ಊಹೆಗಳು

ಕಾನು ಕತ್ತಲು ಬತ್ತಿ, ಧಗೆಯ ಬಿಗಿ ಹಗುರಾಗಿ,
ಹೊಗೆ ಮಂಜು ಹರಡುತ್ತ ; ನೆತ್ತಿಯ
ಪಕ್ಕ ಎದ್ದಿರುವ ಬೆಳ್ಳಿ ಚುಕ್ಕೆ ; ನೋಡುವಳು ಅವಳು ಹೊರಗೆ
ಕಟ್ಟೆಯ ಮೇಲೆ ಕೂಡುವಳು ಹೂವ ಕಡೆಗೆ

ಚಿಗುರು ನಾಚಿಕೆಯಲ್ಲಿ ಅರಳುತ್ತ, ಯೌವ್ವನದಲ್ಲಿ
ನರಳುತ್ತ ; ಎಲೆಯ ತುಟಿ ತುದಿಯಲ್ಲಿ
ಹನಿ. ಹನಿಯ ಮೌನದ ಬಗ್ಗೆ ಹಾಡುತ್ತ ಅಲ್ಲಿ
ಅಂಗಳದಲ್ಲಿ ; ನಡೆಯುತ್ತ ನೆನಪಿನಲ್ಲಿ

ಅವಳು ಕಾಯುವಳೇನೋ..ನೆನಪೊಳಗೆ
ನನ್ನ ಮುತ್ತಿನ ಹೊತ್ತು ಬರುವುದನ್ನ.
ಬಳೆ ಸರಿಸಿ ಬೆರಳುಗಳ ಮೇಳವಿಸಿ ತನ್ನ
ಹಿಂಗೈ ಮೇಲೆ ತುಟಿಯೊತ್ತಿ ತುಡಿವುದನ್ನ.

ದಾರಿಗಳ ದೂರ ಹೇಳಿದರೆ ಜಾರುವಳು ಎದೆಯೊಳಗೆ
ನಡುಗುವಳು ಛಳಿ ಹಿಡಿದ ನಕ್ಷತ್ರದಂತೆ.
ಈ ಬಾರಿ ಮತ್ತೆ ಹೇಳಿದಳು “ ಕಾಗದದೊಳಗೆ
ಸುಡುಮುತ್ತು ಇಡಬೇಡ ಗೆಳೆಯಾ, ನಿನ್ನೆಯಂತೆ.

ಎದೆಯೆದೆಯ ಏರುತಗ್ಗುಗಳ ತಟ್ಟುತ್ತ
ತುದಿಮೂಗು ಮೂಸುತ್ತ, ಕಟಿ ತುಟಿಯ ಮುಟ್ಟುತ್ತ
ಕೊಟ್ಟ ಮುತ್ತಿನ ಒಳಗೆ ನೋಡಿದಳೇನೋ ಗೊತ್ತಿಲ್ಲ,
ನಾನು ಮೀಟಿದ ಭಾವ ಯಾವುದೆಂದು

ತಾನು ಬದುಕಿದ ಝಾವ ಯಾವುದೆಂದು……

Leave a Reply

Your email address will not be published. Required fields are marked *

one × 1 =

This site uses Akismet to reduce spam. Learn how your comment data is processed.