೆ ೧೦೦ ಗಂಟೆ ಕೆಲಸ

ಇಷ್ಟಾಗಿ ಇಲಾನ್ ಮಸ್ಕ್ ಜೊತೆ ಕೆಲಸ ಮಾಡುವುದು ಎಂದರೆ ವಾರಕ್ಕೆ ಕೇವಲ ೮೦ ಗಂಟೆಗಳ ದುಡಿತ! ವಾರಕ್ಕೆ ೧೦೦ ಗಂಟೆ ದುಡಿಯುವ ವ್ಯಕ್ತಿಯಿಂದ ಇನ್ನೇನು ಅಪೇಕ್ಷಿಸಲು ಸಾಧ್ಯ? `ನಾನು ಕೆಲಸ ಮಾಡಿದ ಸಿರಿವಂತರ ಪೈಕಿ ಅತ್ಯಂತ ತಳಮಟ್ಟದ ಕೋಟ್ಯಧಿಪತಿ ಇಲಾನ್ ಮಸ್ಕ್’ ಎಂದು ಮಾಜಿ ಉದ್ಯೋಗಿಯೊಬ್ಬ ಹೇಳುತ್ತಾರಂತೆ.

elon musk 10

ಒಮ್ಮೆ ಹೀಗಾಯ್ತು: ಮಸ್ಕ್ ಕಚೇರಿಯಲ್ಲಿ ಮೇರಿ ಬೆಥ್ ಬ್ರೌನ್ ಎಂಬಾಕೆ ಕೆಲಸ ಮಾಡುತ್ತಿದ್ದರು. ಸುಮಾರು ಹತ್ತು ವರ್ಷಗಳ ಕಾಲ ಆಕೆ ಮಸ್ಕ್‌ಗೆ ಸಹಾಯಕಳಾಗಿ ದಿನ-ಗಂಟೆಗಳ ಲೆಕ್ಕವಿಲ್ಲದೆ ದುಡಿದರು. ತನಗೂ ಸ್ಪೇಸ್ ಎಕ್ಸ್ ಸಂಸ್ಥೆಯ ಅಧಿಕಾರಿಗಳ ಹಿರಿತನ ಕೊಡಿ ಎಂದಾಕೆ ಕೇಳಿದರಂತೆ. ಆಗ ಮಸ್ಕ್ `ಹಾಗಾದ್ರೆ ನೀನು ಎರಡು ವಾರ ರಜೆ ತಗೋ. ನಿನ್ನ ಕೆಲಸ ಎಷ್ಟು ಒತ್ತಡದ್ದು ಎಂದು ನಾನೇ ಪ್ರಯೋಗ ಮಾಡಿ ನೋಡ್ತೇನೆ’ ಎಂದರಂತೆ. ಅದಾಗಿ ಮೇರಿ ವಾಪಸು ಬಂದಾಗ `ನನಗೆ ನಿನ್ನ ಅಗತ್ಯ ಇಲ್ಲ’ ಎಂದುಬಿಟ್ಟರಂತೆ!

ಇಲಾನ್ ಮಸ್ಕ್ ತಲೆಗೆ ಪ್ರಸಿದ್ಧಿಯ ಪಿತ್ಥ ಏರಿಲ್ಲ ಎನ್ನುವುದಕ್ಕೆ ಅವರು ನೀಡುತ್ತ ಬಂದಿರುವ ಸಂದರ್ಶನಗಳೇ ಸಾಕ್ಷಿ. ಅವುಗಳಲ್ಲಿ ಮಸ್ಕ್ ಹೇಳುವ ವಿಚಾರಗಳಲ್ಲಿ ಹೆಚ್ಚಿನ ಬದಲಾವಣೆಯಾಗಲೀ, ವಿಶೇಷವಾಗಲೀ ಇರುವುದಿಲ್ಲ. ತನ್ನ ಕನಸುಗಳನ್ನು, ಮಾಡಿದ ಸಾಧನೆಗಳನ್ನು ಮಾತ್ರ ಮಸ್ಕ್ ವಿವರಿಸುತ್ತಾರೆ. ಒಮ್ಮೆ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಟೆಸ್ಲಾ ಸಂಸ್ಥೆಯ ಮಾಡೆಲ್ ಎಸ್ ಕಾರಿನ ಬಗ್ಗೆ ಅತಿಕೆಟ್ಟ ವಿಮರ್ಶೆ ಬಂದಿತ್ತು. ಮಸ್ಕ್ ತೆಪ್ಪಗೆ ಕೂರಲಿಲ್ಲ. ಅಂಕಿ ಅಂಶಗಳೊಂದಿಗೆ ತನ್ನ ವಾದ ಮಂಡಿಸಿ ಈ ಲೇಖನವೇ `ಫೇಕ್’ (ನಕಲಿ) ಎಂದು ಕರೆದರು.

elon musk 9

ನಿಮಗೆ ಹಾಲಿವುಡ್‌ನ `ಐರನ್ ಮ್ಯಾನ್’ ಸಿನೆಮಾ ಗೊತ್ತಿರಬಹುದು. ಇದರಲ್ಲಿ ಇರುವ ಕೋಟ್ಯಧೀಶ್ವರ ವಿಜ್ಞಾನಿ ಟೋನಿ ಸ್ಟಾರ್ಕ್ ಪಾತ್ರಕ್ಕೆ ಇಲಾನ್ ಮಸ್ಕ್‌ರ ಜೀವನವೇ ಸ್ಫೂರ್ತಿ ಎಂದು ಆ ಸಿನೆಮಾದ ನಿರ್ದೇಶಕ ಜಾನ್ ಫಾವ್‌ರೂ ಹೇಳಿದ್ದಾರೆ. ಈ ಸಿನೆಮಾದ ಎರಡನೇ ಭಾಗವನ್ನು ಸ್ಪೇಸ್‌ಎಕ್ಸ್ ಕಾರ್ಖಾನೆಯಲ್ಲೇ ಚಿತ್ರೀಕರಿಸಲಾಯಿತು. ಇದರಲ್ಲಿ ಇಲಾನ್ ಮಸ್ಕ್‌ರನ್ನೂ ಕಾಣಬಹುದು.

`ನಿಮಗೆ ಯಾವುದೋ ವಿಷಯವು ತುಂಬಾ ಮುಖ್ಯ ಎಂದು ಅನ್ನಿಸಿದರೆ, ಅಷ್ಟೇ ಸಾಕು; ನಿಮ್ಮ ವಿರುದ್ಧ ಎಂಥದ್ದೇ ವಿರೋಧ ಇರಲಿ, ನೀವು ಅದನ್ನು ಮಾಡಲೇಬೇಕು’ – ಇದು ಇಲಾನ್ ಮಸ್ಕ್ ಘೋಷವಾಕ್ಯ. ಈ ನೀತಿಯೇ ಅವರನ್ನು ಕ್ರಾಂತಿಕಾರಕ ಅನ್ವೇಷಣೆಗಳ, ವಾಸ್ತವವಾಗಬಹುದಾದ ಮಹಾನ್ ಕನಸುಗಳ ಅಂಚಿಗೆ ತಂದು ನಿಲ್ಲಿಸಿದೆ. ಮುಂದೊಂದು ದಿನ ನೀವೆಲ್ಲರೂ ಸಂಪೂರ್ಣ ಉಚಿತವಾಗಿ, ಸದಾಕಾಲವೂ ಸೌರಶಕ್ತಿಯಿಂದ ಪ್ರಯಾಣ ಬೆಳೆಸಬಹುದು’ ಎಂಬ ಭರವಸೆಯನ್ನೂ ಇಲಾನ್ ಮಸ್ಕ್ ನೀಡಿದ್ದಾರೆ.

elon musk 8

ಇಲಾನ್ ಮಸ್ಕ್ ಎಂದರೆ ಜೀವನೋತ್ಸಾಹದ ಬಹುದೊಡ್ಡ ಚಿಲುಮೆ; ಈ ಭೂಮಿ ಕಂಡ ದೈತ್ಯ ವಿಜ್ಞಾನಿ ಹೂಡಿಕೆದಾರ.

ಇಲಾನ್ ಮಸ್ಕ್ ಬಗ್ಗೆ ಇನ್ನೂ ಹೆಚ್ಚು ಮಾಹಿತಿ:

(ಉತ್ಥಾನ, ೨೦೧೫ ಆಗಸ್ಟ್‌ ಸಂಚಿಕೆಯಲ್ಲಿ ಪ್ರಕಟಿತ)