ತುಂಟ ಸಿದ್ಧಾರ್ಥ: 2ನೇ ಕ್ಲಾಸಲ್ಲಿ ಕಲಾವಿದ, ಎಸೆಸೆಲ್ಸೀಲಿ ವಿಜ್ಞಾನಿ!

ಜೀವನದಲ್ಲಿ ನನಗೆ ಸಿಕ್ಕಿದ ಕೆಲವೇ ಅತ್ಯಂತ ಉತ್ತಮ ಮಿತ್ರರಲ್ಲಿ ಒಬ್ಬ- ನಾಡಿನ ಪ್ರಮುಖ ಕಲಾವಿದ ಬಿ. ದೇವರಾಜ್‌ (ಊರು: ಚನ್ನೇನಹಳ್ಳಿ ). ಅವನ ಮಗ ಸಿದ್ಧಾರ್ಥನು ಎರಡನೆಯ ತರಗತಿಯಲ್ಲಿ ಇದ್ದಾಗಲೇ ಅತ್ಯುತ್ತಮ ಕಲಾವಿದನಾಗಿದ್ದ. ಗೋಡೆಯ ಮೇಲೆ ಬರೆಯುವುದರಿಂದ ಹಿಡಿದು, ಕ್ಯಾನ್‌ವಾಸ್‌ ಮೇಲೆ ತನ್ನದೇ ಆದ ಬಣ್ಣದ ಸಂಯೋಜನೆಗಳನ್ನು ಮಾಡುವುದರಲ್ಲಿ ಪರಿಣತನಾಗಿದ್ದ. ಅದು 2010 ರ ದಿನಗಳು. ಆಗಲೇ ತನ್ನ ಕಲೆಯಲ್ಲೂ ವಿಜ್ಞಾನದ ಕೌತುಕಗಳನ್ನು ಬಿಂಬಿಸಲು ಯತ್ನಿಸುತ್ತಿದ್ದ. ಅವನ ಶಾಲೆಯಲ್ಲಿ ಏಕವ್ಯಕ್ತಿ ಕಲಾಪ್ರದರ್ಶನವೂ ನಡೆದಿತ್ತು! ಆಗ ನಾನು ಒಂದು ಪುಟ್ಟ ಬ್ಲಾಗ್‌ ಬರೆದಿದ್ದೆ (https://beluru.com/?p=2705)

ಈಗ ಕೆಲವು ವರ್ಷಗಳಿಂದ ಅವನ ಮನೆಯಲ್ಲಿ ಅವನದೇ ಒಂದು ಲ್ಯಾಬೋರೇಟರಿ ಮಾಡಿಕೊಂಡು ವಿಜ್ಞಾನದ ಹಲವು ಪ್ರಯೋಗಗಳನ್ನು ಮಾಡುತ್ತಾನೆ. ಅವನ ವಿಜ್ಞಾನ ಪ್ರಯೋಗಗಳ ಕಂಪನಿ ಹೆಸರು ಯಂಗ್‌ ಟೆಕ್‌ ಸೈಂಟಿಸ್ಟ್! (YTS). ಥೇಟ್‌ ವಿಜ್ಞಾನಿಯ ಪ್ರಯೋಗಾಲಯದಂತೇ ಶಿಸ್ತು! ಅವನಿಗೆ ಬೇಕಾದ ವಸ್ತುಗಳೆಲ್ಲ ಅವನಿಗೆ ಸಿಗುವ ಹಾಗೆ ಇವೆ. ನಮ್ಮಂತಹ ಜನ ನೋಡಿದರೆ ಏನಪ್ಪಾ ಇದು ಎಂದು ಗಾಬರಿಯಾಗುತ್ತದೆ. ದ್ರವ, ಘನ ವಸ್ತುಗಳು, ಹಳೆ ಬ್ಯಾಟರಿ, ವೈರುಗಳು, ಅಂಟು, ಟೇಪು, ಕತ್ತರಿ, ಡ್ರಿಲ್ಲರ್‌, ನೈಫ್‌, – ಒಂದೇ ಎರಡೇ? ನೂರಾರು ಹೊಸ, ಹಳೆಯ ವಸ್ತುಗಳು ಅಲ್ಲಿ ಪ್ರಯೋಗದ ಬಳಕೆಗಾಗಿ ಕಾದಿವೆ!

ಸಿದ್ಧಾರ್ಥ ಈಗ ಯೂಟ್ಯೂಬ್‌ ಮೂಲಕ ತನ್ನೆಲ್ಲ ಪ್ರಯೋಗಗಳನ್ನು ಎಲ್ಲರಿಗೂ ತಿಳಿಸುತ್ತಿದ್ದಾನೆ. ಈ ವಿಡಿಯೋಗಳನ್ನು ಅವನೇ ಅಪ್ಪನ ಕ್ಯಾಮೆರಾ ಬಳಸಿ ಶೂಟ್‌ ಮಾಡಿ, ತಾನೇ ಎಡಿಟ್‌ ಮಾಡಿ, ಸಂಗೀತ ಹಾಕಿದ್ದಾನೆ. ಅವನ್ನು ನೋಡಿದಾಗ, ನನಗೆ ಥಟ್‌ ಅಂತ ನೆನಪಾಗಿದ್ದು ಡೇವ್‌ ಹಕ್ಕೆನ್‌ ಎಂಬ ಇಂಥದ್ದೇ ಯುವ ವಿಜ್ಞಾನಿಯ ವಿಡಿಯೋಗಳು. ವಿಜ್ಞಾನದ ಪ್ರಯೋಗಗಳನ್ನು ಹೇಗೆ ತಮಾಶೆ, ಕೌತುಕ, ಎಡವಟ್ಟು, ಫಜೀತಿ – ಎಲ್ಲ ಸಹಜ ಅಂಶಗಳನ್ನೂ ತೋರಿಸುತ್ತಲೇ ವಿವರಿಸಬಹುದು ಎಂದು ಸಿದ್ಧಾರ್ಥ ತೋರಿಸಿಕೊಟ್ಟಿದ್ದಾನೆ. ಅವನ ತಮಾಶೆಯ / ತುಂಟತನದ ಡೈಲಾಗ್‌ಗಳಂತೂ ನಿಮ್ಮನ್ನು ನಗಿಸದೆ ಬಿಡುವುದಿಲ್ಲ. ಈ ವಿಡಿಯೋಗಳಲ್ಲಿ ನೀವು ಅವನ ಪ್ರಯೋಗಶೀಲತೆಯನ್ನು ವಿಜ್ಞಾನದ ಪ್ರಯೋಗಗಳಲ್ಲಿ ಮಾತ್ರವಲ್ಲ, ಕ್ಯಾಮೆರಾ ಬಳಕೆಯಲ್ಲೂ, ವಿಡಿಯೋ ಎಡಿಟಿಂಗ್‌ನಲ್ಲೂ ಕಾಣಬಹುದು.

ಸಿದ್ಧಾರ್ಥನ ಯೂಟ್ಯೂಬ್‌ ಚಾಣೆಲ್‌ ಇಲ್ಲಿದೆ: https://www.youtube.com/channel/UCEDPXVtba87p0Fxw_XBUixA

ಸ್ಟೀಮ್‌ ಇಂಜಿನ್‌ ಮಾಡುವ ವಿಡಿಯೋ ನೋಡಿದರೆ ಸಾಕು, ಸಿದ್ಧಾರ್ಥನ ಕರಕುಶಲತೆ ಏನು ಎಂಬ ಅರಿವಾಗುತ್ತದೆ. ಮನೆಯಲ್ಲೇ ಮಾಡಬಹುದಾದ ಏರ್‌ ಕಂಡೀಶನರ್‌, ಕ್ಯಾಮೆರಾ ಗ್ರಿಪ್‌ ಸ್ಟಬಿಲೈಸರ್‌, ಕಂಪ್ರೆಸ್ಡ್‌ ಏರ್‌ ಕ್ಯಾನಾನ್‌, ಡ್ರೈ ಐಸ್‌ ಹಬೆ, ಉಕ್ಕಿನ ಫೋರ್ಜಿಂಗ್‌, – ಹೀಗೆ ಎಲ್ಲ ವಿಡಿಯೋಗಳಲ್ಲೂ ಸಿದ್ಧಾರ್ಥನ ವಿಜ್ಞಾನ ಪ್ರಯೋಗಗಳ ದಕ್ಷತೆಯನ್ನು ಕಾಣಬಹುದು.

ಬೆಂಗಳೂರಿನಲ್ಲಿ ಇಂಥ ಎಲ್ಲ ಪ್ರಯೋಗಗಳೂ ರೆಡಿಮೇಡ್ ಆಗುತ್ತಿರುವಾಗ, ಬೆಂಗಳೂರಿನ ಹುಡುಗರಲ್ಲಿ ಇಂಥ ಪ್ರಯೋಗಶೀಲತೆಯ ಮನಸ್ಸುಗಳು ಸಿಗುವುದು ಕಷ್ಟ. ಕನ್ನಡ – ಇಂಗ್ಲಿಶ್‌ ಎರಡೂ ಭಾಷೆಗಳಲ್ಲಿ ಸ್ಪಷ್ಟವಾಗಿ ಮಾತನಾಡಲು ಬರುವ ಕೆಲವೇ ಬೆಂಗಳೂರು ಹುಡುಗರಲ್ಲಿ ಇವನು ಎಂದೇ ನನಗನ್ನಿಸಿದೆ.

ಇಲ್ಲಿನ ವಿಡಿಯೋಗಳನ್ನು ನೀವು ಸೂಕ್ಷ್ಮವಾಗಿ ಗಮನಿಸಿದರೆ ಸಿದ್ಧಾರ್ಥ ಹೇಗೆ ಒರಿಜಿನಲ್‌ ಪ್ರಯೋಗಶೀಲ ಎಂಬ ಅರಿವಾಗುತ್ತದೆ. ತನ್ನ ಲ್ಯಾಬ್‌ ಅಲ್ಲದೆ ಅಡುಗೆಮನೆ, ಹಾಲ್‌, ಅಂಗಳ – ಎಲ್ಲವನ್ನೂ ಬಳಸಿಕೊಂಡಿದ್ದಾನೆ. ಕೆಲವು ಐಡಿಯಾಗಳು ವಿಫಲವಾದ ಬಗ್ಗೆ ತನ್ನನ್ನು ತಾನೇ ಬೈದುಕೊಂಡಿದ್ದಾನೆ; ಕೆಲವು ಪ್ರಯೋಗಗಳಲ್ಲಿ ಸ್ನೇಹಿತರನ್ನೂ ಸೇರಿಸಿಕೊಂಡಿದ್ದಾನೆ.

ಸೃಜನಶೀಲ ಕಲಾವಿದ ದಂಪತಿಯ ಮಗನಾಗಿ ಸಿದ್ಧಾರ್ಥ ಕಲಾವಿದನ ಮನಸ್ಸನ್ನು ವಿಜ್ಞಾನ ಪ್ರಯೋಗಗಳಲ್ಲಿ ಹೂಡಿದ್ದಾನೆ. ಸದ್ಯ ಎಸೆಸೆಲ್ಸಿ ಪರೀಕ್ಷೆ ಇರುವುದರಿಂದ ಪ್ರಯೋಗಗಳು ಕಡಿಮೆ ಎಂದು ನನಗೆ ತಿಳಿಸಿದ.

ಈ ಪೋಸ್ಟ್‌ ಓದುತ್ತಿರುವ ಶಾಲಾ ಶಿಕ್ಷಕರು ಮುಖ್ಯವಾಗಿ ಈ ವಿಡಿಯೋಗಳನ್ನು ನೋಡಲಿ ಎಂಬುದು ನನ್ನ ಆಸೆ. ವಿಜ್ಞಾನ ಸಂವಹನಕಾರರೂ ಸಿದ್ಧಾರ್ಥನ ಕುಶಲತೆಯನ್ನು ಗಮನಿಸಿದರೆ ಒಳ್ಳೆಯದು. ಇಂಥ ಪ್ರಯೋಗಶೀಲತೆಯೇ ಮಕ್ಕಳಲ್ಲಿ ಕಡಿಮೆಯಾಗುತ್ತಿದೆ. ವೈಜ್ಞಾನಿಕ ಮನಸ್ಸಿದ್ದರೆ ಹಳೆ ವಸ್ತುಗಳಿಂದಲೇ ಹಲವಾರು ಪ್ರಯೋಗಗಳನ್ನು ಮಾಡಬಹುದು.

ಮಾಹಿತಿ: ಸಿದ್ಧಾರ್ಥನ ಮನೆಯಲ್ಲಿ ಟಿವಿ ಇಲ್ಲ.

ಗಮನಿಸಿ: ಸಿದ್ಧಾರ್ಥ ಮಾಡಿದಂತಹದೇ ಪ್ರಯೋಗಗಳನ್ನು ಯೂಟ್ಯೂಬ್‌ನಲ್ಲಿ ನೀವು ನೋಡಬಹುದು. ಆದರೆ ಇವನ ಹಾಗೆ ಬಾಲ್ಯದಿಂದಲೇ ವಿಜ್ಞಾನದ ಹುಚ್ಚು ಬೆಳೆಸಿಕೊಂಡು, ಹದಿನೈದರ ಹರೆಯದಲ್ಲಿ ಈ ಪ್ರಯೋಗಗಳನ್ನು ಮಾಡಿದವರು, ಅದರಲ್ಲೂ ಭಾರತೀಯರು ನನಗೆ ಈವರೆಗೆ ಸಿಗಲಿಲ್ಲ. ಇದ್ದರೆ ತುಂಬಾ ಸಂತೋಷ!

ಸಿದ್ಧಾರ್ಥನ ಯೂಟ್ಯೂಬ್‌ ಚಾಣೆಲ್‌ ಇಲ್ಲಿದೆ: https://www.youtube.com/channel/UCEDPXVtba87p0Fxw_XBUixA

 

ದೇವರಾಜ್‌ ಕುರಿತ ನನ್ನ ಫೇಸ್‌ಬುಕ್‌ ಪೋಸ್ಟ್‌: https://bit.ly/2QC5Veg

ದೇವರಾಜ್‌ ಕುರಿತ ನನ್ನ ಒಂದು ಲೇಖನ : https://beluru.com/?p=2404