ಹಲ್ಕಟ್‌ಗಿರಿ ಸ್ಟೋರಿಗೆ ಹೈದರ್‍ರೇ ಯೋಗ್ಯ!

ಜಮ್ಮು ಮತ್ತು ಕಾಶ್ಮೀರ ಭಾರತಕ್ಕೆ ಸೇರಿದ್ದೋ, ಪಾಕಿಸ್ತಾನಕ್ಕೆ ಸೇರಿದ್ದೋ ಅಥವಾ ಸ್ವತಂತ್ರ ದೇಶವೋ?

`ಇಂತೆಖಾಮ್‌ನಿಂದ ಇಂತೆಖಾಮ್’ ಎಂದರೆ ಅದು ನಿಮ್ಮ ಚಿಕ್ಕಪ್ಪನ ಮೇಲೋ, ಸರ್ಕಾರದ ಮೇಲೋ?

ಶೇಕ್ಸ್‌ಪಿಯರ್‌ನ ನಾಟಕಕ್ಕೂ, ಭಾರತ ವಿರೋಧಿ ಚಟುವಟಿಕೆಗಳಿಗೂ ಏನು ಸಂಬಂಧ?

ಸೃಜನಶೀಲತೆ ಎಂದರೆ ವಸ್ತುನಿಷ್ಠವಾಗಿರುವುದೋ, ವ್ಯಕ್ತಿನಿಷ್ಠವಾಗಿರುವುದೋ?ಅಥವಾ ಸಮಾಜನಿಷ್ಠವಾಗಿರುವುದೋ? ಅಥವಾ ಕೇವಲ ಬಾಲಿವುಡ್ ನಿಷ್ಠ – ಮಾಲ್ ನಿಷ್ಠವಾಗಿರುವುದೋ?

ಭಾರತದ ಸೇನೆ ಎಂದರೆ ಕೇವಲ ಮರ್ಮಾಂಗಕ್ಕೆ ಕರೆಂಟ್ ಕೊಡುವ, ಮನೆಗಳನ್ನು ಉಡಾಯಿಸುವ ಪುಂಡರ ಪಡೆಯೋ?

ಹೀಗೆ ನನ್ನಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟಿಸಿದ್ದು ಮೊನ್ನೆ ನೋಡಿದ `ಹೈದರ್’ ಸಿನೆಮಾ. ಮಹಾನಗರಗಳ ಯಾವುದೋ ಮಾಲ್‌ನಲ್ಲಿ ಪಾಪ್‌ಕಾರ್ನ್ ಮುಕ್ಕುತ್ತ, ಪೆಪ್ಸಿ – ಕೋಲಾ ಹೀರುತ್ತ ನೋಡುವ ಸಾವಿರಾರು ಯುವ ಮನಸ್ಸುಗಳ ಮೇಲೆ ಭಾರತ ಎಂದರೆ ಕಂಡಕಂಡಲ್ಲಿ ಮುಸ್ಲಿಮರನ್ನು ಅಟ್ಟಾಡಿಸಿಕೊಂಡು ಹೊಡೆಯುವ ಪುಂಡರ ಪಡೆ ಎಂದೇ ಚಿತ್ರಿಸಿದ `ಹೈದರ್’ ಸಿನೆಮಾವನ್ನು ಈಗಾಗಲೇ ಹಲವು ಮಾಧ್ಯಮಗಳು ಬಾಲಿವುಡ್ ಕಂಡ ಅತ್ಯಂತ ದಿಟ್ಟ ಸಿನೆಮಾ ಎಂದು ಬಣ್ಣಿಸಿವೆ. ವಿಶಾಲ್ ಭಾರದ್ವಾಜ್ ಎಂಥ ಸೃಜನಶೀಲ ನಿರ್ದೇಶಕ ಎಂದು ಬಹುತೇಕ ಪತ್ರಿಕೆಗಳು ಬಣ್ಣಿಸಿವೆ. ಇಂಥ ಸಿನೆಮಾವನ್ನು ಪ್ರದರ್ಶನಕ್ಕೆ ಅನುಮೋದಿಸಿದ ಸೆನ್ಸಾರ್ ಮಂಡಳಿಗೂ ಭಯಂಕರ ಶ್ಲಾಘನೆ ದೊರಕಿದೆ.

ನನ್ನ ಮಟ್ಟಿಗೆ ಇದೊಂದು ಹಲ್ಕಟ್‌ಗಿರಿ ಸ್ಟೋರಿ. ಇದಕ್ಕೆ `ಹೈದರ್’ಗಿಂತ  ಬೇರೆ ಕಥಾನಾಯಕ, ವಿಶಾಲ್ ಭಾರದ್ವಾಜ್‌ಗಿಂತ ಬೇರೆ ನಿರ್ದೇಶಕ ಸಿಗಲಾರ. ಹಲವು ಕಮರ್ಶಿಯಲ್ ಪಾರ್ಟ್‌ನರ್‌ಗಳೂ ಸಿಕ್ಕಮೇಲೆ ಇಂಥ ಸಿನೆಮಾ ಮಾಡದೆ ಬಿಟ್ಟೀರ?

ಒಂದೆಡೆ ಜಮ್ಮು ಮತ್ತು ಕಾಶ್ಮೀರದ ೧೯೯೫ರ  ಸನ್ನಿವೇಶವೊಂದನ್ನು ಸೃಷ್ಟಿಸಿ, ಈ ಸೇನಾವಿರೋಧಿ ದೃಶ್ಯಗಳ ನಡುವೆಯೇ ಶೇಖ್ಸ್‌ಪಿಯರ್‌ನ `ಹ್ಯಾಮ್ಲೆಟ್’ ನ ಕಥಾಹಂದರವನ್ನು ತೂರಿಸಿದ ವಿಶಾಲ್‌ಗೆ ಎಡಬಿಡಂಗಿ ಎನ್ನಬೇಕೋ, ಕಮರ್ಶಿಯಲ್ ವಾಸನೆಯನ್ನು ಚೆನ್ನಾಗಿ ಹಿಡಿದ ಕಥೆಗಾರ ಎನ್ನಬೇಕೋ ತಿಳಿಯುತ್ತಿಲ್ಲ. ಮೊದಲು ಕಥೆ ಶುರುವಾಗುವುದೇ ಸೇನಾಪಡೆಗಳು ಹೇಗೆ ಮುಸ್ಲಿಂ ಭಯೋತ್ಪಾದನೆಯ ವಿರುದ್ಧ ಸಮರ ಸಾರುತ್ತ ಎಂಥ ಮುಗ್ಧ ಜೀವಿಗಳನ್ನು (ಸೇನಾ ಕಾವಲುಪಡೆಗೂ ಚಳ್ಳೆಹಣ್ಣು ತಿನ್ನಿಸಿ ಉಗ್ರಗಾಮಿಯೊಬ್ಬನನ್ನು ಸರ್ಜರಿಗಾಗಿ ಒಯ್ಯುವ ವೈದ್ಯನೇ ಇಲ್ಲಿ ಮುಗ್ಧ ಜೀವಿ!) `ನಾಪತ್ತೆ’ ಮಾಡುತ್ತವೆ ಎಂಬ ಕಥೆಯಿಂದ. ಈ ಮುಗ್ಧಜೀವಿ ವೈದ್ಯ ಸೆರೆಮನೆಯಲ್ಲಿ ಮಾತ್ರ ತನ್ನ ದುಸ್ಥಿತಿಗೆ ಕಾರಣನಾದ ತಮ್ಮನ ಮೇಲೆಯೇ ದ್ವೇಷ ಕಾರುತ್ತಾನೆ. ಏಕೆಂದರೆ ವೈದ್ಯನ ಪತ್ನಿ ಈ ತಮ್ಮ `ಖುರ್ರಂ’ನ ಜೊತೆ ಸಂಬಂಧ ಬೆಳೆಸುತ್ತಾಳೆ. ವೈದ್ಯನ ಮಗ `ಹೈದರ್’ ಭಾರತಕ್ಕೆ (ಅಥವಾ ವಿಶಾಲ್ ಭಾರದ್ವಾಜ್ ವಾದದ ಪ್ರಕಾರ ಅಜಾದೀಗಾಗಿ ಹಾತೊರೆಯುತ್ತಿರುವ ಕಾಶ್ಮೀರಕ್ಕೆ) ವಾಪಸಾಗಿ ಬಂದು ಈ ಚಿಕ್ಕಪ್ಪನ ಮೇಲೆ ದ್ವೇಷ ಸಾಧಿಸುವುದೇ `ಹೈದರ್’ ಕಥೆಯ ತಿರುಳು. ಈ ಕಥೆ `ಹ್ಯಾಮ್ಲೆಟ್’ ಎಂಬ ದುರಂತ ನಾಟಕವನ್ನೇ ಅಳವಡಿಸಿಕೊಂಡ ಮಹಾನ್ ಕೃತಿ ಎಂಬ ಚರ್ಚೆಗಳು ಈಗಾಗಲೇ ಮಾಧ್ಯಮಗಳಲ್ಲಿ ಹಾರಾಡುತ್ತಿವೆ. ನಿಮಗೆ `ಹ್ಯಾಮ್ಲೆಟ್’ ಕಥೆ ಗೊತ್ತಿಲ್ಲದಿದ್ದರೆ ನಾನೇನೂ ಮಾಡಲಾರೆ. ನನಗೂ ಗೊತ್ತಿರಲಿಲ್ಲ! ಬೇಕಾದರೆ ವಿಕಿಪೀಡಿಯಾ ನೋಡಿ. ಹ್ಯಾಮ್ಲೆಟ್ ಆಧಾರದಲ್ಲಿ ಹಾಲಿವುಡ್ ಸಿನೆಮಾಗಳೂ ಬಂದಿವೆ. ಅವುಗಳಲ್ಲಿ ಮುಖ್ಯವಾಗಿರೋದು `ಹ್ಯಾಮ್ಲೆಟ್’ (೨೦೦೦). ಮೂಲ ಕಥೆಯನ್ನೇ ಆಧರಿಸಿಯೂ ಹಲವು ಸಿನೆಮಾಗಳು ಬಂದಿವೆ ಅನ್ನಿ. ಆದರೆ ಈ ಸಿನೆಮಾಗಳಲ್ಲಿ ಎಲ್ಲೂ ಆಜಾದೀ ಕಾಶ್ಮೀರದಂಥ ಸಾಮಾಜಿಕ ಸನ್ನಿವೇಶವನ್ನು ಎಳೆದು ತಂದ ಉದಾಹರಣೆ ಇಲ್ಲ. `ಇದೇ  ಸೃಜನಶೀಲತೆ ಕಣ್ರೀ’ ಎಂದು ಉದ್ಧರಿಸಿದರೆ ನಾನು ಬೇರೇನೂ ಹೇಳಲಾರೆ.

(ಜಮ್ಮು – ಕಾಶ್ಮೀರ ರಾಜ್ಯವು ಯಾರದ್ದೋ ನಿಯಂತ್ರಣದಲ್ಲಿ ಇತ್ತು. ಅದರ ನಿಯಂತ್ರಕ ಸತ್ತ; ಅದಾದ ಮೇಲೆ ಭಾರತವು ಈ ರಾಜ್ಯವನ್ನು ನಿಯಂತ್ರಿಸ್ತಾ ಇದೆ. ಆದ್ರೆ ಈ ರಾಜ್ಯದ ನಿಜವಾದ ಮಕ್ಕಳು ಈ ಉಗ್ರಗಾಮಿ `ಹೈದರ್‌’ಗಳು. ಆದ್ದರಿಂದ ಅವರೆಲ್ಲ ಈ ರಾಜ್ಯವನ್ನು ಮರಳಿ ಪಡೆಯೋದಕ್ಕೆ ಭಾರತವೆಂಬ ಖಳನ ವಿರುದ್ಧ ಸಮರ ಸಾರಿದ್ದಾರೆ ಎಂಬ ತರ್ಕವನ್ನು ನಾನು ಮಾಡಿದರೆ ಸೃಜನಶೀಲತೆ ಅಂತೀರೋ ಏನೋ ಗೊತ್ತಿಲ್ಲ!)

ಸಿನೆಮಾದ ಮೊದಲರ್ಧ ಇರುವುದೇ ಆಜಾದೀ ಕಾಶ್ಮೀರದ ಕಥೆಯ ನಡುನಡುವೆಯೇ ಈ ಹೈದರ್, ಅವನ ಅಪ್ಪ ಮಾಡುತ್ತಿದ್ದ ಉಗ್ರರ ವೈದ್ಯಕೀಯ ಸೇವೆ, ಇವನ ಚಿಕ್ಕಪ್ಪ ಮಾಡುತ್ತಿದ್ದ ಪೊಲೀಸ್ ಪರ ರಾಜಕೀಯ, ಸೇನಾಪಡೆಯವರು ಗಂಡು – ಹೆಣ್ಣುಗಳೆನ್ನದೆ ಮುಸ್ಲಿಮರನ್ನೆಲ್ಲ ಬಂದೂಕಿನ ಮೊನಚಿನಲ್ಲಿ ಶೋಷಿಸುವ ಕಥೆ. ಕಾಶ್ಮೀರದ ಉಗ್ರಗಾಮಿಗಳು ಇಲ್ಲಿ ನಿಮಗೆ ನೇರವಾಗಿ ಮುಖಾಮುಖಿಯಾಗುತ್ತಾರೆ. ಅವರು ದೇಶದ್ರೋಹಿಗಳೇ, ನೈಜ ಸಮಾಜಪ್ರೇಮಿಗಳೇ ಎನ್ನುವುದನ್ನು ಅವರ ಗನ್ – ಗ್ರೆನೇಡ್‌ಗಳನ್ನು ನೋಡಿಯೇ ತೀರ್ಮಾನಿಸಬಹುದು. ಜೀವವಿರೋಧಿ, ದೇಶವಿರೋಧಿ ಕೃತ್ಯಗಳೇ ಬಂಡವಾಳ ಆಗಿರುವ ಈ ಉಗ್ರರ ಉಪಟಳ ವಿಪರೀತವಾಗಿದ್ದ ೧೯೯೫ರ ದಿನಗಳಲ್ಲಿ ಸೇನಾಪಡೆಯೂ ಅಮಾನವೀಯವಾಗಿ ವರ್ತಿಸಿತು ಎಂಬುದನ್ನು ಹೇಳಲು ವಿಶಾಲ್ ಭಾರದ್ವಾಜ್ ಸುತ್ತುಬಳಸು ದಾರಿಯನ್ನೇನೂ ಬಳಸಿಲ್ಲ. ವೈದ್ಯನ ಮನೆಯನ್ನು ಉಡಾಯಿಸುವ ದೃಶ್ಯವನ್ನು ನೋಡಿದ ಮೇಲೆ ನಿಮಗೆ ಸೇನೆಯ ಬಗ್ಗೆ ವಾಕರಿಕೆ ಬಂದರೆ ಅಚ್ಚರಿಯಿಲ್ಲ.

ಚಿತ್ರದ ಉಳಿದರ್ಧದಲ್ಲಿ ಚಿಕ್ಕಪ್ಪನ ಮೇಲೆ ಸೇಡು ತೀರಿಸಿಕೊಳ್ಳಲು ಹೈದರ್ ಹಿಡಿಯುವ ಮಾರ್ಗ, ಮತ್ತಿತರ ಕಥೆಗಳನ್ನು ಹಾಲಿವುಡ್‌ನ ಅಗತ್ಯಗಳಿಗೆ ತಕ್ಕಂತೆ ತೇಪೆ ಹಾಕಲಾಗಿದೆ. ದ್ವಿತೀಯಾರ್ಧದ ಮೊದಲ ದೃಶ್ಯದಲ್ಲೇ ನೀವು ಹೈದರ್ ಪಾತ್ರಧಾರಿ ಶಾಹಿದ್ ಕಪೂರನ ಡೈಲಾಗ್ ಡೆಲಿವರಿಗೆ ಮಾರುಹೋಗುವುದೂ ನಿಜ. ಆಮೇಲೆ ಅವನ ಅಟಾಟೋಪವೇನು, ಅವನ ನೃತ್ಯವೇನು, ಅವನ ಅಮ್ಮ, ಚಿಕ್ಕಪ್ಪಂದಿರ ಚಿತ್ರವಿಚಿತ್ರ ನಡೆಗಳೇನು – ಇದರಲ್ಲೇ ಚಿತ್ರ ಸಾಗುತ್ತ ಕೊನೆಗೆ ಹ್ಯಾಮ್ಲೆಟ್‌ನ ದುರಂತ ಅಂತ್ಯವನ್ನೇ ತೋರಿಸುತ್ತದೆ. ಎಲ್ಲ ಮುಗಿದ ಮೇಲೆ ಸಿನೆಮಾವು ನಿಮಗೆ ಅಂತಿಮವಾಗಿ ಕಟ್ಟಿಕೊಡುವ ಅನುಭವ (ಸಂದೇಶ ಅಲ್ಲ) ಏನು ಎಂಬ ಪ್ರಶ್ನೆ ಮೂಡಿದರೆ, ನನ್ನನ್ನು ಕೇಳಬೇಡಿ.

ಏಕೆಂದರೆ ನನಗೆ ಮೂಡಿದ ಪ್ರಶ್ನೆಗಳನ್ನು ಈ ಲೇಖನದ ಮೊದಲೇ ಕೇಳಿಬಿಟ್ಟಿದ್ದೇನೆ!

ವಿಲಿಯಂ ಶೇಕ್ಸ್‌ಪಿಯರ್‌ನ ಸಾಹಿತ್ಯಕೃಷಿ ಮೇರು ಗುಣಗಳನ್ನಾಗಲೀ, ವಿಶಾಲ್ ಭಾರದ್ವಾಜ್‌ರ ಕಥೆ ಹೇಳುವ ಪ್ರಭಾವಿ ಸೂತ್ರವನ್ನಾಗಲೀ, ಶಾಹಿದ್ ಕಪೂರ್, ಶ್ರದ್ಧಾ ಕಪೂರ್, ತಬು ಮುಂತಾದವರ ತನ್ಮಯದ ನಟನೆಯನ್ನಾಗಲೀ ನಾನು ಪ್ರಶ್ನಿಸಲಾರೆ. ಅವೆಲ್ಲವೂ ಅತ್ಯುತ್ತಮವೇ. ಆದರೆ ಒಟ್ಟಾರೆ ಈ ಸಿನೆಮಾ ಏನು ಹೇಳಹೊರಟಿದೆ, ಅಥವಾ ಪ್ರೇಕ್ಷಕನಲ್ಲಿ ಯಾವ ಭಾವಗಳನ್ನು ಮೂಡಿಸುತ್ತದೆ ಎಂಬ ಪ್ರಶ್ನೆ ನನ್ನನ್ನು ಪದೇ ಪದೇ ಕಾಡಿದೆ.

ಯಾವುದೇ ದೇಶ ಮಾಡಿದ ತಪ್ಪನ್ನು ಆ ದೇಶದ ಪ್ರಜೆಯೊಬ್ಬ ಧೈರ್ಯದಿಂದ ಪ್ರಶ್ನಿಸಬೇಕು, ಅದೇ ನೈಜ ವಿಶ್ವ ಮಾನವತೆ  ಎಂದು ಇತ್ತೀಚೆಗಷ್ಟೆ ನಿಧನರಾದ ಡಾ|| ಯು ಆರ್ ಅನಂತಮೂರ್ತಿ ಪ್ರತಿಪಾದಿಸಿದ್ದರು. ಈ ಗುಣವನ್ನೇ ವಿಶಾಲ್ ಭಾರದ್ವಾಜ್ `ಹೈದರ್’ ಮೂಲಕ ಪ್ರಕಟಿಸಿದ್ದಾರೆ. ೧೯೯೫ರಲ್ಲಿ ನಡೆದ ಸೇನಾ ಪಡೆಗಳ ದೌರ್ಜನ್ಯವನ್ನು ನಾವೆಲ್ಲರೂ ರಜತ ಪರದೆಯ ಮೇಲೆ ನೋಡಿ,  ಅನುಭವಿಸಿ ವಿರೋಧಿಸಬೇಕು ಎಂಬುದೇ ಅವರ ಗುರಿಯಾಗಿದೆ. ಅದಕ್ಕಾಗಿ ಶೇಕ್ಸ್‌ಪಿಯರ್‌ನ `ಹ್ಯಾಮ್ಲೆಟ್’ ಕೂಡಾ ಬಲಿಯಾಗಿದೆ. ಸೇನಾಪಡೆಯ ದುರುಳತೆಯನ್ನು ಬಿಂಬಿಸಲು ಶೇಕ್ಸ್‌ಪಿಯರ್‌ನನ್ನು ಎಳೆದುತರುವ ಅಗತ್ಯವೇ ಇರಲಿಲ್ಲ. ಏಕೆಂದರೆ ಉಗ್ರರನ್ನು ಬೆಂಬಲಿಸುವ ವೈದ್ಯ, ಹೈದರ್‌ನನ್ನು ಸೇಡು ತೀರಿಸಿಕೊಳ್ಳಲು ಕುಮ್ಮಕ್ಕು ನೀಡುವ ಉಗ್ರಗಾಮಿಗಳು, ಸ್ಮಶಾನದಲ್ಲಿ ಹಾಡಿ ಕುಣಿದ ಮೇಲೆ ಸ್ಟೆನ್‌ಗನ್ ಹಿಡಿವ ಮುದುಕರು, – ಎಲ್ಲರೂ ಹ್ಯಾಮ್ಲೆಟ್ ಕಥೆಗಾಗಿ ಕೇವಲ ಕುಟುಂಬದ ಸೇಡಿನ ಕಥೆಗೆ ಪಾತ್ರಗಳಾಗುವಂತೆ ಮಾಡಿ ಅವರ ಘನ ಉದ್ದೇಶಗಳನ್ನೆಲ್ಲ ಒಂದು ಕುಟುಂಬದ ಸಂಬಂಧ – ಸೇಡಿನ ಕಥೆಗಾಗಿ ಬಳಸಲಾಗಿದೆ. ಇನ್ನೊಂದೆಡೆ ಸೇನೆಗೆ ಮಾಹಿತಿ ನೀಡುವ ವ್ಯಕ್ತಿಗಳನ್ನು ಬಫೂನ್‌ಗಳಂತೆ ತೋರಿಸಿದ್ದನ್ನೂ ನಾವು ನೋಡಬಹುದು. ನೀವು ಇನ್ನೂ ಸೂಕ್ಷ್ಮವಾಗಿ ಗಮನಿಸಿದರೆ, ಸೇನಾಪಡೆಗಳ ಅಧಿಕಾರಿಗಳೆಲ್ಲ ಹಿಂದುಗಳೇ ಆಗಿರುತ್ತಾರೆ; ಪೊಲೀಸರು ಸಾಮಾನ್ಯವಾಗಿ ಡಬಲ್ ಏಜೆಂಟ್ ಥರ ವರ್ತಿಸುವ ಮುಸಲ್ಮಾನರಾಗಿರುತ್ತಾರೆ.

ಕಾಶ್ಮೀರಿ ಪಂಡಿತರು? ಯಾರ್ರೀ ಅವರು? ಎಲ್ಲಿದ್ದಾರೆ? ನಿಜಕ್ಕೂ ಅವರು ಕಾಶ್ಮೀರದಲ್ಲಿ ಇದ್ರಾ? ೧೯೯೫ರಲ್ಲಿ, ಈ ಸಿನೆಮಾ ಪ್ರಕಾರ ಪಂಡಿತರು ಇರಲೇ ಇಲ್ಲ. ಯಾವ ಸನ್ನಿವೇಶದಲ್ಲೂ ಅವರು ಕುಟುಂಬವಾಗಿಯಾಗಲೀ, ಸಮುದಾಯವಾಗಿ ಆಗಲೀ ಕಾಣುವುದಿಲ್ಲ. ಅವರೆಲ್ಲರನ್ನೂ ಅಷ್ಟು ಹೊತ್ತಿಗೆ ಅಟ್ಟಾಡಿಸಿ ಓಡಿಸಿದ ಬಗ್ಗೆ ನೀವು ರಾಹುಲ್ ಪಂಡಿತ ಬರೆದ `ಅವರ್‌ಮೂನ್ ಹ್ಯಾಸ್ ಬ್ಲಡ್ ಕ್ಲಾಟ್ಸ್: ದಿ ಎಕ್ಸೋಡಸ್ ಆಫ್ ಕಾಶ್ಮೀರಿ ಪಂಡಿತ್ಸ್’ ಪುಸ್ತಕ ಓದಬೇಕು. (ನಿಮ್ಮ ಮಾಹಿತಿಗೆ: ರಾಹುಲ್ ಪಂಡಿತ ಒಬ್ಬ ಎಡಪಂಥೀಯ ನಿಲುವುಗಳುಳ್ಳ ಪತ್ರಕರ್ತ).

`ಹೈದರ್’ನಲ್ಲಿ ಕಾಣುವುದೆಲ್ಲ ಆಜಾದೀ ಕಾಶ್ಮೀರ ಬೇಡಿಕೆ ಇಡುವ ಮುಸ್ಲಿಮರು.

೧೯೯೫ರಲ್ಲಿ ಇಂಥ ಕಥೆಯೊಂದೇ ನಡೆಯಿತು ಎಂಬ ಭ್ರಮೆಯನ್ನೂ ಈ ಸಿನೆಮಾ ಹುಟ್ಟಿಸಿದರೆ ಯಾರೂ ಏನೂ ಮಾಡಲಾಗದು. ಅದೇ ವರ್ಷ ನೂರಾರು ಸೈನಿಕರು ಉಗ್ರರಿಗೆ ಬಲಿಯಾಗಿದ್ದು, ಚಾರ್-ಇ- ಷರೀಫ್ ಒಳಗೆ ಮಸ್ತ್ ಗುಲ್ ಎಂಬ ಉಗ್ರ ಅಡಗಿ ಕೂತಿದ್ದು, ಆರು ವಿದೇಶಿ ಪ್ರವಾಸಿಗರಲ್ಲಿ ಒಬ್ಬನ ತಲೆ ಕಡಿದಿದ್ದು, ಇನ್ನು ನಾಲ್ವರು ಈಗಲೂ ನಾಪತ್ತೆಯಾಗಿರುವುದು, ಕಾಶ್ಮೀರಿ  ಪಂಡಿತರ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿದ್ದು, – ಉಹು. ಸಿನೆಮಾ ನೋಡುವವರಿಗೆ ಡಿಸ್ಟ್ರಾಕ್ಷನ್ ಆಗಿಬಿಟ್ಟರೆ ಆಜಾದೀ ಕಾಶ್ಮೀರದ ಬೇಡಿಕೆಯೇ ದುರ್ಬಲ ಆಗಿಬಿಡುತ್ತೆ ತಾನೆ?

ಆದ್ರೂ ವಿಶಾಲ್ ಭಾರದ್ವಾಜ್ ಹೃದಯ ವಿಶಾಲವಾಗಿದೆ ಎಂದು ಗೊತ್ತಾಗಲೆಂದೇ ಎಂಡ್ ಕ್ರೆಡಿಟ್‌ನಲ್ಲಿ  ಕಾಶ್ಮೀರ ರಾಜ್ಯದ ಪ್ರವಾಸೋದ್ಯಮ ಬೆಳೆದಿದೆ ಎಂದೂ, ಇತ್ತೀಚೆಗೆ ಭಾರತೀಯ ಸೇನಾಪಡೆಯವರು ಜಮ್ಮು – ಕಾಶ್ಮೀರದ ನೆರೆ ಸಂಕಷ್ಟವನ್ನು ತುಂಬಾ ಚೆನ್ನಾಗಿ ನಿಭಾಯಿಸಿದರು ಎಂದೂ ನಾಲ್ಕು ಸಾಲುಗಳಲ್ಲಿ ಹಾಡಿ ಹೊಗಳಲಾಗಿದೆ. ೧೬೪ ನಿಮಿಷಗಳ ಸಿನೆಮಾದಲ್ಲಿ ಒಟ್ಟು ೨೦ ಸೆಕೆಂಡುಗಳ ಕಾಲ ಭಾರತದ ಸೇನೆ ಮತ್ತು ಪಂಡಿತರ ಸಂತ್ರಸ್ತ ಸ್ಥಿತಿಯನ್ನು ಹಿಡಿದಿಡಲಾಗಿದೆ ಎಂದಮೇಲೆ ನೀವು ವಿಶಾಲ್ ಭಾರದ್ವಾಜ್‌ರನ್ನು ಟೀಕಿಸಲು ಸಾಧ್ಯವೇ ಇಲ್ಲ!

ಸೆನ್ಸಾರ್ ಮಂಡಳಿಯವರೇ ಈ ಚಿತ್ರಕ್ಕೆ ಸರ್ಟಿಫಿಕೇಟ್ ಕೊಟ್ಟ ಮೇಲೆ ನನ್ನ ಮಾತೇಕೆ ಇಷ್ಟೆಲ್ಲ ಕಟುವಾಗಿರಬೇಕು ಎಂದು ನೀವು ಕೇಳಬಹುದು. ಈ ದೇಶದಲ್ಲಿ ಜೀವವಿರೋಧಿ ನಕ್ಸಲಿಸಂನ್ನೇ ವೈಭವೀಕರಿಸುವ ಪತ್ರಿಕೆಗೇ ಭಾರತದ ರಿಜಿಸ್ಟ್ರಾರ್ ಆಫ್ ನ್ಯೂಸ್‌ಪೇಪರ್ಸ್‌ನಿಂದ ನೋಂದಾವಣೆ ಸಿಕ್ಕಿತ್ತು ಎಂದಮೇಲೆ ಈ ಸಿನೆಮಾಗೂ ಸರ್ಟಿಫಿಕೇಟ್ ಸಿಕ್ಕಿದ್ದು ದೊಡ್ಡದಲ್ಲ ಬಿಡಿ.

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸೃಜನಶೀಲತೆಯ ಹೆಸರಿನಲ್ಲಿ ಇಂಥದಕ್ಕೆಲ್ಲ ಸರ್ಟಿಫಿಕೇಟ್ ಸಿಗಬೇಕಾದರೆ `ಹಲ್ಕಟ್‌ಗಿರಿ ಸ್ಟೋರಿಗೆ ಹೈದರ್ರೇ ಯೋಗ್ಯ’ ಎಂದು ಬರೆದರೆ ಅಪರಾಧ ಆಗಲಿಕ್ಕಿಲ್ಲ ಎಂಬ ಭಯಂಕರ ಆತ್ಮವಿಶ್ವಾಸ ನನಗಿದೆ.

ಈ ಸಿನೆಮಾ ನೋಡಿದ್ದರಿಂದ ನನ್ನ ಸೃಜನಶೀಲ ಮನಸ್ಸು ಇನ್ನಷ್ಟು ವಿಕಾರವಾಗಿ ಬೆಳೆದಿದೆ. ಪೋಲಿಶ್ ಸೇನಾಪಡೆಯನ್ನೇ ಸ್ಟಾಲಿನ್ ನಿಷ್ಠ ಅಧಿಕಾರಿಗಳು ನಿರ್ನಾಮ ಮಾಡುವ ನರಮೇಧದ ದೃಶ್ಯಗಳಿರುವ `ಕಟಿನ್’, ಜಪಾನ್ ಸೈನಿಕರು ಚೀನಾದ ಜನರ ರುಂಡವನ್ನೇ ಕತ್ತರಿಸಿ ಮಾಲೆಯಾಗಿ ನೇತುಹಾಕುವ ದೃಶ್ಯಗಳಿರುವ `ನಾನ್‌ಜಿಂಗ್ ನಾನ್‌ಜಿಂಗ್’, – ಇಂಥ ಹಲವು ಘೋರ ನರಮೇಧಗಳ ಸಿನೆಮಾವನ್ನೂ ನೋಡಿದ್ದೇನೆ. ಒಂದು ದೇಶದ ಜನರನ್ನು ಇನ್ನೊಂದು ದೇಶದ ಸೈನಿಕರು ಕೊಂದು ಹಾಕಿದ ಅಸಂಖ್ಯ ಸಿನೆಮಾಗಳು ಬಂದುಹೋಗಿವೆ. ದೇಶ ಎಂಬ ರಾಜಕೀಯ – ಭೌಗೋಳಿಕ ವ್ಯವಸ್ಥೆಯನ್ನು ಒಪ್ಪಿಕೊಂಡ ಮೇಲೆ ಇಂಥ ನರಮೇಧಗಳು ನಡೆಯುವುದು ದೇಶಗಳ ಅಗತ್ಯಗಳಾಗಿರಬಹುದೇನೋ. ಆದರೆ ಒಂದು ದೇಶದ ಭೌಗೋಳಿಕ ಸಾರ್ವಭೌಮತ್ವವನ್ನು ಪ್ರಶ್ನಿಸಿ ಅದೇ ದೇಶದ ಯುವಕರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟಿ ಸೈನಿಕರ ವಧೆಗೆ ಕುಮ್ಮಕ್ಕು ನೀಡಿದ ಕೆಲವೇ ಪ್ರದೇಶಗಳಲ್ಲಿ  ಜಮ್ಮು- ಕಾಶ್ಮೀರವೂ ಒಂದು. ಇಂಥ ಸಂಕೀರ್ಣ ಸನ್ನಿವೇಶವನ್ನು ಆ ದೇಶದ ಜನರ ಮುಂದೆ ಇಡುವಾಗ ಸೃಜನಶೀಲತೆಯೊಂದೇ ನಮ್ಮ ಪಿತ್ಥದಲ್ಲಿ ತುಂಬಿರಬಾರದು; ವಾಸ್ತವದ ಹಲವು ಮಗ್ಗುಲುಗಳನ್ನೂ ತೋರುವ ಕೆಲಸ ನಡೆಯಬೇಕು ಎಂಬುದು ನನ್ನ ನಿರೀಕ್ಷೆ.

ಹದಿನಾರನೇ ಶತಮಾನದ ನಾಟಕವನ್ನು ಇಪ್ಪತ್ತನೇ ಶತಮಾನದಲ್ಲಿ ನಡೆದ ಘಟನಾವಳಿಗಳಿಗೆ ತಗುಲಿಸಿ, ಇಪ್ಪತ್ತೊಂದನೇ ಶತಮಾನದ ಯುವ ಮನಸ್ಸುಗಳಲ್ಲಿ ಹುಳಿ ಹಿಂಡುವ ಕೆಲಸ ಈಗ ಬೇಕಿತ್ತೆ? ಇದು ಸೃಜನಶೀಲತೆಯೆ? ಇದು ಸಾಮಾಜಿಕ ಹೊಣೆಗಾರಿಕೆಯೆ? ಕೋಟಿಗಟ್ಟಳೆ ಹಣ ಬಾಚುವ ಬಾಲಿವುಡ್ ಮಾರುಕಟ್ಟೆಯ ಮಸಾಲೆ ಸರಕಿಗಾಗಿ ಈ ಕಥೆ ಸಿನೆಮಾ ಆಗಬೇಕಿತ್ತೆ? ಯಾಜಿದಿ ಸಮುದಾಯದ ಹೆಣ್ಣುಗಳನ್ನು ಗುಲಾಮಿಗಿರಿಗೆ ತಳ್ಳಿದ್ದೇವೆ ಎಂದು ಘೋಷಿಸಿರುವ, ಪಶ್ಚಿಮದ ಪ್ರಜೆಗಳ ರುಂಡ ಕತ್ತರಿಸಿ ವಿಡಿಯೋ ಮಾಡುವ ಐಎಸ್‌ಐಎಸ್‌ನ ಬೆಂಬಲಿಗರು ಅಲ್ಲಲ್ಲಿ ತಲೆ ಎತ್ತಿರುವ ಈ ಸಂದರ್ಭದಲ್ಲಿ ನಾವು ನಮ್ಮ ಸೇನೆಯನ್ನೇ ಹೀಯಾಳಿಸುವ ಮನೋಭಾವ ಬೆಳೆಸಿಕೊಳ್ಳಬೇಕೆ?

ನನ್ನೊಳಗೆ ವಿಶ್ವಮಾನವತೆಯೇ ಇಲ್ಲ ಎಂದು ನೀವು ಜರಿದರೆ… ನಿಜ.

ಕಾರ್ಯ – ಕಾರಣ ಸಂಬಂಧಗಳನ್ನೇ ಧಿಕ್ಕರಿಸಿ, ತನಗೆ ಬೇಕಾದ ಮಾಹಿತಿಯನ್ನಷ್ಟೇ ಸೃಜನಶೀಲವಾಗಿ ಹಣೆಯುವ ಹೀನ ಬುದ್ಧಿವಂತಿಕೆಯನ್ನು ನಾನು ಖಂಡಿತ ಜರೆಯುತ್ತೇನೆ.

ಭಾರತ – ಪಾಕ್ ಸಮಾಜಕ್ಕೆ ಹೇಳಲು ಬೇಕಾದಷ್ಟು ಬೇರೆ ವಿಷಯಗಳಿವೆ. ಗುಂಡು ಹೊಡೆಸಿಕೊಂಡು ಬದುಕಿ ಮೇಲೆದ್ದ ಮಲಾಲಾ ಇದ್ದಾಳೆ. ಅವಳಂಥ ಸಾವಿರಾರು ಹೆಣ್ಣುಮಕ್ಕಳಿಗಾಗಿ ಶಾಲೆ ಕಟ್ಟಿದ ಗ್ರೆಗ್ ಮಾರ್ಟೆನ್‌ಸನ್ ಇದ್ದಾರೆ….

`ಹೈದರ್‌’ನಂಥ  ದರಿದ್ರ  `ಸಿನೆಮಾ ನಾಟಕ’ದ ಪಾತ್ರಗಳ ಕಟ್ಟುಕಥೆಗಿಂತ ಇಂಥವರ ಕಥೆಗಳೇ ಎಷ್ಟೋ ವಾಸಿ.

 

Leave a Reply