ಸಾಜ್ ಮತ್ತು ಏಕ್ ನಯಾ ಸಾಜ್

ಹಿಂದುಸ್ತಾನಿ ಸಂಗೀತದ ಆಲ್ಬಮ್‌ಗಳ ಹುಡುಕಾಟದಲ್ಲಿ ನನಗೆ ಕೆಲವು ತಿಂಗಳುಗಳ ಹಿಂದೆ ಸಿಕ್ಕಿದ್ದು ‘ಸಾಜ್’ ಎಂಬ ಕ್ಯಾಸೆಟ್‌ಗಳ ಸಂಗ್ರಹ. ಅಂದರೆ ಈ ಕ್ಯಾಸೆಟ್‌ಗಳನ್ನು ಯಾರೋ ಮಹಾನುಭಾವರು ಗಣಕಕ್ಕೆ ರೂಪಾಂತರಿಸಿ ಎಂಪಿ೩ ಹಾಡುಗಳನ್ನಾಗಿ ಮಾಡಿ ಟೊರೆಂಟ್ ಫೇಲನ್ನೂ ಸೃಜಿಸಿ ಕೊಟ್ಟಿದ್ದಾರೆ. ಕಲಿಯುವುದಕ್ಕೆ ಕೊಂಚ ಕದಿಯಬಹುದು ಎಂಬ ಫಿಲಾಸಫಿಯನ್ನು ಅಳವಡಿಸಿಕೊಂಡಿರುವ ನಾನು ಈ ಫೈಲುಗಳನ್ನು ಕದ್ದೆ. ಎರಡು ದಿನಗಳ ನಿರಂತರ ಯತ್ನದ ನಂತರ ಸಿಕ್ಕ ಈ ಕ್ಯಾಸೆಟ್‌ಗಳ ಸಂಗ್ರಹವನ್ನು ಕೇಳುವುದಕ್ಕೆ ಹತ್ತಾರು ದಿನ ಬೇಕು. ನಗರದ ಗದ್ದಲದ ನಡುವೆ ಈ ಸಾಜ್‌ನ ಇಂಪನ್ನು ಸವಿಯುವುದೇ ಕಷ್ಟ. ಆದರೂ ನಾನು ಪಟ್ಟು ಬಿಡದೆ ಕೇಳಿದೆ. ನಿಜಕ್ಕೂ ಸಾಜ್ ಒಂದು ವಿಶಿಷ್ಟ ಅನುಭವ ಕೊಡುತ್ತೆ. 

ಅದರಲ್ಲೂ ಈ ಸಾಜ್‌ನ ವಿಶೇಷ ಅಂದ್ರೆ ಎಲ್ಲ ಹಿಂದುಸ್ತಾನಿ ಸಂಗೀತ ದಿಗ್ಗಜರು ಹಾಡಿರುವ, ನುಡಿಸಿರುವ ಅತಿ ಅಪರೂಪದ ಸಂಗ್ರಹ ಇಲ್ಲಿದೆ. ಸಂತೂರ್, ತಬಲಾ, ಬಾನ್ಸುರಿ, ಸಿತಾರ್, ಪಿಟೀಲು, – ಹೀಗೆ ೧.೭ ಗಿಗಾಬೈಟ್‌ಗಳಲ್ಲಿ ಇರೋ ಸಂಗ್ರಹ ನನ್ನ ಮಟ್ಟಿಗೆ ಕಲೆಕ್ಟರ್‍ಸ್ ಎಡಿಶನ್. ನೀವು ಎಷ್ಟು ಸಲ ಬೇಕಾದ್ರೂ ಇವನ್ನು ಕೇಳ್ತಾ ಇರಬಹುದು.

ಇದು ಸಾಜ್ ಕಥೆ. ಈ ಸಾಜ್ ಸರಣಿಯಲ್ಲಿ ಇರೋ ಫೈಲುಗಳ ಪಟ್ಟಿಯೂ ಇರುವ ಟೊರೆಂಟ್ ಕೊಂಡಿಯನ್ನು ಇಲ್ಲಿ ಕೊಟ್ಟಿದೇನೆ. 

ಇದು ಸಾಜ್ ಕಥೆ. ಆಯ್ತು. ಈಗ ಏಕ್ ನಯಾ ಸಾಜ್ ಕಥೆ ಕೇಳಿ.

 

 

 

 

ನನ್ನ ಸಂಗ್ರಹದಲ್ಲಿ ‘ಬೇಲಾ ಬಾಹರ್: ಏಕ್ ನಯಾ ಸಾಜ್’ ಅನ್ನೋ ಕ್ಯಾಸೆಟ್ಟಿದೆ. ಇದನ್ನು ಹತ್ತಾರು ಸಲ ಕೇಳಿದ್ದೇನೆ. ಒಂಥರ ಅನೂಹ್ಯ ಭಾವಗಳನ್ನು ಮೂಡಿಸೋ ಈ ಕ್ಯಾಸೆಟ್ ಈಗ ನನ್ನೆದುರು ಇದೆ. ಮರುಭೂಮಿಯಲ್ಲಿ ಕಾಣೋ ಒಂದೇ ಮರದ ಕೆಳಗೆ ಕೂತು ಕೇಳಿದ ಥರ ಅನುಭವ ನನಗಾಗುತ್ತೆ. ಒಂದು ಏಕಾಂತದಲ್ಲಿ, ಒಂದು ವಿಷಾದದ ಗಳಿಗೆಯನ್ನು ಅನುಭವಿಸಿದರೂ ಶಾಂತತೆಯನ್ನು ಉಸಿರಾಡೋ ಹಾಗೆ ಅನ್ನಿಸುತ್ತೆ. ಅಥವಾ….. ಮಲೆನಾಡಿನ ಯಾವುದೋ ಕಾಡಿನೊಳಗೆ ಹಠಾತ್ತನೆ ಕಾಣುವ ಬಯಲಿನ ಪಟ್ಟಿಯಲ್ಲಿ ಬೆಳದಿಂಗಳಲ್ಲಿ ಕೂತು ಕೇಳೋ ಪದ ಇದಿರಬಹದು ಅನ್ಸುತ್ತೆ. 

 

 

 

ಈ ಗಳಿಗೆ ನಯಾ ಸಾಜ್‌ನ ವಾದ್ಯ – ಬೇಲಾ ಬಾಹರ್ – ಕತೃವಿನ ಬಗ್ಗೆ ಹುಡುಕಾಟ ನಡೆಸಿದೆ. ಬಾಬುಲಾಲ್ ಗಂಧರ್ವ ಎಂಬ ಮಧ್ಯಪ್ರದೇಶದ ಕಲಾವಿದರು ವಿಶಿಷ್ಟವಾಗಿ ರೂಪಿಸಿದ ಈ ಬೇಲಾ ಬಾಹರ್ ಒಂದು ರೀತಿಯಲ್ಲಿ ಪಿಟೀಲು ಮತ್ತು ಸಾರಂಗಿಯ ಸಮ್ಮಿಶ್ರಣ. ಹದವಾಗಿ, ಮೆದುವಾಗಿ ಹೊಡುವ ನಾದವನ್ನು ನೀವು ಅನುಭವಿಸಿಯೇ ತಿಳಿಯಬೇಕು. 

 

 

 

 

 

 

 

ಬಾಬುಬಾಲ್ ಗಂಧರ್ವ ಅವರ ಮಗ ನವೀನ್ ಗಂಧರ್ವ ಬೇಲಾ ಬಾಹರ್‌ನಲ್ಲಿ ಪಳಗಿದ್ದಾರೆ. ನಾನು ಬಾಬುಲಾಲ್‌ರ ಕೃತಿಗಳನ್ನು ಹುಡುಕುತ್ತ ನವೀನ್‌ರ ಬ್ಲಾಗ್‌ಸ್ಪಾಟ್‌ಗೆ ಬಂದೆ. ಅಲ್ಲಿಂದ ಚಂದಿರಾಮಣಿ ಅನ್ನೋ ಜಾಲತಾಣವನ್ನೂ ಪ್ರವೇಶಿಸಿದೆ. ಇಲ್ಲಿ ನವೀನ್ ಗಂಧರ್ವರವರ ಬೇಲಾಬಾಹರ್ ಲಾಸ್ಯವಿದೆ. ಈ ಪುಟ್ಟ ಲೇಖನವನ್ನು ಬರೆಯೋ ಹೊತ್ತು ಅದರಲ್ಲಿದ್ದ ಆರು ಕಡತಗಳನ್ನೂ ಡೌನ್‌ಲೋಡ್ ಮಾಡುತ್ತಿದ್ದೇನೆ. ಅಪ್ಪನಂತೆ ಮಗನೂ ನನಗೆ ವಿಷಾದಗಾನದ ಅನುಭವ ನೀಡಬಲ್ಲ ಅಂದುಕೊಳ್ಳುತ್ತೇನೆ. ವಿಷಾದವನ್ನೂ ಸುಖವಾಗಿ ಅನುಭವಿಸುವ ಸಾಧ್ಯತೆಯನ್ನು ಈ ಕ್ಯಾಸೆಟ್ ಅನಾವರಣಗೊಳಿಸಿದೆ. 

ನಾಲ್ಕು ದಶಕಗಳ ಹಿಂದೆ ಬಂದ ಸಾಜ್ ಮತ್ತು ೧೯೯೯ರಲ್ಲಿ ಬಂದ ಏಕ್ ನಯಾ ಸಾಜ್-  ಎರಡೂ ನನ್ನ ಅತಿಪ್ರಿಯ ಆಲ್ಬಮ್‌ಗಳು. ಯಾವುದೋ ವಿಷಾದಗಾನ ಎದೆಯ ತೀಡಿದಾಗ ಸಖಿಯಂತೆ ಬಂದು, ಮೆಲುವಾಗಿ ಭುಜಹಿಡಿಯುವ ಪದಗಳು. ಅವುಗಳನ್ನು, ಕಂಪ್ಯೂಟರಿನಲ್ಲಿ, ಕಾರಿನಲ್ಲಿ, ಹೆಡ್‌ಫೋನಿನಲ್ಲಿ ಕೇಳುವ ಸುಖ ನಿಮಗೂ ದಕ್ಕಲಿ ಎಂದು ಬಯಸುವೆ.

ಹ್ಞಾ…. ಡೌನ್‌ಲೋಡ್ ಮಾಡಿದ್ದನ್ನು ಕೇಳಿದೆ. ಕಂಪ್ರೆಶನ್ ಸರಿಯಾಗಿಲ್ಲ; ಹೀಗಾಗಿ ಅಂಥ ಗುಣಮಟ್ಟವೇನೂ ಇಲ್ಲ. ಆದರೆ ವಾದ್ಯದ ಝಲಕ್ ಅನುಭವಿಸಲು ಅಡ್ಡಿಯಿಲ್ಲ.

Leave a Reply